ಅಕ್ಕಿ ಗಿರಣಿಗಳ ಮುಷ್ಕರ
ಕ.ಪ್ರ. ವಾರ್ತೆ ರಾಯಚೂರು ಡಿ.18
ರಾಜ್ಯ ಸರ್ಕಾರದ ಲೆವಿ ಅಕ್ಕಿ ಅವೈಜ್ಞಾನಿಕವಾಗಿದೆ. ಲೆವಿ ಅಕ್ಕಿ ನೀತಿ ಕೈಬಿಡುವಂತೆ ಆಗ್ರಹಿಸಿ ಹಾಗೂ ಗಿರಣಿಗಳಲ್ಲಿ ದುಡಿಯುವ ಕಾರ್ಮಿಕರ ಹಿತಕಾಯುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಬುಧವಾರ ಅಕ್ಕಿ ಗಿರಣಿಗಳ ಕೂಲಿ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಂಜ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದ ಸಾವಿರಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಅಕ್ಕಿ ಗಿರಣಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ಸದ್ಯದ ಅಕ್ಕಿ ಗಿರಣಿಗಳ ಮುಷ್ಕರದಿಂದ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ಧಿಕ್ಕಾರ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳು ಮುಚ್ಚಿದ್ದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಗಿರಣಿಗಳ ಮಾಲೀಕರು ಸರ್ಕಾರದ ಲೆವಿ ಅಕ್ಕಿ ನೀತಿ ವಿರೋಧಿಸಿ ನಡೆಸುತ್ತಿರುವ ಮುಷ್ಕರದಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದ ಕೂಲಿ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗಿರಣಿಗಳು ಮುಷ್ಕರದ ಹಿನ್ನೆಲೆ ಬಂದ್ ಆಗಿದ್ದು, ಅದರಿಂದ ಲಾರಿಗಳ ಚಾಲಕರು, ಕೂಲಿ ಕಾರ್ಮಿಕರ ಜೀವನ ನಿರ್ವಹಣೆಗೆ ಬೇರೆ ಆದಾಯವಿಲ್ಲದೇ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಕೂಲಿ ಕಾರ್ಮಿಕರು ಮತ್ತು ಅವರ ಕುಟುಂಬಗಳು ಸರ್ಕಾರದ ನೀತಿಯಿಂದಾಗಿ ತೊಂದರೆಗೆ ಸಿಲುಕಿವೆ ಎಂದು ದೂರಿದರು.
ವಹಿವಾಟಿನಲ್ಲಿ ತೀವ್ರ ಕುಸಿತ: ಅಕ್ಕಿ ಗಿರಣಿಗಳಿಂದ ಅಕ್ಕಿಯನ್ನು ಕೊಂಡೊಯ್ಯುತ್ತಿದ್ದ ಲಾರಿಗಳ ಸಂಚಾರವೂ ಸ್ಥಗಿತಗೊಂಡಿದ್ದು, ಲಾರಿ ಮಾಲಿಕರು ನಷ್ಟ ಅನುಭವಿಸುವಂತಾಗಿದೆ. ಕಾರಣ ರಾಜ್ಯ ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚಿಸಲು ಅಕ್ಕಿ ಗಿರಣಿಗಳ ಮಾಲಿಕರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಲೆವಿ ಅಕ್ಕಿ ನೀತಿಯ ಕುರಿತು ಗಿರಣಿಗಳ ಮಾಲೀಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಿ ಅಕ್ಕಿ ಗಿರಣಿಗಳ ಪುನಾರಂಭಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಕೂಲಿ ಕಾರ್ಮಿಕರು ಮತ್ತವರ ಕುಟುಂಬಗಳನ್ನು ಸಮಸ್ಯೆಯಿಂದ ಪಾರು ಮಾಡಬೇಕೆಂದು ಒತ್ತಾಯಿಸಿದರು.
ಸುಮಾರು 400 ಲಾರಿಗಳ ಸಂಚಾರ ಸ್ಥಗಿತ: ಸದ್ಯದ ಮುಷ್ಕರದಿಂದಾಗಿ ಜಿಲ್ಲೆಯಿಂದ ಸಂಚರಿಸುತ್ತಿದ್ದ 300ರಿಂದ 450 ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ವಹಿವಾಟಿನಲ್ಲಿ ತೀವ್ರ ಕುಸಿತವಾಗಿದೆ. ಲಾರಿಗಳ ಮಾಲೀಕರು ನಷ್ಟಕ್ಕೆ ಸಿಲುಕಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕು. ಲಾರಿಗಳ ಮಾಲೀಕರನ್ನು ಹೆಚ್ಚಿನ ನಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಎಸ್. ಈರಣ್ಣ(ಲಾಲಪ್ಪ), ಲಾರಿ ಮಾಲಿಕರ ಸಂಘದ ಅಧ್ಯಕ್ಷ ಗಿರಿಯಣ್ಣ, ಶಿವಶರಣಪ್ಪ, ಚಂದ್ರಶೇಖರ್, ಎಂ.ಡಿ. ಇಕ್ಬಾಲ್, ಎಚ್.ಎಂ. ಶೇಖರ್, ಸುಭಾಷ್ ಬಲ್ಲಿಗೇರಿ, ಸತ್ಯರೆಡ್ಡಿ, ನಜೀರ್ ಸೇರಿ ಅನೇಕರಿದ್ದರು. ಸಾವಿರಾರು ಸಂಖ್ಯೆಯ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.