'ಕಾಮ್ ಮಾಂಗೋ'ಗೆ ಕೂಲಿ ಕಾರ್ಮಿಕರ ನಿರಾಸಕ್ತಿ
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.20
ಕೂಲಿ ಕಾರ್ಮಿಕರಿಗೆ ಖಾತ್ರಿಯಾಗದ ಉದ್ಯೋಗ, ಸರ್ಕಾರ ನಿರ್ಧರಿಸಿರುವ ಕೂಲಿ ದರವೂ ತೀರಾ ಕಡಿಮೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಕೂಲಿ ದರದ ಹೆಚ್ಚಳ ಮತ್ತು ದಾಖಲೆಗಳ ನಿರ್ವಹಣೆಯ ಗೊಂದಲದಿಂದಾಗಿ ಬಹು ಮಹತ್ವಾಕಾಂಕ್ಷೆಯ ಕಾಮ್ ಮಾಂಗೋ ಅಭಿಯಾನಕ್ಕೆ ಜಿಲ್ಲೆಯಲ್ಲಿ ತೀವ್ರ ಹಿನ್ನಡೆಯಾಗಿದೆ.
ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯಲ್ಲಿನ ತೊಡಕುಗಳನ್ನು ಅರಿತು ಕೂಲಿ ಕಾರ್ಮಿಕರ ಬಳಿಯೇ ಅಧಿಕಾರಿಗಳು ತೆರಳಿ ಅವರನ್ನು ಕರೆತಂದು ಕೆಲಸ ನೀಡುವ ಕಾಮ್ ಮಾಂಗೋ ಅಭಿಯಾನಕ್ಕೆ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆ ಆಯ್ಕೆಯಾಗಿದ್ದು, ಸ್ಪಂದನೆ ಮಾತ್ರ ಹೇಳಿಕೊಳ್ಳುವಂತಿಲ್ಲ.
260.61 ಲಕ್ಷ ಕೂಲಿ ಬಾಕಿ: ಜಿಲ್ಲೆಯಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆ ಅಡಿ 2,44,813 ಕುಟುಂಬಗಳು ನೋಂದಾಯಿಸಲ್ಪಟ್ಟಿವೆ. ಒಟ್ಟು 8,97,060 ಫಲಾನುಭವಿಗಳಿದ್ದಾರೆ. ಇದರಲ್ಲಿ 2,43,517 ಜನ ಉದ್ಯೋಗ ಚೀಟಿ ಪಡೆದಿದ್ದಾರೆ. 13.35 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದುವರೆಗೆ ಜಿಪಂ.ನಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ 5,761.42 ಲಕ್ಷ ವೆಚ್ಚ ಮಾಡಲಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ 260.61 ಲಕ್ಷ ಬಾಕಿ ಕೂಲಿಯನ್ನು ಪಾವತಿಸಬೇಕಿದೆ. ಕಳೆದ ಸಾಲಿನ ಮೊತ್ತ 681.61 ಲಕ್ಷ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಜಿಪಂ ಮೂಲಗಳು ಹೇಳಿವೆ.
ಒಂದೆಡೆ ಖಾತ್ರಿ ಯೋಜನೆ ಅಡಿ ಕೋಟಿ ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಆದರೆ ಯೋಜನೆಯಡಿ ನೋಂದಾಯಿಸಿಕೊಳ್ಳುವುದು, ಬ್ಯಾಂಕ್ ಖಾತೆ ಹೊಂದುವುದು, ಉದ್ಯೋಗ ಚೀಟಿ ಪಡೆಯುವುದರಂಥ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿದೆ. ಹಾಗೆಯೇ ಉದ್ಯೋಗ ಮಾಡಿ ಮುಗಿಸಿ ಕೂಲಿ ಮೊತ್ತ ಪಡೆಯಲೂ ತಿಂಗಳುಗಟ್ಟಲೇ ಕಾಯಬೇಕು. ಈ ಹಿನ್ನೆಲೆಯಲ್ಲಿ ಇದುವರೆಗೆ ಅನೇಕ ಸಂದರ್ಭ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ(ಗ್ರಾಕೂಸ್) ಹೋರಾಟ ನಡೆಸಿದ್ದಿದೆ.
ಕಡಿಮೆ ಕೂಲಿ: ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಯನಿರ್ವಹಿಸಲು ನೂರೆಂಟು ತೊಡಕುಗಳಿವೆ. ಅವುಗಳೆಲ್ಲವನ್ನೂ ದಾಟಿ ಕೆಲಸ ಮಾಡಿದರೂ ದೊರೆಯುವ ಕೂಲಿ ಮಾತ್ರ ದಿನಕ್ಕೆ 174 ಮಾತ್ರ. ರಾಜಕೀಯ ಪ್ರಭಾವ, ಗ್ರಾಪಂ ಮಟ್ಟದಲ್ಲಿ ಸಿಬ್ಬಂದಿಯ ಕಿರುಕುಳದಿಂದ ಬೇಸತ್ತಿರುವ ಜಿಲ್ಲೆಯ ಬಹುತೇಕ ಕೂಲಿ ಕಾರ್ಮಿಕರು ಮಾರುಕಟ್ಟೆಯಲ್ಲಿಯೇ ಕಾರ್ಯನಿರ್ವಹಿಸಿ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡುವ ಕೂಲಿಗಿಂತ ಹೆಚ್ಚಿನ ಮೊತ್ತವನ್ನು ದಿನವೂ ಪಡೆಯುತ್ತಿದ್ದಾರೆ.
ಕಾಮ್ ಮಾಂಗೋ ಅಭಿಯಾನ: ಜಿಲ್ಲೆಯಲ್ಲಿ ಕೆಲಸಕ್ಕಾಗಿ ಗುಳೆ ಹೋಗುವುದು ತೀರಾ ಸಾಮಾನ್ಯ. ಇದನ್ನು ತಡೆಯಲು ಜಿಪಂ ಉದ್ಯೋಗ ಖಾತ್ರಿ ಬಳಸಲು ಯತ್ನಿಸಿ ಸೋತಿದೆ ಎನ್ನಬಹುದು. ಖಾತ್ರಿ ಯೋಜನೆಯಲ್ಲಿ ಜಿಲ್ಲೆಯು ಮುಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಗುಳೆ ಮಾತ್ರ ನಿಂತಿಲ್ಲ.
ಉದ್ಯೋಗ ಖಾತ್ರಿ ಯೋಜನೆಗೆ ಜಿಲ್ಲೆಯಲ್ಲಾಗಿರುವ ಸೋಲು ತಪ್ಪಿಸಲು ಕೇಂದ್ರ ಸರ್ಕಾರ ಕಾಮ್ ಮಾಂಗೋ ಅಭಿಯಾನ ಆರಂಭಿಸಿದೆ. ಡಿ.5ರಿಂದ 2014ರ ಜ.4ರವರೆಗೆ 30 ದಿನಗಳ ಕಾಲ ಅಭಿಯಾನ ನಡೆಯಲಿದೆ. ಅಭಿಯಾನ ಆರಂಭಗೊಂಡು 15 ದಿನಗಳೇ ಕಳೆದರೂ ಕೆಲಸ ಬೇಡಿದವರ ಸಂಖ್ಯೆ ಕೇವಲ 5 ಸಾವಿರ ಮಾತ್ರ.
ಅಭಿಯಾನಕ್ಕೆ ಸ್ಪಂದನೆಯಿಲ್ಲ: ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ಕೇವಲ 5 ಸಾವಿರ ಅರ್ಜಿಗಳು ಮಾತ್ರ ಬಂದಿವೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಅಭಿಯಾನಕ್ಕೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಳಲು ತೋಡಿಕೊಂಡಿದ್ದಾರೆ.
ಒಂದೆಡೆ ಕೂಲಿಕಾರ್ಮಿಕರು ಗುಳೆ ಹೋಗುವುದು ಆರಂಭಗೊಂಡಿದೆ. ಮತ್ತೊಂದೆಡೆ ಯೋಜನೆಯಲ್ಲಿನ ದಾಖಲೆಗಳ ನಿರ್ವಹಣೆ, ರಾಜಕೀಯ ಪ್ರಭಾವದ ಕೈಚಳಕ, ಕೂಲಿ ಹಣ ಪಾವತಿಯಲ್ಲಿನ ವಿಳಂಬ ಹಾಗೂ ಕಡಿಮೆ ಕೂಲಿದರದಿಂದಾಗಿ ಕಾಮ್ ಮಾಂಗೋ ಅಭಿಯಾನಕ್ಕೆ ಜಿಲ್ಲೆಯಲ್ಲಿ ತೀವ್ರ ಹಿನ್ನಡೆಯಾಗಿರುವುದಂತೂ ಸುಳ್ಳಲ್ಲ.