ಸಿಇಟಿ: ಎಸ್‌ಎಫ್‌ಐ ಖಂಡನೆ
ಲಿಂಗಸ್ಗೂರು: ರಾಜ್ಯ ಸರ್ಕಾರ ಸಿಇಟಿ ಮೂಲಕ ಸೀಟು ಹಂಚಿಕೆ ಮಾಡಬೇಕು ಹಾಗೂ ಶುಲ್ಕ ನಿಗದಿಪಡಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ತಹಸೀಲ್ದಾರ್ ಜಿ.ಎಸ್.ಮಹಾಜನ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸರ್ಕಾರ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆ ಹೆಸರಿನಲ್ಲಿ ವೃತ್ತಿ ಶಿಕ್ಷಣ ಮಾರಾಟದ ವಸ್ತುವನ್ನಾಗಿ ಮಾಡಲು ಹೊರಟಿದ್ದು, ಕಾಯ್ದೆ ಜಾರಿಯಿಂದ ವೃತ್ತಿ ಶಿಕ್ಷಣ ಕನಸು ಹೊತ್ತು ವಿದ್ಯಾರ್ಥಿಗಳ ಕನಸಿಗೆ ಭಂಗ ತಂದಿದೆ. ಈಗಾಗಲೇ ಏರಿಕೆ ಮಾಡಿರುವ ಶುಲ್ಕವನ್ನು ತಕ್ಷಣ ಬಡ ವಿದ್ಯಾರ್ಥಿಗಳ ಕೈಗೆಟಕುವಂತೆ ನಿಗದಿಗೊಳಿಸಬೇಕು.
ಸರ್ಕಾರಿ ಸೀಟುಗಳ ಸಂಖ್ಯೆ ಹೆಚ್ಚಿಸಿ 75:25ರ ಅನುಪಾತದಲ್ಲಿ ಹಂಚಿಕೆ ಮಾಡಬೇಕು. ಸಿಇಟಿ ಅಕ್ರಮ ಸೀಟು ಮಾರಾಟ ದಂಧೆ ಜಾಲವನ್ನು ತಕ್ಷಣ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರಿಗಿಸಬೇಕು.
ಸರ್ಕಾರಿ ಕಾಲೇಜುಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಹೊಸ ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ಕಾಲೇಜುಗಳನ್ನು ಆರಂಭಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆ ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನವನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಎಸ್.ರಂಗನಾಥ, ಮುಖಂಡರಾದ ಪ್ರಶಾಂತ, ರಮೇಶ, ಉದಯಕುಮಾರ, ಶಿವುಕುಮಾರ, ಆರೋಫ್, ರಾಜು ಸೇರಿದಂತೆ ಇದ್ದರು.