ಗ್ರಾನೈಟ್ ಗಣಿಗಾರಿಕೆ; ಸರ್ಕಾರಕ್ಕೆ ಶೀಘ್ರವೇ ವರದಿ
ಕ.ಪ್ರ. ವಾರ್ತೆ ಮುದಗಲ್ ಡಿ.18
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿರುವ ಗ್ರಾನೈಟ್ ಗಣಿಗಾರಿಕೆ ತನಿಖೆ ಈಗಾಗಲೇ ಶೇ. 90ರಷ್ಟು ಪೂರ್ಣಗೊಂಡಿದ್ದು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಾಗರಾಜ್ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿ ನಡೆಸಲಾಗುತ್ತಿರುವ ಗ್ರಾನೈಟ್ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ತನಿಖಾ ತಂಡ ಗಣಿಗಾರಿಕೆ ಪ್ರದೇಶವನ್ನು ಸಮೀಕ್ಷೆ ಮಾಡಿದ್ದು, ವರದಿ ಪಡೆದ ನಂತರ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಕಳಿಸಲಾಗುತ್ತದೆ ಎಂದರು.
ಈಗಾಗಲೇ 450 ಎಕರೆ ಪ್ರದೇಶದಲ್ಲಿ ಸರ್ವೆ ಮಾಡಲಾಗಿದ್ದು ಮುದಗಲ್, ವ್ಯಾಸನಂದಿಹಾಳ, ಬೊಮ್ಮನಾಳ, ನಾಗರಹಾಳಗಳಲ್ಲಿ ತನಿಖೆ ಪೂರ್ಣಗೊಂಡಿದೆ. ಮಾಕಾಪುರ, ಆದಾಪುರ ಗ್ರಾಮಗಳಲ್ಲಿ ಮಾತ್ರ ತನಿಖೆ ಬಾಕಿ ಉಳಿದಿದೆ ಎಂದರು.
ಚೆಕ್ ಪೋಸ್ಟ್: ಅಕ್ರಮ ಗ್ರಾನೈಟ್ ಕಲ್ಲು ಶಿಲೆಗಳ ಸಾಗಣೆ ತಡೆಯಲು ಇಳಕಲ್, ತಾವರಗೇರ, ಒಳ ರಸೆ ಹೊಂದಿರುವ ರಾಮತ್ನಾಳ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗುವುದು. ಅವುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದರು.
ಸರ್ವೆ ನಂ. 18/2ರಲ್ಲಿ ಸತ್ಯಪ್ಪ ಎಂಬವರು 2.20 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದು, ಸರ್ವೆ ನಂ.18ರಲ್ಲಿ ಗಣಿಗಾರಿಕೆ ಮಾಡಲು ಬೇರೆಯವರಿಗೆ ನೀಡಿರುವುದನ್ನು ತಿಳಿದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ವಿಷಾದ ವ್ಯಕ್ತಪಡಿಸಿದರು.
ಕ್ರಮದ ಎಚ್ಚರಿಕೆ: ಇಷ್ಟೆಲ್ಲ ಅಕ್ರಮ ನಡೆದಿದ್ದರು, ಗಣಿ ಮಾಲೀಕರ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದನ್ನು ಕಂಡ ಅವರು ಕೂಡಲೇ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಿದರು. ಕ್ರಮಕ್ಕೆ ಮುಂದಾಗದಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ರೀತಿ ಸರ್ವೆ ನಂ.404ರಲ್ಲಿ ಲೀಜ್ ಪಡೆದ ಸ್ಥಳ ಬಿಟ್ಟು ವೆಸ್ಟೇಜ್ ಕಲ್ಲುಗಳನ್ನು ಹಾಕಿರುವ ಬಗ್ಗೆ ಕಂದಾಯ ನಿರೀಕ್ಷಕರನ್ನು ಪ್ರಶ್ನಿಸಿದಾಗ ಉತ್ತರಿಸಲು ತಡವರಿಸಿದ ಅಧಿಕಾರಿಗಳಿಗೆ ಕೂಡಲೇ ಜಮೀನ ಮಾಲೀಕನಿಗೆ ನೋಟಿಸ್ ನೀಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.