ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೃತ್ತಿ ಶಿಕ್ಷಣ ಕಾಯ್ದೆ ವಿರೋಧಿಸಿ ಪ್ರತಿಭಟನೆ

Mainashree
Updated On : 19 Dec 2013, 11:15 am

ಸಿಂಧನೂರು: ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ 2006ರ ಸಿಇಟಿ ಕಾಯ್ದೆಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಕಾಯ್ದೆಯ ಜಾರಿಯಿಂದಾಗಿ ರಾಜ್ಯದ ಯಾವುದೇ ಖಾಸಗಿ, ಅನುದಾನ ರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಯಾವುದೇ ಸೀಟುಗಳು ಲಭ್ಯವಿಲ್ಲದಂತಾಗುತ್ತದೆ. ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಮೆಡ್-ಕೆ ನಡೆಸುವ ಪರೀಕ್ಷೆ ಬರೆಯಬೇಕಾಗುತ್ತದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು ಅಂದರೆ 21 ಎಂಜಿನಿಯರಿಂಗ್ ಮತ್ತು 10 ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಸರ್ಕಾರದ ಸಿಇಟಿ ಪರೀಕ್ಷೆ ಅನ್ವಯವಾಗುತ್ತದೆ.
ಶುಲ್ಕ ಭರಿಸುವ ಅನಿವಾರ್ಯತೆ: ಸಿಇಟಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಯೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಲು ಅನಿವಾರ್ಯವಾಗಿ ಲಕ್ಷಾಂತರ ರು. ಶುಲ್ಕ ಭರಿಸಬೇಕಾಗುತ್ತದೆ. ಯಾವುದೇ ಅನುದಾನ ರಹಿತ ಕಾಲೇಜುಗಳ ಶುಲ್ಕ ನೀತಿ ಮತ್ತು ಸೀಟು ಹಂಚಿಕೆಯಲ್ಲಿ ಸರ್ಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಪರೀಕ್ಷೆಗೆ ನಡೆಸುವ ಅಧಿಕಾರವನ್ನು ಸೀಟ್ ವ್ಯಾಪಾರೀಕರಣ ದಂಧೆಯಲ್ಲಿ ತೊಡಗಿರುವ ಕಾಮೆಡ್-ಕೆ ಗೆ ನೀಡಲಾಗಿದ್ದು, ಇದರಿಂದ ಪರೀಕ್ಷಾ ವ್ಯವಸ್ಥೆಯೇ ಪ್ರಶ್ನಾರ್ಹವಾಗಿದೆ.
ಈ ಹಿಂದೆ ಸರ್ಕಾರದ ಕೋಟಾದಲ್ಲಿದ್ದ ಶೇ.45 ಎಂಜಿನಿಯರಿಂಗ್, 40 ಮೆಡಿಕಲ್, 35 ದಂತ ವೈದ್ಯಕೀಯ ಕಾಲೇಜುಗಳ ಸೀಟುಗಳು ಖಾಸಗಿಯವರಿಗೆ ಹಸ್ತಾಂತರವಾಗುತ್ತದೆ. ಸರ್ಕಾರದ ಈ ಕಾಯ್ದೆಯಿಂದಾಗಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಗನಕುಸುಮವಾಗಲಿದ್ದು, ಈ ಕಾಯ್ದೆಯನ್ನು ಕೈಬಿಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ರಮೇಶ ಕೆ., ಕಾರ್ಯಕಾರಿಣಿ ಸದಸ್ಯ ಮಂಜುನಾಥ, ವಿನಯ ಬಿದರೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement