ಉದ್ಯೋಗ ಖಾತ್ರಿಗೆ ಶೀಘ್ರವೇ ಅರ್ಜಿ ಸಲ್ಲಿಸಿ
ಕ.ಪ್ರ. ವಾರ್ತೆ ರಾಯಚೂರು ಡಿ.19
ರಾಜ್ಯದ ವಿವಿಧೆಡೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಜಾರಿಯಲ್ಲಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ತಗ್ಗಿದೆ ಎಂದಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಗ್ರಾಮೀಣಾಭಿವೃದ್ಧಿ) ಆಯುಕ್ತ ಮುನೀಶ್ ಮೌದ್ಗಿಲ್, ಮುಂದಿನ ಮಾರ್ಚ್ ತಿಂಗಳಲ್ಲಿ ಕೆಲಸಕ್ಕಾಗಿ ಈಗಲೇ ಅರ್ಜಿ ಸಲ್ಲಿಸಬೇಕೆಂದು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನವರಿ ನಂತರ ಲೋಕಸಭೆ ಚುನಾವಣೆ ಪೂರ್ವ ತಯಾರಿ ಹಿನ್ನೆಲೆ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆಸಕ್ತರು ಈಗಲೇ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.
ವಿಸ್ತರಣೆ: ಉದ್ಯೋಗ ಖಾತ್ರಿ ಯೋಜನೆಯಡಿ ಕಾಮ್ ಮಾಂಗೋ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಈವರೆಗೆ 5 ಸಾವಿರ ಅರ್ಜಿಗಳು ಬಂದಿದ್ದು, ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಮುಂದಿನ 10 ದಿನದಲ್ಲಿ 50 ಸಾವಿರ ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲಿಯೇ ರಾಜ್ಯದ 10 ಜಿಲ್ಲೆಗಳಲ್ಲಿ ಕಾಮ್ ಮಾಂಗೋ ಅಭಿಯಾನವನ್ನು ಆರಂಭಿಸಲಾಗತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳ ಅಸಮರ್ಪಕ ಕಾರ್ಯ ವೈಖರಿ ಹಾಗೂ ಸಂಪರ್ಕ ಕೊರತೆಯಿಂದಾಗಿ ಉದ್ಯೋಗ ಖಾತ್ರಿ ಯೋಜನೆಯ ಜಾರಿಯಲ್ಲಿ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆ ಸ್ವಯಂ ಸೇವಾ ಸಂಘಟನೆಗಳನ್ನು ತೊಡಗಿಸಿಕೊಂಡು ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಉಚಿತ ಸಹಾಯವಾಣಿ ಕೇಂದ್ರ: ಅಭಿಯಾನದಡಿ ಗ್ರಾಮೀಣ ಪ್ರದೇಶದಲ್ಲಿ ಜನರ ಮನೆಮನೆಗೆ ತೆರಳಿ ಕೆಲಸದ ಅರ್ಜಿಗಳನ್ನು ಕಡ್ಡಾಯವಾಗಿ ಪಡೆಯಲು ಪಿಡಿಒಗಳಿಗೆ ತಾಕೀತು ಮಾಡಿರುವುದಾಗಿ ತಿಳಿಸಿದ ಅವರು, ಬೆಂಗಳೂರಿನಲ್ಲಿ ಸಹಾಯವಾಣಿ ತೆರೆಯಲಾಗಿದೆ. ರಾಜ್ಯದ ಯಾವುದೇ ಮೂಲೆಯಿಂದ ಉದ್ಯೋಗಕ್ಕಾಗಿ ಬೇಡಿಕೆಯನ್ನು ಮುಂದಿಡಲು ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ರಾಜ್ಯದ ಯಾವುದೇ ಪ್ರದೇಶದಿಂದಲೂ ಉದ್ಯೋಗ ಖಾತ್ರಿ ಅಡಿ ಕೆಲಸ ಕೇಳಲು ಇದುವರೆಗೆ ಕೂಲಿ ಕಾರ್ಮಿಕರು ಉಚಿತ ಸಹಾಯವಾಣಿ 1800425866ಕ್ಕೆ ಕರೆ ಮಾಡಿಲ್ಲ. ಇದಕ್ಕೆ ಮಾಹಿತಿಯ ವಿತರಣೆಯ ಕೊರತೆಯೇ ಕಾರಣ ಎಂಬುದು ಪತ್ತೆಯಾಗಿದೆ. ಕೂಲಿಕಾರ್ಮಿಕರು ಕೆಲಸ ಬೇಕೆಂದು ಬೇಡಿಕೆಯಿರಿಸಿದಲ್ಲಿ ಕೂಡಲೇ ಇಲಾಖೆಯಿಂದ ಸಂಬಂಧಿಸಿದ ಪಿಡಿಒ ಗಮನಕ್ಕೆ ತಂದು ಕೆಲಸದ ಭರವಸೆ ನೀಡಲಾಗುವುದು ಎಂದು ಹೇಳಿದರು.
ಕಾಲ್ ಟು ಪಿಡಿಒ: ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗೆ ಇಲಾಖೆ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಅರ್ಜಿಗಳ ಮಾಹಿತಿ ಪಡೆಯಲು ಇಲಾಖೆಯು ರಾಜ್ಯ ಕಚೇರಿಯಲ್ಲಿ ಕಾಲ್ ಸೆಂಟರ್ ಆರಂಭಿಸಲಾಗುತ್ತಿದೆ. ಪ್ರತಿ ದಿನ ಪಿಡಿಒ ಗಳಿಗೆ ಬೆಂಗಳೂರಿನಿಂದಲೇ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ಯೋಜನೆ ಜಾರಿಯಲ್ಲಿ ಇರುವ ತೊಡಕುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 6 ಸಾವಿರ ಗ್ರಾಪಂ.ಗಳಿದ್ದು, ಪ್ರತಿದಿನ ಪಿಡಿಒಗಳಿಗೆ ದೂರವಾಣಿ ಕರೆ ಮಾಡಲಾಗುತ್ತದೆ. ಈ ಕಾಲ್ ಸೆಂಟರ್ ಮುಂದಿನ 10 ದಿನಗಳಲ್ಲಿ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಇಲಾಖೆಯ ಆಯುಕ್ತ ಮೌದ್ಗಿಲ್ ತಿಳಿಸಿದರು. ಈ ಸಂದರ್ಭ ಜಿಪಂ ಸಿಇಒ ಡಾ. ಮುದ್ದುಮೋಹನ್, ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಇದ್ದರು.