ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಕ್ಕಳ ಪ್ರತಿಭೆಗೆ 'ಕಾರಂಜಿ' ಸಹಕಾರಿ: ಸಾಲ್ಮನಿ

Mainashree
Updated On : 19 Dec 2013, 11:26 am

ಕ.ಪ್ರ. ವಾರ್ತೆ ಲಿಂಗಸ್ಗೂರು ಡಿ.18
ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿಗೆ ತಂದ ಪರಿಣಾಮ ಗ್ರಾಮೀಣ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿಯಾಗಿದೆ ಎಂದು ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಹೇಳಿದರು.
ಪಟ್ಟಣದ ಅಮರೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 2013- 14ನೇ ಸಾಲಿನ ಪ್ರೌಢಶಾಲಾ ವಿಭಾಗದ ಸಿಆರ್‌ಸಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರೂ ಸಹಕರಿಸಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ್ ಮಾತನಾಡಿ, ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಳೆದ 10 ವರ್ಷಗಳಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಇದರಿಂದ ಗ್ರಾಮೀಣ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ವೇದಿಕೆ ಕಲ್ಪಿಸಿದಂತಾಗಿದೆ. ತಾಲೂಕಿನ 25 ಕ್ಲಸ್ಟರ್‌ಗಳ ವ್ಯಾಪ್ತಿಯ ಶಾಲೆಗಳ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಕರೆತರಲಾಗಿದೆ. ಶಾಲಾ ಹಂತದಿಂದ ಮಕ್ಕಳಲ್ಲಿನ ಜನಪದ ಕಲೆ, ಶಾಸ್ತ್ರೀಯ ಸಂಗೀತ, ಭಾಷಣ ಕಲೆ, ಪ್ರಬಂಧ ಸೇರಿದಂತೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲಕರು ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಗ್ರಾಮೀಣ ಮಕ್ಕಳಿಗೆ ಕಷ್ಟಸಾಧ್ಯವಾಗಿತ್ತು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಆಯೋಜನೆಯಿಂದ ಯಶಸ್ವಿಯಾಗುತ್ತಿದೆ.
ಸೋಲು- ಗೆಲವು ಸಮಾನವಾಗಿ ಸ್ವೀಕರಿಸಿ: ಯಾವುದೇ ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಎಲ್ಲರೂ ಪ್ರತಿಭಾವಂತರೇ ಇರುತ್ತಾರೆ. ಸೋಲು- ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು. ಕೇವಲ ಬಹುಮಾನಕ್ಕೆ ಆಸೆಪಡದೆ ಪ್ರತಿಭೆ ವ್ಯಕ್ತಪಡಿಸುತ್ತ ಮಕ್ಕಳು ಗಮನ ಹರಿಸಬೇಕು. ನಿರ್ಣಾಯಕರು ಪೂರ್ವಾಗ್ರಹ ಪೀಡನೆಗೆ ಒಳಗಾಗದೆ ಪಾರದರ್ಶಕವಾಗಿ ನಿರ್ಣಯ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ವಿನಯಕುಮಾರ, ಪ್ರಾಚಾರ್ಯ ಎಸ್.ಎಂ. ಯಡಹಳ್ಳಿ, ಶಿಕ್ಷಣ ಸಂಯೋಜಕ ನೀಲಪ್ಪ, ಸಿಆರ್‌ಸಿ ರುದ್ರಮುನಿ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement