ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮರಳು ಸಾಗಣೆ; ಜಿಪಿಎಸ್ ಅಳವಡಿಕೆ ಕಡ್ಡಾಯ

Mainashree
Updated On : 19 Dec 2013, 11:25 am

ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಣೆ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಅಕ್ರಮ ಮರಳು ಸಾಗಣೆ ತಡೆಗೆ ಮರಳು ನೀತಿ ಜಾರಿಗೆ ತರಲಾಗಿದೆ. ಮರಳು ಸಾಗಣೆಗೆ ಪರವಾನಗಿ ಪಡೆದ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜ್ ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮರಳು ದೊರೆಯುವ ಸ್ಥಳಗಳನ್ನು ಗುರುತಿಸಿ ಟೆಂಡರ್ ಮೂಲಕ ಸಾಗಣಿಕೆಗೆ ಅವಕಾಶ ಕಲ್ಪಿಸಲಾಗುವುದು. ಅಕ್ರಮ ಮರಳು ತಡೆಗೆ ಕಂದಾಯ, ಪೊಲೀಸ್ ಇಲಾಖೆಗೆ ನೂತನ ಮರಳು ನೀತಿಯಲ್ಲಿ ಅಧಿಕಾರ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೇಲೂ ಕಣ್ಣು: ಪರವಾನಗಿ ಪಡೆದ ವಾಹನಗಳಿಗೆ ಜಿಪಿಎಸ್ ಅಳವಡಿಸದಿದ್ದರೆ ಟ್ರಿಪ್ ಶೀಟ್ ಜನರೇಟ್ ಆಗುವುದಿಲ್ಲ. ಜಿಪಿಎಸ್ ಅಳವಡಿಸದೆ ಮರಳು ಸಾಗಿಸುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೆ ಅಕ್ರಮ ಮರಳು ಸಾಗಣಿಕೆ ಮಾಡುವ ಕುರಿತು ಪೊಲೀಸರಿಗೆ ಮಾಹಿತಿ ಇದ್ದರೂ ಜಪ್ತಿಗೆ ಮುಂದಾಗದಿದ್ದರೆ ಅಂಥವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಲಿಂಗಸ್ಗೂರು ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗ ಅತಿಕ್ರಮಣ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಉದ್ಯಾನವನ, ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗವನ್ನು ಅನಧಿಕೃತವಾಗಿ ಪ್ಲಾಟ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ ಕುರಿತು ದೂರುಗಳು ಕೇಳಿ ಬಂದಿವೆ. ಪುರಸಭೆ ವ್ಯಾಪ್ತಿಯ ಎಲ್ಲ ಬಡಾವಣೆಗಳ ಸಮಗ್ರ ದಾಖಲೆ ಸಂಗ್ರಹಿಸಿ ಬಡಾವಣೆ ಮಾಲೀಕರು ಹಾಗೂ ಅಂದು ಕಾರ್ಯ ನಿರ್ವಹಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಾಹಿತಿ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್ ಅವರಿಗೆ ಸೂಚಿಸಿದರು.
ಶೀಘ್ರವೇ ಮಾಹಿತಿ ಸಲ್ಲಿಕೆ: ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ಲಿಂಗಸ್ಗೂರು ಪುರಸಭೆ ವ್ಯಾಪ್ತಿಯ 200ಕ್ಕೂ ಅಧಿಕ ಬಡಾವಣೆಗಳ ಪೈಕಿ ಈಗಾಗಲೇ 100 ಬಡಾವಣೆಗಳ ದಾಖಲಾತಿ ಸಂಗ್ರಹಿಸಲಾಗಿದೆ. ಇನ್ನುಳಿದ ದಾಖಲೆಗಳು ಪುರಸಭೆ ದಾಖಲೆಗಳಿಗೆ ಈ ಹಿಂದೆ ಬೆಂಕಿ ಆಕಸ್ಮಿಕದಿಂದ ಸುಟ್ಟುಹೋದ ಪರಿಣಾಮ ಸಂಗ್ರಹಿಸುವಲ್ಲಿ ವಿಳಂಬವಾಗುತ್ತಿದೆ ಎಂದರು.
ಸದ್ಯ ಸಂಗ್ರಹಿಸಿದ 100 ಬಡಾವಣೆಗಳ ದಾಖಲೆಗಳ ಮಾಹಿತಿಯನ್ನು ಕೂಡಲೇ ತಮಗೆ ನೀಡುವ ಜೊತೆಗೆ ಸದರಿ ಬಡಾವಣೆಗಳಲ್ಲಿ ಅನಧಿಕೃತವಿರುವ ಜಾಗ ರದ್ದುಪಡಿಸುವಂತೆ ತಾಕೀತು ಮಾಡಿದರು.
ಸ್ಮಶಾನ ಜಾಗ ಕಲ್ಪಿಸಲು ಯತ್ನ: ಪಟ್ಟಣದ ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಗ್ರಾಮದ ಸ್ಮಶಾನ ಜಾಗ ಸಮಸ್ಯೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಹುಲಿಗುಡ್ಡ ಗ್ರಾಮದ ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಹಲವು ವರ್ಷಗಳಿಂದ ಶವ ಸಂಸ್ಕಾರ ಮಾಡುತ್ತಾ ಬರಲಾಗಿದೆ. ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆಂಬ ದೂರು ಆಧರಿಸಿ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಸರ್ವೆ ಕಾರ್ಯ ಕೈಗೊಂಡಿದ್ದಾರೆ. ಸರ್ಕಾರದ ದಾಖಲೆಗಳಲ್ಲಿ ಸ್ಮಶಾನ ಜಾಗ ಇರುವುದಿಲ್ಲ. ಖಾಸಗಿ ಜಾಗದಲ್ಲಿ ಶವಸಂಸ್ಕಾರ ಮಾಡಲು ಬರುವುದಿಲ್ಲ.
ಈ ನಿಟ್ಟಿನಲ್ಲಿ ಗ್ರಾಮದ ಬಳಿಯ ಅರಣ್ಯ ಇಲಾಖೆ ಜಾಗವನ್ನು ಸ್ಮಶಾನಕ್ಕೆ ನೀಡಲು ಅವಕಾಶ ಕಲ್ಪಿಸಲಾಗುವುದು. ಈ ಕುರಿತು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆಯಲು ಕಾನೂನು ವ್ಯಾಪ್ತಿಯಲ್ಲಿ ಪತ್ರ ಬರೆದು ಅನುಕೂಲ ಕಲ್ಪಿಸಲಾಗುವುದೆಂದು ತಿಳಿಸಿದರು.
ಗ್ರಾನೈಟ್ ಗಣಿಗಾರಿಕೆ- ಎಸಿಗೆ ವರದಿ: ತಾಲೂಕಿನ ಮುದಗಲ್ ಪಪಂ ವ್ಯಾಪ್ತಿಯಲ್ಲಿ ಅಕ್ರಮ ಗ್ರಾನೈಟ್ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರು ಆಧರಿಸಿ ತನಿಖೆಗೆ ಡಿಡಿಎಲ್‌ಆರ್, ಸಹಾಯಕ ಆಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದ್ದು, ಮಾಕಾಪುರ, ಆದಾಪುರ, ಬಯ್ಯಾಪುರ ಸೇರಿದಂತೆ ವಿವಿಧ ಗ್ರಾಮ ಹೊರತುಪಡಿಸಿ ಈಗಾಗಲೇ ಮುದಗಲ್ ಭಾಗದ ಎಲ್ಲ ಗ್ರಾನೈಟ್ ಗಣಿಗಳ ಸರ್ವೆ ಕಾರ್ಯ ನಡೆಸಲಾಗಿದೆ. ಇನ್ನು ಒಂದು ವಾರದಲ್ಲಿ ಅಂತಿಮ ವರದಿ ಸಿದ್ಧಪಡಿಸಿ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಿಕೊಡಲಾಗುವುದು.
ಅನಧಿಕೃತ ಗ್ರಾನೈಟ್ ಗಣಿಗಾರಿಕೆ ನಡೆಸುವವರ ವಿರುದ್ಧ ಮೇಲಧಿಕಾರಿಗಳ ಸೂಚನೆ ಮೇರೆಗೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿಡಿಎಲ್‌ಆರ್ ಉಮೇಶ, ಸಹಾಯಕ ಆಯುಕ್ತ ಟಿ.ಯೋಗೇಶ್, ತಹಸೀಲ್ದಾರ್ ಜಿ.ಎಸ್. ಮಹಾಜನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement