ಅರ್ಜಿ ಕೂಲಂಕಷ ಪರಿಶೀಲನೆಗೆ ಸೂಚನೆ
ಕ.ಪ್ರ. ವಾರ್ತೆ ರಾಯಚೂರು ಡಿ.19
ಉದ್ಯೋಗ ಖಾತ್ರಿ ಯೋಜನೆಯ ಕಾಮ್ ಮಾಂಗೋ ಅಭಿಯಾನದಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಭಿಯಾನದ ಕೊನೆಯ ದಿನಗಳಲ್ಲಿ ಸಮರ್ಪಕವಾಗಿ ಪರಿಶೀಲಿಸಬೇಕು. ತಾಪಂ.ನಿಂದ ವಾರದಲ್ಲಿ ಎರಡು ಬಾರಿ ಸಭೆ ನಡೆಸಿ ಪರಿಶೀಲಿಸಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಗ್ರಾಮೀಣಾಭಿವೃದ್ಧಿ) ಆಯುಕ್ತ ಮುನೀಶ್ ಮೌದ್ಗಿಲ್ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಗ್ರಾಕೂಸ್ ಸಂಸ್ಥೆಯ ಜತೆ ಸೇರಿ ಜಿಲ್ಲೆಯಲ್ಲಿ ಕಾಮ್ ಮಾಂಗೋ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇದುವರೆಗೆ ಕೇವಲ 5 ಸಾವಿರ ಅರ್ಜಿಗಳು ಬಂದಿವೆ. ಮುಂದಿನ ದಿನಗಳಲ್ಲಿ 50 ಸಾವಿರ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆಯಿದ್ದು ಎಲ್ಲ ಅರ್ಜಿಗಳ ಕೂಲಂಕಷ ಪರಿಶೀಲನೆ ಅಗತ್ಯ ಎಂದರು.
ವಾರದಲ್ಲಿ 2 ದಿನ ಸಭೆ ನಡೆಸಲಿ: ಗ್ರಾಪಂ ಪಿಡಿಒ ಮತ್ತು ಗ್ರಾಕೂಸ್ ಸಂಘಟನೆಯ ಕಾರ್ಯಕರ್ತರು ಅಭಿಯಾನದಲ್ಲಿ ಬಂದಂತಹ ಅರ್ಜಿಗಳನ್ನು ಆಯಾ ತಾಪಂ ಇಒಗಳು ವಾರದ ಮಂಗಳವಾರ ಮತ್ತು ಶುಕ್ರವಾರ ಸಭೆ ನಡೆಸಿ ಅರ್ಜಿಗಳ ಖಾತರಿ ಮಾಡಿ ಇಲಾಖೆಗೆ ಮಾಹಿತಿ ನೀಡಬೇಕು. ಪ್ರತಿ ಮಂಗಳವಾರ ಗಾಕ್ರೂಸ್ ಸಂಘಟನೆಯ ಸದಸ್ಯರೊಂದಿಗೆ ಮತ್ತು ಪ್ರತಿ ಶನಿವಾರ ಪಿಡಿಒಗಳೊಂದಿಗೆ ಸಭೆ ಕಡ್ಡಾಯವಾಗಿ ನಡೆಸುವಂತೆ ಸೂಚಿಸಿದರು.
ಅಭಿಯಾನದ ವೇಳೆ ಗ್ರಾಪಂ ಪಿಡಿಒಗಳು ಯಾವುದೇ ಕಾರಣಕ್ಕೆ ಅರ್ಜಿಗಳ ಸ್ವೀಕೃತಿಯಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ವಾರದಲ್ಲಿ ಎರಡು ಸಲ ಸಭೆ ನಡೆಸಲು ಅಸಡ್ಡೆ ತೋರುವ ತಾಪಂ ಇಒಗಳ ವಿರುದ್ಧವೂ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
ವಿಫಲ: ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒದಗಿಸಿದ ತಂತ್ರಾಂಶದ ದಾಖಲೆಗಳಲ್ಲಿ ಇದುವರೆಗೆ ಕೇವಲ 13 ಸಾವಿರ ಜನರಿಗೆ ಉದ್ಯೋಗ ನೀಡಿದ ಬಗ್ಗೆ ದಾಖಲಿಸಲಾಗಿದೆ. ವಾಸ್ತವದಲ್ಲಿ 75 ಸಾವಿರ ಗುರಿ ಸಾಧಿಸಬೇಕಿತ್ತು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ. ಮುದ್ದುಮೋಹನ್, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸೇರಿದಂತೆ ಜಿಲ್ಲೆಯ ಎಲ್ಲ ತಾಪಂಗಳ ಇಒಗಳು, ಗ್ರಾಪಂಗಳ ಪಿಡಿಒಗಳಿದ್ದರು.