ಸಕಾಲ ಅನುಷ್ಠಾನಕ್ಕೆ ಅಧಿಕಾರಿ, ಸಿಬ್ಬಂದಿ ಉಡಾಫೆ
ರಾಯಚೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಮತ್ತು ಕಂಪ್ಯೂಟರ್ಗಳ ಕೊರತೆ. ಅಧಿಕಾರಿಗಳಿಗೆ ಸಕಾಲ ಸಮರ್ಪಕ ಅನುಷ್ಠಾನಕ್ಕೆ ನಿರಾಸಕ್ತಿ. ಇಲಾಖೆಗಳಲ್ಲಿ ನಡೆಯದ ಸರ್ಕಾರದ ಸಕಾಲ ಯೋಜನೆಯ ಜಾದೂ. ಅಧಿಕಾರಿ ಮತ್ತು ಸಿಬ್ಬಂದಿಯದ್ದೂ ಯಾವತ್ತೂ ಉಡಾಫೆಯ ಸ್ಪಂದನೆ. ಪರಿಣಾಮ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಸಕಾಲ ಯೋಜನೆಗೆ ಸ್ಪಂದನೆಯೇ ಇಲ್ಲದಂತಾಗಿದೆ.
- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಗೆ ಒದಗಿರುವ ದುಸ್ಥಿತಿಯಿದು.
ಅರ್ಜಿ ದಾಖಲಿಸಲು ಹಿಂದೇಟು: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹೊರತುಪಡಿಸಿದರೆ ಇನ್ನುಳಿದ ಎಲ್ಲ ಇಲಾಖೆಗಳಲ್ಲಿ ಸಕಾಲ ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಯೋಜನೆ ಅಡಿ ಸಲ್ಲಿಕೆಯಾಗುವ ಅರ್ಜಿಗಳ ಪ್ರಮಾಣ ಲೆಕ್ಕಕ್ಕಿಲ್ಲದಂತಿದೆ. ಅಧಿಕಾರಿಗಳ ನಿರಾಸಕ್ತಿಗೆ ಬೆಂಬಲಿಸುತ್ತಿರುವ ಸಿಬ್ಬಂದಿಯು ವಿವಿಧ ಇಲಾಖೆಗಳಡಿ ಸಕಾಲ ಅಡಿ ಅರ್ಜಿ ಪಡೆದು ದಾಖಲಿಸುವುದನ್ನೇ ಮರೆತಿದ್ದಾರೆ ಎನ್ನಬಹುದು. ಅಥವಾ ಸಕಾಲದ ಹೊರಗೆ ಲಾಭ ಪಡೆಯಲು ಯೋಜನೆಯಡಿ ಅರ್ಜಿ ದಾಖಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಕುಸಿತ: ಜಿಲ್ಲೆಯ ವಿವಿಧ ಇಲಾಖೆಗಳಡಿ ಸಕಾಲ ಯೋಜನೆಯಡಿ ಸಾರ್ವಜನಿಕರು ವಿವಿಧ ಅಗತ್ಯ ಪ್ರಮಾಣ ಪತ್ರ ಮತ್ತಿತರೆ ಮಾಹಿತಿಯನ್ನು ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆಯ ಪ್ರಮಾಣವೇನೂ ಕಡಿಮೆಯಾಗಿಲ್ಲ. ಆದರೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಕರಾಮತ್ತಿನಿಂದಾಗಿ ಸಕಾಲ ಅಡಿ ಅಂಥ ಅರ್ಜಿಗಳು ದಾಖಲಾಗುತ್ತಿಲ್ಲ.
ಜಿಲ್ಲಾ ಪೊಲೀಸ್ ಇಲಾಖೆಯು ಸಕಾಲ ಯೋಜನೆಯ ಅನುಷ್ಠಾನದಲ್ಲಿ ತೀರಾ ಮುಂದಿದೆ. ಈ ಯೋಜನೆ ಅಡಿ ನವೆಂಬರ್ನಲ್ಲಿ ಸಲ್ಲಿಕೆಯಾದ 242 ಅರ್ಜಿಗಳ ಪೈಕಿ ಕೇವಲ 2 ಅರ್ಜಿಗಳು ಮಾತ್ರ ವಿಲೇವಾರಿಯಾಗಿಲ್ಲ. ಪರಿಣಾಮ ಅನುಷ್ಠಾನದಲ್ಲಿ ಪೊಲೀಸ್ ಇಲಾಖೆಯು ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ.
ವಾಣಿಜ್ಯ ತೆರಿಗೆ ಇಲಾಖೆಗೆ ಹಿನ್ನಡೆ: ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಕೆಯಾದ 4 ಅರ್ಜಿಗಳ ವಿಲೇವಾರಿಯಾಗಿಲ್ಲ. ಸಕಾಲ ಕುರಿತು ಮಾಹಿತಿ ಪ್ರದರ್ಶಿಸಿಲ್ಲ ಎಂಬ ದೂರು ಕೇಳಿ ಬಂದಿದೆ. ಇನ್ನು ವಾಣಿಜ್ಯ ತೆರಿಗೆ ಇಲಾಖೆಗೆ ನವೆಂಬರ್ನಲ್ಲಿ 871 ಅರ್ಜಿ ಸಕಾಲದಡಿ ದಾಖಲಾಗಿದ್ದು, 847 ಅರ್ಜಿ ವಿಲೇವಾರಿಯಾಗಿವೆ. 35 ತಿರಸ್ಕಾರಗೊಂಡಿವೆ. ತಿರಸ್ಕಾರಕ್ಕೆ ಕಾರಣ ತಿಳಿಸಿಲ್ಲ ಎಂದು ಆರೋಪವಿದೆ.
ಆರೋಗ್ಯ ಇಲಾಖೆಯಲ್ಲಿ ನವೆಂಬರ್ನಲ್ಲಿ 7,745 ಅರ್ಜಿ ಸಕಾಲ ಅಡಿ ನೋಂದಾಯಿಸಿದ್ದು, ಶೇ.91.89 ಅರ್ಜಿ ವಿಲೇವಾರಿ ಮಾಡಿದ್ದು, ಅರ್ಜಿಗಳನ್ನು ಸಕಾಲ ಅಡಿ ದಾಖಲಿಸುತ್ತಿಲ್ಲ ಎಂಬ ದೂರಿದೆ. ಮಾನವಿ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಯಾವುದೇ ಅರ್ಜಿ ಸಕಾಲದಲ್ಲಿ ದಾಖಲಿಸಿಲ್ಲ ಎಂಬುದು ವಿಶೇಷ.
ಶಿಕ್ಷಣ ಇಲಾಖೆಯೂ ಹಿಂದು: ಶಿಕ್ಷಣ ಇಲಾಖೆಯಲ್ಲಿ 32 ಸೇವೆಗಳನ್ನು ಸಕಾಲ ಅಡಿ ಸೇರ್ಪಡೆಗೊಳಿಸಿದ್ದು, 222 ಅರ್ಜಿ ಮಾತ್ರ ಸಕಾಲದಲ್ಲಿ ಸಲ್ಲಿಕೆಯಾಗಿವೆ. ಶೇ.11.35 ರಷ್ಟು ಅರ್ಜಿ ವಿಲೇವಾರಿಯಾಗಿದೆ. ಈ ಇಲಾಖೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ಇನ್ನು ಗ್ರಂಥಾಲಯ, ಇನ್ನತ ಶಿಕ್ಷಣ(ಕಾಲೇಜು ಶಿಕ್ಷಣ), ರೇಷ್ಮೆ ಇಲಾಖೆಗಳಲ್ಲಿ ಸಕಾಲ ಯೋಜನೆ ಅಡಿ ಅರ್ಜಿಗಳೇ ದಾಖಲಾಗಿಲ್ಲವಂತೆ. ಹಾಗೆಯೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಕೇವಲ 52 ಅರ್ಜಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 48 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಬಹುತೇಕ ಎಲ್ಲ ಇಲಾಖೆಗಳಲ್ಲೂ ಸಕಾಲಕ್ಕೆ ಸೂಕ್ತ ಸ್ಪಂದನೆಯೇ ಇಲ್ಲವೆನ್ನುವಷ್ಟು ನಿರ್ಲಕ್ಷ್ಯ ವ್ಯಕ್ತವಾಗಿದೆ.
- ಜಗನ್ನಾಥ ಆರ್. ದೇಸಾಯಿ