'ಸದಾಶಿವ'; ಬಹಿರಂಗ ಚರ್ಚೆಗೆ ಬನ್ನಿ
ಮಸ್ಕಿ: ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸುತ್ತಿರುವ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರು ವರದಿಯಲ್ಲಿನ ಅಂಶಗಳ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯ ಬಹಿರಂಗ ಚರ್ಚೆಗೆ ಬರುವಂತೆ ದಲಿತ ಸಾಹಿತಿ ಸಿ.ದಾನಪ್ಪ ನಿಲೋಗಲ್ ಸವಾಲು ಹಾಕಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸ್ಪೃಶ್ಯರು ತಮ್ಮ ಹಕ್ಕುಗಳಿಗಾಗಿ ಅಂದು ಹೋರಾಟ ಮಾಡಿದ್ದು ಈಗ ಮತ್ತೆ ಹಕ್ಕುಗಳಿಗಾಗಿ ಒಳ ಮೀಸಲಾತಿಯ ಹೋರಾಟವನ್ನು ಮಾಡಬೇಕಾಗಿ ಬಂದಿರುವುದು ಡಾ. ಅಂಬೇಡ್ಕರ್ ಅವರ ಆಶಯಗಳು ಸಾಕಾರಗೊಳ್ಳಲು ಸಾಕ್ಷಿಯಾಗಿದೆ ಎಂದರು.
ಡಾ. ಅಂಬೇಡ್ಕರ್ ಆಶಯಗಳಿಗೆ ದ್ರೋಹ: ಭೋವಿ ವಡ್ಡರ್ ಸಮಾಜದ ರವಿ ಚಿಗರಿ ಹಾಗೂ ಶಶಿಕಲಾ ಭೀಮರಾಯ ಅವರು ಸದಾಶಿವ ವರದಿ ಜಾರಿಯಿಂದಾಗಿ 99 ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂಬ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿವೆ ಎಂದು ಹೇಳಿದರು. ದಲಿತ ಮುಖಂಡ ಹನುಮಂತಪ್ಪ ವೆಂಕಟಾಪೂರ ಮಾತನಾಡಿ, ಶಾಸಕ ವಜ್ಜಲ್ ಅವರು ಅಸ್ಪೃಶ್ಯ ಜಾತಿಯವರಿಗೆ ಸಿಗಬೇಕಾದ ಸರ್ಕಾರದ ಯೋಜನೆಗಳನ್ನು ತಲುಪಿಸಿಲ್ಲ. ಉದ್ದೇಶಪೂರ್ವಕವಾಗಿ ಮಾದಿಗ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.
ಸಿಎಂಗೆ ಎಚ್ಚರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಸದಾಶಿವ ಆಯೋಗದ ವರದಿ ಜಾರಿಗೆ ಮುಂದಾಗದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾಗಿಬರಬಹುದೆಂದು ಎಚ್ಚರಿಸಿದರು.