ಸುಗ್ಗಿಗೂ ಮುನ್ನವೇ ಗುಳೆ ಶುರು
ಕ.ಪ್ರ. ವಾರ್ತೆ ಮುದಗಲ್ ಡಿ.18
ಜನರಿಗೆ ದುಡಿಯಲು ಕೆಲಸವಿಲ್ಲ, ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಊರುಗಳಿಗೆ ಗುಳೆ ಹೋಗದೆ ಗತಿ ಇಲ್ಲ ಎಂದು ಗ್ರಾಮೀಣ ಪ್ರದೇಶದ ಜನರ ಗೋಳು ಕೇಳುವವರಾರೂ ಇಲ್ಲ ಎಂದು ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.
ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸ ನೀಡಲೆಂದು ಸರ್ಕಾರ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದ್ದರೂ ಕೂಲಿಕಾರರಿಗೆ ಕೆಲಸ ನೀಡದೆ ಯಂತ್ರಗಳ ಮೂಲಕ ಕೆಲಸ ಮಾಡಿಸುತ್ತಿರುವುದು ಸಾಮಾನ್ಯವಾಗಿದೆ.
ಸಾಲ ತೀರಿಸಲು ಜಾನುವಾರು ಮಾರಾಟ: ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಸಾಲ ತೀರಿಸುವುದಕ್ಕಾಗಿ ಎತ್ತು, ಎಮ್ಮೆ ಮುಂತಾದ ಜಾನುವಾರುಗಳನ್ನು ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಸಾಲ ತೀರಿಸಿ ಹೊಟ್ಟೆ ಪಾಡಿಗೆ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ಅನೇಕ ಪಟ್ಟಣಗಳಿಗೆ ಗುಳೆ ಹೊರಟಿದ್ದಾರೆ. ಇಷ್ಟಿದ್ದರೂ ತಾಲೂಕಿನ ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗುಳೆ ಹೊರಟವರು ಶಾಪ ಹಾಕುತ್ತಿದ್ದಾರೆ.
ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಇದುವರೆಗೂ ಕೂಲಿ ಹಣ ನೀಡದೆ ಸತಾಯಿಸಲಾಗುತ್ತಿದೆ. ಕೂಲಿಕಾರರು ಕೆಲಸ ಮಾಡಿ ಆರು ತಿಂಗಳುಗಳು ಗತಿಸಿದರೂ ಹಣ ಪಾವತಿಸದೆ ಇದ್ದುದರಿಂದ ಜನರು ಪರದಾಡುತ್ತಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ: ನಿಜವಾದ ಬಡ, ಕೂಲಿಕಾರರಿಗೆ, ರೈತರಿಗೆ ಸರ್ಕಾರದಿಂದ ಇದುವರಿಗೂ ಯಾವುದೇ ಸಹಾಯ, ಸಹಕಾರ ಮಾತ್ರ ಸಿಕ್ಕಿಲ್ಲ. ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಇತ್ತ ಗ್ರಾಮೀಣ ಪ್ರದೇಶದ ಜನರು ಪಟ್ಟಣ ಪ್ರದೇಶಗಳಿಗೆ ತುತ್ತಿನ ಚೀಲ ತುಂಬಿಸಿಕೊಂಡು ಕೈತುಂಬ ಹಣ ಸಂಪಾದನೆ ಮಾಡಿದರಾಯಿತು ಎಂದು ಮಕ್ಕಳು, ಹೆಂಡರು, ಸಹೋದರ, ಸಹೋದರಿಯರೊಟ್ಟಿಗೆ ಹೋಗಿ ದುಡಿಯುತ್ತಿದ್ದಾರೆ.
ಬೆಂಗಳೂರು, ಮಂಗಳೂರು, ಗೋವಾ, ಮಹಾರಾಷ್ಟ್ರಗಳಂತ ಪಟ್ಟಣದಲ್ಲಿ ಪ್ರತಿ ದಿನಾಲು ಒಬ್ಬರಿಗೆ 400ರ ವರೆಗೆ ಕೂಲಿ ಸಿಗುತ್ತದೆ. ಇಲ್ಲಿ ಕೂಲಿ ಕೆಲಸಕ್ಕೆ ಕರೆಯುವವರೇ ಇಲ್ಲ. ಗ್ರಾಮ ಪಂಚಾಯಿತಿಯವರಂತೂ ಕೆಲಸ ನೀಡುತ್ತಿಲ್ಲ ಎಂದು ಗ್ರಾಮೀಣ ಜನ ಹೇಳುತ್ತಿದ್ದಾರೆ.
ಪಂಪಯ್ಯ ಮಠ