ಪಡಿತರ ಚೀಟಿಗೆ ಆಗ್ರಹಿಸಿ ಗ್ರಾಮಸ್ಥರ ಮುತ್ತಿಗೆ
ಲಿಂಗಸ್ಗೂರು: ತಾಲೂಕಿನ ಪೈದೊಡ್ಡಿ ಗ್ರಾಮದ ಫಲಾನುಭವಿಗಳು ಪಡಿಚೀಟಿಗೆ ಅರ್ಜಿ ಸಲ್ಲಿಸಿದರೂ ಇದುವರೆಗೆ ಕಾರ್ಡ್ ವಿತರಣೆ ಮಾಡಿಲ್ಲ. ಕೂಡಲೇ ಪಡಿತರ ಕಾರ್ಡ ವಿತರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಆಹಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಗ್ರಾಮದ ಸಾರ್ವಜನಿಕರು ಪಡಿತರ ಚೀಟಿ ಪಡೆಯಲು ಸುಮಾರು 350 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಕೇವಲ 12 ಕಾರ್ಡುಗಳು ಮಾತ್ರ ವಿತರಣೆ ಮಾಡಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಕೂಡಲೇ ಪಡಿತರ ಕಾರ್ಡ್ ವಿತರಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಆಹಾರ ನಿರೀಕ್ಷಕ ಕುಲ್ಕರ್ಣಿ, ಪಡಿತರ ಕಾರ್ಡ್ ಪಡೆಯಲು ಬಂದ ಅರ್ಜಿಗಳನ್ನು ಪರಿಶೀಲಿಸಿ, ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ, ಪೈದೊಡ್ಡಿ ಗ್ರಾಮದ ಪ್ರಭುಗೌಡ, ತುಳಜಾರಾಮ್, ಗ್ಯಾನಯ್ಯಸ್ವಾಮಿ, ಎಂ.ಆರ್. ಪಾಟೀಲ್, ಹರಿಶ್ಚಂದ್ರ ನಾಯಕ, ಅಶೋಕ, ಮುದುಕಪ್ಪ ಗುರಿಕಾರ, ಮಾನಪ್ಪ ಅಂಬಿಗೇರ, ರಂಗಪ್ಪ ಇದ್ದರು.
--
ಮಟಕಾ: ಇಬ್ಬರ ಬಂಧನ
ರಾಯಚೂರು: ಲಿಂಗಸ್ಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಮಟಕಾ ಆಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಗ್ರಾಮದ ಶರಣಪ್ಪ ಮತ್ತು ಶರಣಯ್ಯಸ್ವಾಮಿ ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಅಗಸಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಜೂಜಾಟಕ್ಕಿರಿಸಿದ್ದ ನಗದು 4125 ಜಪ್ತಿ ಮಾಡಲಾಗಿದೆ. ಈ ಕುರಿತು ಹಟ್ಟಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.