21ರಂದು ಜಾನಪದ ಸಂಭ್ರಮ, ವಿಚಾರಗೋಷ್ಠಿ
ರಾಯಚೂರು: ನಗರದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಡಿ.21ರಂದು ಜಿಲ್ಲೆಯ ಸಾಹಿತಿಗಳ ಪುಸ್ತಕ ಮಾರಾಟ ಮತ್ತು ಪ್ರದರ್ಶನ, ಕನ್ನಡ ಸಾಹಿತ್ಯದ ಅಳಿವು-ಉಳಿವು ಮತ್ತು ಶಿಕ್ಷಣ ಹಾಗೂ ಸಾಹಿತ್ಯ ಕುರಿತು ವಿಚಾರಗೋಷ್ಠಿ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ. ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರತಿಷ್ಠಾನದ ಅಧ್ಯಕ್ಷ ರಾಮ ಚಂದ್ರಪ್ಪ, ಡಿ.21ರಂದು ಬೆಳಗ್ಗೆ 10ಕ್ಕೆ ನಗರದ ರಂಗಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಸಿಂಧನೂರಿನ ಹಿರಿಯ ಸಾಹಿತಿ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಉದ್ಘಾಟಿಸಲಿದ್ದಾರೆಂದು ತಿಳಿಸಿದರು. ಅಧ್ಯಕ್ಷತೆಯನ್ನು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ವಹಿಸುವರು. ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಪಾಲ್ಗೊಳ್ಳಲಿದ್ದು, ಭಗತ್ ರಾಜ್ ನಿಜಾ ಮಕರ್ ಆಶಯ ನುಡಿಯಲಿದ್ದಾರೆಂದರು. ಕನ್ನಡ ಸಾಹಿತ್ಯದ ಅಳಿವು ಉಳಿವು ಎಂಬ ವಿಷಯದ ಕುರಿತು ಗುಲ್ಬರ್ಗದ ಹಿರಿಯ ಸಾಹಿತಿ ಸೂಗಯ್ಯಸ್ವಾಮಿ ಹಿರೇಮಠ ವಿಷಯ ಮಂಡಿಸಲಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯದ ಕುರಿತು ರಾಮಣ್ಣ ಹವಳೆ ವಿಷಯ ಮಂಡಿಸುವರು. ಶಾಸಕ ತಿಪ್ಪರಾಜು ಹವಾಲ್ದಾರ್, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ಅಮರನಾಥ ಪಾಟೀಲ್, ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಪಾಲ್ಗೊಳ್ಳಲಿದ್ದಾರೆ.