ನಗರದಲ್ಲಿ ಬ್ಯಾಂಕ್ ಮುಷ್ಕರ ಯಶಸ್ವಿ
ಕ.ಪ್ರ. ವಾರ್ತೆ ರಾಯಚೂರು ಡಿ.18
ಬ್ಯಾಂಕ್ ಕಾರ್ಮಿಕ ಒಕ್ಕೂಟಗಳ ಸಂಯುಕ್ತ ವೇದಿಕೆ(ಯುಎಫ್‌ಬಿಯು) ದೇಶಾದ್ಯಂತ ನೀಡಿದ್ದ ಕರೆಯ ಮೇರೆಗೆ ನಗರ ಸೇರಿ ಜಿಲ್ಲೆಯ ಎಲ್ಲೆಡೆ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳು ಬುಧವಾರ ನಡೆಸಿದ ಒಂದು ದಿನದ ಮುಷ್ಕರದಿಂದಾಗಿ ವಹಿವಾಟು ಸಂಪೂರ್ಣ ಸ್ಥಗಿತಗೊಂಡು ಗ್ರಾಹಕರು ಪರದಾಡಿದರು.
ದೇಶದ ಶ್ರೀಸಾಮಾನ್ಯ ಮತ್ತು ಬಡವರ ಹಿತ ಸಂಪೂರ್ಣ ಕಡೆಗಣಿಸಿ ಬ್ಯಾಂಕುಗಳನ್ನು ಮತ್ತೆ ಖಾಸಗಿ ಒಡೆತನಕ್ಕೆ ಒಪ್ಪಿಸುವ ಸರ್ಕಾರದ ನೀತಿಗೆ ಬ್ಯಾಂಕ್ ನೌಕರರ ಸಂಘದವರು ವಿರೋಧಿಸಿ ಘೋಷಣೆ ಕೂಗಿದರು. ನಗರದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಮುಖ್ಯ ಶಾಖೆಯ ಆವರಣದಲ್ಲಿ ಸೇರಿದ ನೌಕರರು ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಮುಷ್ಕರದಲ್ಲಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಹರೀಶ್ ಕೊಪ್ಪರ, ಪ್ರಧಾನ ಕಾರ್ಯದರ್ಶಿ ಕೋನಾಪುರ ರಾಘವೇಂದ್ರರಾವ್, ಖಜಾಂಚಿ ಪಿ.ಸಿ. ಸುಬ್ರಹ್ಮಣ್ಯಂ, ಪಾರ್ಥಸಾರಥಿ, ಗೋವಿಂದರಾವ್, ವೆಂಕಟೇಶ, ಮಧುಸೂದನ, ರಾಮಕೃಷ್ಣ, ಜಯಾಚಾರ್ ಜೋಷಿ, ಶ್ರೀನಿವಾಸ ಗಟ್ಟು, ಹನುಮೇಶ ಹೇರೂರ್, ಮದನಮೋಹನ, ವೀರೇಶಮ್ಮ, ಸ್ವಾತಿ ಮತ್ತಿತರರು ಇದ್ದರು.
ಆರ್‌ಡಿಸಿಸಿ ಬ್ಯಾಂಕಿನ ಶ್ರೀಕಾಂತ್, ಭಾರತೀಯ ಜೀವ ವಿಮಾ ನಿಗಮ ನೌಕರರ ಸಂಘದ ಮುಖಂಡ ರವಿ ಮತ್ತಿತರರು ಬೆಂಬಲಿಸಿ ಪಾಲ್ಗೊಂಡಿದ್ದರು.