ನಾಳೆ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ
ಕ.ಪ್ರ. ವಾರ್ತೆ ರಾಯಚೂರು ಡಿ.18
ಮುಂಬರುವ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಜಿಲ್ಲಾ ಬಿಜೆಪಿ ಘಟಕವು, ಡಿ.20ರಂದು ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಹೇಳಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಪ್ರಕ್ರಿಯೆಗೆ ಪಕ್ಷವು ಈಗಾಗಲೇ ಚಾಲನೆ ನೀಡಿದೆ. ಅದರಂಗವಾಗಿ ಡಿ.20ರಂದು ಮಾನವಿ ತಾಲೂಕಿನ ಸಿರವಾರದಲ್ಲಿ ಬೆಳಗ್ಗೆ 11ಕ್ಕೆ ನಡೆಯುವ ಸಮಾವೇಶವನ್ನು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆಂದು ಹೇಳಿದರು.
4 ಗೋಷ್ಠಿಗಳು: ಕಾರ್ಯಕ್ರಮದಲ್ಲಿ ಎಂಎಲ್ಸಿ ಭಾನುಪ್ರಕಾಶ್, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಪಾಲ್ಗೊಂಡು ಮಾತನಾಡಲಿದ್ದಾರೆ. ಒಟ್ಟು 4 ವಿವಿಧ ಗೋಷ್ಠಿಗಳನ್ನು ಆಯೋಜಿಸಿದ್ದು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆ ಮೂಲಕ ಚುನಾವಣೆಯಲ್ಲಿ ಮತದಾರರ ಮುಂದೆ ಕೊಂಡೊಯ್ಯಬೇಕಾದ ವಿಚಾರಗಳ ಬಗ್ಗೆ ಸಮಾಲೋಚಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಅಕ್ಕಿ ಲೆವಿ ಪ್ರಮಾಣ ಹೆಚ್ಚಿಸಿರುವುದು ತೀರಾ ಅವೈಜ್ಞಾನಿಕವಾಗಿದ್ದು ಅದರಿಂದ ಅಕ್ಕಿ ಗಿರಣಿಗಳ ಮಾಲೀಕರು, ರೈತರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಅಕ್ಕಿ ಗಿರಣಿ ಮಾಲೀಕರು ನಡೆಸುತ್ತಿರುವ ಮುಷ್ಕರದಿಂದ ಅಕ್ಕಿ ದರ ಏರಿಕೆ ಕಾಣಲಿದೆ. ಜತೆಗೆ ಮಾಲೀಕರು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಮಾರಾಟಕ್ಕೆ ಅಡ್ಡಿ: ರಾಜ್ಯ ಸರ್ಕಾರ ಕೂಡಲೇ ಅಕ್ಕಿ ಗಿರಣಿಗಳ ಮಾಲೀಕರ ಸಭೆ ಕರೆದು ಸಮಸ್ಯೆ ಕುರಿತು ಚರ್ಚಿಸಬೇಕು. ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ವಿರೋಧಿಸುವುದಿಲ್ಲ. ಆದರೆ ಅದಕ್ಕಾಗಿ ಲೆವಿ ಅಕ್ಕಿ ಪ್ರಮಾಣ ಹೆಚ್ಚಳ ಸರಿಯಲ್ಲ ಎಂದು ಅವರು ಟೀಕಿಸಿದರು.
ಲೆವಿ ಅಕ್ಕಿ ಸಂಗ್ರಹಣೆ ಪ್ರಮಾಣ ಸದ್ಯ ದುಪ್ಪಟ್ಟು ಹೆಚ್ಚಿಸಿದ್ದು, ಅದರ ಪ್ರಮಾಣವನ್ನು ಸರ್ಕಾರ ಕೂಡಲೇ ಇಳಿಕೆ ಮಾಡಬೇಕು. ಈಗಾಗಲೇ ಕಳೆದ ಎರಡು ದಿನಗಳಿಂದ ಅಕ್ಕಿ ಗಿರಣಿಗಳು ಮುಚ್ಚಿದ್ದರಿಂದ ಸದ್ಯ ಬತ್ತ ಕಟಾವು ಮತ್ತು ಮಾರಾಟದಲ್ಲಿ ತೊಡಗಿರುವ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ಬತ್ತದ ಮಾರಾಟಕ್ಕೆ ಅಡ್ಡಿಯಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಹಿತ ಕಾಯುವ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಮುಂದಿನ ಎರಡು ದಿನದಲ್ಲಿ ಬಿಜೆಪಿ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
21ರಂದು ಕೊಪ್ಪಳದಲ್ಲಿ ಸಮಾವೇಶ: ಬಿಜೆಪಿ ಪಕ್ಷದ ಮತ್ತೊಬ್ಬ ಮುಖಂಡ ಅಶೋಕ ಗಸ್ತಿ ಮಾತನಾಡಿ, ಸಿರವಾರದಲ್ಲಿ ಆಯೋಜಿಸಿದಂತೆ ಕೊಪ್ಪಳದಲ್ಲಿ ಡಿ.21ಕ್ಕೆ ಕೊಪ್ಪಳ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಶಕ್ತಿ ಕೇಂದ್ರಗಳ ಕಾರ್ಯಕರ್ತರು ಸಮಾವೇಶ ಆಯೋಜಿಸಿದ್ದು, ಕೊಪ್ಪಳ ಜಿಲ್ಲೆಯ ಕಾರಟಗಿಯ ದೇವಿನಗರದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಡಿ.22ಕ್ಕೆ ಬಳ್ಳಾರಿ ಕ್ಷೇತ್ರದ ಶಕ್ತಿ ಕೇಂದ್ರಗಳ ಸಮಾವೇಶವು ಆ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಆಯೋಜಿಸಿದ್ದು, ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕೊಪ್ಪಳ ಸಮಾವೇಶವನ್ನು ಅಧ್ಯಕ್ಷ ಪ್ರಹ್ಲಾದ ಜೋಷಿ ಹಾಗೂ ಬಳ್ಳಾರಿ ಸಮಾವೇಶ ವನ್ನು ಈಶ್ವರಪ್ಪ ಉದ್ಘಾಟಿಸಲಿದ್ದು, ಚೀಫ್ ವಿಪ್ ಶಿವಯೋಗಿ ಸ್ವಾಮಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಮತದಾರರ ಎದುರು ಮಂಡಿಸಬೇಕಿರುವ ವಿವಿಧ ಅಂಶಗಳ ಬಗ್ಗೆ ಸಮಾವೇಶಗಳಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು. ಪಕ್ಷದ ಪ್ರಮುಖರಾದ ಆರ್. ತಿಮ್ಮಯ್ಯ, ರಮಾನಂದ ಯಾದವ್, ಬಂಡೇಶ್ ವಲ್ಕಂದಿನ್ನಿ, ನರಸಪ್ಪ ಯಕ್ಲಾಸಪುರ, ವಿಶ್ವನಾಥ್ ಪಾಟೀಲ್ ಸೇರಿ ಅನೇಕರಿದ್ದರು.