ಸುದ್ದಿ ಸಂಕ್ಷೇಪ
ಇಂದು ಬ್ಲಾಕ್ ಕಾಂಗ್ರೆಸ್ ಸಭೆ
ದೇವದುರ್ಗ: ಅರಕೇರಾ ಮತ್ತು ದೇವದುರ್ಗ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯನ್ನು ಡಿ.20ರಂದು ಕರೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ ತಿಳಿಸಿದ್ದಾರೆ. ತಾಲೂಕಿನ ಮಾನಸಗಲ್ ಗ್ರಾಮದ ರಂಗನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಅರಕೇರಾ ಮತ್ತು ದೇವದುರ್ಗ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಕರೆದಿದ್ದು, ಅಂದು ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯನ್ಯ ಅವರ ಆಗಮನದ ಪೂರ್ವಭಾವಿಯಾಗಿ ಸಭೆ ಸೇರಿ ಇನ್ನಿತರ ವಿಷಯದ ಬಗ್ಗೆ ಚರ್ಚಿಸಲಾಗುತ್ತಿದ್ದು, ಈ ಸಭೆಗೆ ಶಾಸಕರಾದ ಎ.ವೆಂಕಟೇಶ ನಾಯಕ, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ ಸೇರಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಛಲವಾದಿಗಳಿಗೆ ಬಹಿಷ್ಕಾರಕ್ಕೆ ಖಂಡನೆ
ದೇವದುರ್ಗ: ಬಾಗಲಕೋಟೆ ಜಿಲ್ಲೆಯ ಗದ್ಯಾಳ ಗ್ರಾಮದಲ್ಲಿ ಛಲವಾದಿ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರಿಲಿಂಗಪ್ಪ ಕೋಳೂರು ಒತ್ತಾಯಿಸಿದ್ದಾರೆ. ಅವರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ದೇಶ ಸ್ವತಂತ್ರಗೊಂಡು 67 ವರ್ಷವಾದರೂ ನಾಗರಿಕ ಸಮಾಜ ತಲೆತಗ್ಗಿಸುವಂಥ ಸಾಮಾಜಿಕ ಬಹಿಷ್ಕಾರ ಹಾಕಿರುವುದನ್ನು ಸಮಿತಿ ಖಂಡಿಸುತ್ತದೆ. ಗದ್ಯಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ ಕುಟುಂಬಗಳಿಗೆ ಮನಸ್ತಾಪದ ಹೆಸರಿನಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಅತ್ಯಂತ ಅಮಾನವೀಯ ಎಂದು ಆರೋಪಿಸಿದ್ದಾರೆ. ತಾಲೂಕು ಸಂಘಟನಾ ಸಂಚಾಲಕ ಅಂಜಿನೇಯ್ಯ ಬಡಿಗೇರ, ದಲಿತ ಮುಖಂಡ ಎನ್.ಲಿಂಗಪ್ಪ ಜಾಲಹಳ್ಳಿ, ನರಸಪ್ಪ ವಕೀಲರು ಚಿಂಚೋಡಿ, ಮಲ್ಲಿಕಾರ್ಜುನ ಮಸರಕಲ್, ರಂಗನಾಥ ಕೊಂಬಿನ್ ಸೇರಿ ಅನೇಕರಿದ್ದರು.