ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೊನೆಗೂ ದಾಖಲಾಯ್ತು ಕೇಸ್

Mainashree
Updated On : 19 Dec 2013, 11:26 am

ಕ.ಪ್ರ. ವಾರ್ತೆ ರಾಯಚೂರು ಡಿ.18
ನಗರಸಭೆಯಲ್ಲಿ 2008ರಿಂದ 2011ರ ಮಧ್ಯದ ಅವಧಿಯಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟ ಶೇ.22.75ರ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಪೌರಾಯುಕ್ತ ಮತ್ತು ಎಇಇ ವಿರುದ್ಧ ಕೇಸ್ ದಾಖಲಾಗುವ ಮೂಲಕ ನಗರದ ಜನಪರ ಸಂಘಟನೆಗಳ ಒಕ್ಕೂಟವು ಬುಧವಾರ ಹಮ್ಮಿಕೊಂಡಿದ್ದ ನಗರಸಭೆ ಮುತ್ತಿಗೆ ಕಾರ್ಯಕ್ರಮ ಕೈಬಿಡಲಾಯಿತು.
ನಗರಸಭೆಯಲ್ಲಿ ಶೇ.22.75ರ ಅನುದಾನದ ದುರ್ಬಳಕೆ, ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆಯಲ್ಲಿ 53 ಲಕ್ಷ ದುರ್ಬಳಕೆಯಾಗಿರುವ ಅಕ್ರಮ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ 22 ಸಂಘಟನೆಗಳು ಬುಧವಾರ ನಗರಸಭೆ ಮುತ್ತಿಗೆ ಕಾರ್ಯಕ್ರಮ ಆಯೋಜಿಸಿದ್ದವು.
ಆಕ್ರೋಶ ಶಮನಗೊಳಿಸುವ ಕಾರ್ಯ: ಆದರೆ ನಗರಸಭೆಯಲ್ಲಿ ನಡೆದ ಶೇ.22.75ರ ಅನುದಾನದ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ನಗರಸಭೆಯ ಹಾಲಿ ಪೌರಾಯುಕ್ತ ಬಸಪ್ಪ ಅವರು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಅಕ್ರಮಕ್ಕೆ ಕಾರಣ ಎಂದು ಆರೋಪಿಸಿರುವ ಆಗಿನ ಪೌರಾಯುಕ್ತ ತಿಪ್ಪೇಶ್ ಮತ್ತು ಎಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ ಅವರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಹೋರಾಟಗಾರರ ಆಕ್ರೋಶ ಶಮನಗೊಳಿಸುವ ಕಾರ್ಯ ಮಾಡಿದರು.
ಪೌರಾಯುಕ್ತ ತಿಪ್ಪೇಶ್ ಮತ್ತು ಎಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ ಅವರು ಕೋಟ್ಯಂತರ ರು. ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಕಾರಣರಾಗಿದ್ದಾರೆಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾಗಿತ್ತು. ಅಂತೆಯೇ ಇಬ್ಬರು ಅಧಿಕಾರಿಗಳ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಲು ನಿರ್ದೇಶನಾಲಯದ ತನಿಖಾ ವರದಿ ಆಧಾರದಲ್ಲಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿಗಳು ಸೂಚನೆ ನೀಡಿದ್ದರು.
ರಾಜುಪಟ್ಟಿ ಆರೋಪ: ಆದರೆ ನಗರಸಭೆಯ ಪೌರಾಯುಕ್ತ ಬಸಪ್ಪ ಅವರು ಅಪರಾಧ ಮೊಕದ್ದಮೆ ದಾಖಲಿಸಲು ವಿಳಂಬ ತೋರಿದ್ದರಿಂದ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದವು. ಸದ್ಯ ತಿಪ್ಪೇಶ್ ಮತ್ತು ಮಲ್ಲಿಕಾರ್ಜುನ ಗೋಪಿಶೆಟ್ಟಿ ಅವರ ವಿರುದ್ಧ ಐಪಿಸಿ 409, 420, 34ಸಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಹಿನ್ನೆಲೆ: ನಗರಸಭೆಯಲ್ಲಿ ಪರಿಶಿಷ್ಟರಿಗೆ ಮೀಸಲಾದ ಶೇ.22.75ರ ಅನುದಾನದಲ್ಲಿ 2008ರಿಂದ 2011ರವರೆಗಿನ ಅವಧಿಯಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದಸಂಸ ಮುಖಂಡ ರಾಜುಪಟ್ಟಿ ಆರೋಪಿಸಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರಿತ್ತಿದ್ದರು.
ಅನುದಾನ ಹಂಚಿಕೆಯಲ್ಲಿ ನಿಯಮ ಉಲ್ಲಂಘಿಸಿ ಅನರ್ಹರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕ್ರಿಯಾ ಯೋಜನೆ ರೂಪಿಸುವುದು ಸೇರಿದಂತೆ ವಿವಿಧ ತರಬೇತಿ ಮತ್ತು ಪ್ರವಾಸ ಕಾರ್ಯಕ್ರಮಗಳಿಗೆ ಹಣ ಬಿಡುಗಡೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ನೇತೃತ್ವದ ತಂಡವು ತನಿಖೆ ನಡೆಸಿದ ವೇಳೆ ಅಕ್ರಮ ನಡೆದಿರುವುದು ಸಾಬೀತಾಗಿದ್ದರಿಂದ ಸರ್ಕಾರಕ್ಕೆ ಈ ಬಗ್ಗೆ ಕ್ರಮಕ್ಕೆ ಕೋರಿ ವರದಿ ಸಲ್ಲಿಸಿತ್ತು. ಅದರಂತೆಯೇ ಸರ್ಕಾರದ ಉಪ ಕಾರ್ಯದರ್ಶಿ ಜಗದೀಶ್ ಅವರು ಜಿಲ್ಲಾಧಿಕಾರಿಗೆ ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ವರದಿ ಸಲ್ಲಿಸಲು ಆದೇಶಿಸಿದ್ದರು.
ಆರಂಭಿಕ ಗೆಲುವು: ಜಿಲ್ಲಾಧಿಕಾರಿಯೂ ಸಹ ನಗರಸಭೆ ಹಾಲಿ ಪೌರಾಯುಕ್ತ ಬಸಪ್ಪ ಅವರಿಗೆ ಈ ಕುರಿತು ಸೂಚಿಸಿದ್ದರೂ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಹಿಂದೇಟು ಹಾಕಿದ್ದರಿಂದ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದವು.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಜನಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಅಂಬಣ್ಣ ಅರೋಲಿ ಮತ್ತು ರವೀಂದ್ರ ಜಲ್ದಾರ್ ಅವರು, ಸಂಘಟನೆಯ ಹೋರಾಟಕ್ಕೆ ಆರಂಭಿಕ ಗೆಲುವು ಲಭಿಸಿದೆ. ಶೇ.22.75ರ ಅನುದಾನದ ದುರ್ಬಳಕೆ ಸಂಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದರಿಂದ ಮುತ್ತಿಗೆ ಕಾರ್ಯಕ್ರಮ ಸದ್ಯಕ್ಕೆ ಹಿಂಪಡೆಯಲಾಗಿದೆ. ಆದರೆ ಇನ್ನುಳಿದಂತೆ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆಯಲ್ಲಿನ ಅಕ್ರಮ ಸೇರಿ ಇನ್ನಿತರೆ ಅವ್ಯವಹಾರಗಳ ಬಗ್ಗೆ ಹೋರಾಟ ಮುಂದುವರಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement