ಬಿಎಸ್ಸೆನ್ನೆಲ್ ಕಾರ್ಮಿಕರ ಧರಣಿ
ದೇವದುರ್ಗ: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸ ವಜಾಗೊಳಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯ ಬಿಎಸ್ಸೆನ್ನೆಲ್ ಕ್ಯಾಶುವಲ್, ಗುತ್ತಿಗೆ ಕಾರ್ಮಿಕರ ಒಕ್ಕೂಟದ ತಾಲೂಕು ಸಮಿತಿ ಒತ್ತಾಯಿಸಿದೆ. ಪಟ್ಟಣದ ಬಿಎಸ್ಸೆನ್ನೆಲ್ ಗುರುವಾರ ಸಮಿತಿಯ ತಾಲೂಕು ಘಟಕದಿಂದ ಧರಣಿ ನಡೆಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ಜನ ಗುತ್ತಿಗೆ ಕಾರ್ಮಿಕರನ್ನು ಏಕಾಏಕಿ ಹಾಗೂ ಕಾನೂನು ಬಾಹಿರವಾಗಿ ವಜಾ ಮಾಡಿರುವುದನ್ನು ಖಂಡಿಸಿದ ಹೋರಾಟಗಾರರು, ವಜಾಗೊಂಡವರನ್ನು ಕೂಡಲೇ ಪುನಾ ನೇಮಿಸಿಕೊಳ್ಳಬೇಕೆಂದು ಒತ್ತಾಯಿಸಿದರು. 2000ದಿಂದ 2004ರವರೆಗೆ ಕಾರ್ಮಿಕರಿಗೆ ಬಾಕಿಯಿರುವ 49.92 ಲಕ್ಷ ಭವಿಷ್ಯ ನಿಧಿಯನ್ನು ತಕ್ಷಣ ಪಾವತಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ನೀಡಬೇಕೆಂಬುದು ಸೇರಿದಂತೆ 9 ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು. ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಹಿರೇಬೂದೂರು, ಸಮಿತಿ ಗೌರವಾಧ್ಯಕ್ಷರು ಸಿಐಟಿಯು ಮುಖಂಡರಾದ ಗಿರಿಯಪ್ಪ, ಭೀಮರಾಯ ಬಿ., ಅಮರೇಶ ಗಾಣಧಾಳ, ಹನುಮಂತ್ರಾಯ ವಗಂಡಗಳಿ, ವಸಂತ ಜಾಲಹಳ್ಳಿ, ವೆಂಕಟೇಶ ನವಿಲಗುಡ್ಡ, ಬಸನಗೌಡ, ರಾಮು ನಾಯಕ, ಮಹೇಶ ಮಸರಕಲ್ ಇದ್ದರು.