ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

20ನಿಮಿಷ 20ಸುದ್ದಿ

Mainashree
Updated On : 22 Dec 2013, 10:29 am

ರಸ್ತೆ ವಿಭಜಕ ಮೇಲೇರಿದ ಲಾರಿ; ಸಂಚಾರಕ್ಕೆ ತೊಂದರೆ
ಲಿಂಗಸ್ಗೂರು: ಪಟ್ಟಣದ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ವಿಭಜಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಮಧ್ಯೆ ಶುಕ್ರವಾರ ಮಧ್ಯರಾತ್ರಿ ಲಾರಿಯೊಂದು ವಿಭಜಕದ ಮೇಲೇರಿ ನಿಂತಿದ್ದರಿಂದ ಶನಿವಾರ ಸಂಚಾರಕ್ಕೆ ತೊಂದರೆಯಾಯಿತು. ಇಲ್ಲಿನ ಅಮರೇಶ್ವರ ಮಕ್ಕಳ ಆಸ್ಪತ್ರೆಯಿಂದ ಶಾಸಕರ ಸರ್ಕಾರಿ ಮಾದರಿ ಶಾಲೆಯವರೆಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆ ಡಾಂಬರೀಕರಣ, ಚರಂಡಿ ಹಾಗೂ ಪಾದಚಾರಿ ರಸ್ತೆ ಮುಗಿದಿದ್ದು, ಈ ಮಾರ್ಗದಲ್ಲಿ ವೇಗವಾಗಿ ಬಂದ ಬೆಂಗಳೂರಿಗೆ ಕೋಳಿಗಳಿಗೆ ಬಳಸುವ ಆಹಾರಧಾನ್ಯ ಹೊತ್ತು ಸಾಗುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ವಿಭಜಕದ ಮೇಲೇರಿದೆ. ಇದರಿಂದಾಗಿ ಶನಿವಾರ ದಿನವಿಡೀ ಈ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಲಿಂಗಸ್ಗೂರು; ನಾಳೆ ವಿಶ್ವ ವಿಕಲಚೇತನರ ದಿನಾಚರಣೆ
ಲಿಂಗಸ್ಗೂರು: ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ತಾಲೂಕು ಘಟಕದಿಂದ ಡಿ.23ರಂದು ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಕಾರ್ಯದರ್ಶಿ ಸುರೇಶ ಪಿ. ಭಂಡಾರಿ ಮುದಗಲ್ ಹಾಗೂ ಅಧ್ಯಕ್ಷ ಅಮರೇಶ ಎ. ಪಾಟೀಲ್ ಐದಬಾವಿ  ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಟ್ಟಣದ ಬಸವಸಾಗರ ವೃತ್ತದಲ್ಲಿರುವ ವಿಕಲಚೇತನರ ಭವನದಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಶಾಸಕರಾದ ಮಾನಪ್ಪ ವಜ್ಜಲ್, ಪ್ರತಾಪಗೌಡ ಪಾಟೀಲ್, ಸಹಾಯಕ ಆಯುಕ್ತ ಟಿ. ಯೋಗೇಶ್, ತಹಸೀಲ್ದಾರ ಜಿ.ಎಸ್. ಮಹಾಜನ್, ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಹಟ್ಟಿ ಚಿನ್ನದಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕ ಅಶೋಕ್ ಆರ್. ವಾಲ್ಮೀಕಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.

ಜೂಜು ಅಡ್ಡೆ ಮೇಲೆ ದಾಳಿ; 17,190 ರು. ಜಪ್ತಿ
ಲಿಂಗಸ್ಗೂರು: ಲಿಂಗಸ್ಗೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಇಸ್ಪೀಟ್ ಮತ್ತು ಮಟಕಾ ಅಡ್ಡೆ ಮೇಲೆ ದಾಳಿ ಮಾಡಿದ ಡಿವೈಎಸ್ಪಿ ಅನಿತಾ ಹದ್ದಣ್ಣವರ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡವು ಜೂಜಾಟದಲ್ಲಿ ತೊಡಗಿದ್ದ 11 ಜನರ ವಿರುದ್ಧ ಕೇಸ್ ದಾಖಲಿಸಿದೆ. ವಿವಿಧೆಡೆ ಜೂಜಾಡುತ್ತಿದ್ದ 11 ಜನರ ಮೇಲೆ ಪ್ರಕರಣ ದಾಖಲಿಸಿ 17,190 ರು. ಜಪ್ತಿ ಮಾಡಲಾಗಿದೆ. ಇಸ್ಪೀಟ್, ಮಟಕಾ ಜೂಜಾಟದಲ್ಲಿ ತೊಡಗಿದ್ದ ಮಸ್ಕಿಯ 2, ದೇವದುರ್ಗದಲ್ಲಿ 2, ಹಟ್ಟಿ ಮತ್ತು ಜಾಲಹಳ್ಳಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ಸೇರಿ ಒಟ್ಟು 11 ಆರೋಪಿಗಳ ವಿರುದ್ಧ 6 ಪ್ರಕರಣ ದಾಖಲಿಸಲಾಗಿದೆ. ಮನವಿ: ಜೂಜು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ನೆರವಾಗಲು ಸಾರ್ವಜನಿಕರು ಡಿವೈಎಸ್ಪಿ ಲಿಂಗಸ್ಗೂರು- 94808 03821, ಸಿಪಿಐ ಲಿಂಗಸ್ಗೂರು- 94808 03833, ಸಿಪಿಐ ಮಸ್ಕಿ- 94808 09834, ಲಿಂಗಸ್ಗೂರು- 94808 03854, ಪಿಎಸ್‌ಐ ಮಸ್ಕಿ- 94808 03854, ಪಿಎಸ್‌ಐ ಮುದಗಲ್- 94808 03857, ಪಿಎಸ್‌ಐ ದೇವದುರ್ಗ- 94808 03858, ಪಿಎಸ್‌ಐ ಜಾಲಹಳ್ಳಿ- 94808 03859, ಪಿಎಸ್‌ಐ ಗಬ್ಬೂರ- 94808 03860 ಕರೆ ಮಾಡಿ ಮಾಹಿತಿ ನೀಡುವಂತೆ ಡಿವೈಎಸ್ಪಿ ಅನಿತಾ ಹದ್ದಣ್ಣವರ್ ಮನವಿ ಮಾಡಿದ್ದಾರೆ.

ಹತ್ತಿ ಬೆಳೆ ಕ್ಷೇತ್ರೋತ್ಸವ; ರೈತರಿಗೆ ಮಾಹಿತಿ ನೀಡಿಕೆ
ಮಸ್ಕಿ: ಇಲ್ಲಿಗೆ ಸಮೀಪದ ಉಟಗನೂರು ಗ್ರಾಮದ ಮೌನೇಶ ಕುರುಬರ ಅವರ ಜಮೀನಿನಲ್ಲಿ ಇತ್ತೀಚೆಗೆ ಹತ್ತಿ ಬೆಳೆಯ ಕಾವೇರಿ ಜಾದೂ ಬಿ.ಜಿ-2 ಹೈಬ್ರಿಡ್ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾವೇರಿ ಸೀಡ್ ಕಂಪನಿಯ ರಾಜ್ಯ ಪ್ರಾದೇಶಿಕ ವ್ಯವಸ್ಥಾಪಕ ರಮೇಶ ಜೋಗಿ ರೈತರೊಂದಿಗೆ ಸಮಗ್ರವಾಗಿ ಸಂವಾದ ನಡೆಸಿ ಉತ್ತಮ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಲಾಭ ಕಂಡುಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಮಾಹಿತಿ ಒದಗಿಸಿದರು. ಉತ್ತರ ಕರ್ನಾಟಕದ ನೀರಾವರಿ ಹಾಗೂ ಒಣ ಜಮೀನುಗಳಲ್ಲಿ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವಂಥ ಬಿತ್ತನೆ ಬೀಜ ಬಳಕೆ ಮಾಡಬೇಕು. ಆಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಕೇವಲ ಏಕ ಬೆಳೆ ಪದ್ಧತಿಯನ್ನು ಅನುಸರಿಸಿದಲ್ಲಿ ನಷ್ಟದ ಪ್ರಮಾಣ ಹೆಚ್ಚು. ಈ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆಗಳ ಬಗ್ಗೆ ಚಿಂತಿಸಬೇಕೆಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಯೋಜಕ ಬಾಲು ಜಾಧವ, ಸಿದ್ದಣ್ಣ ಕುರುಗೋಡ, ಶರಣಪ್ಪಗೌಡ ಪೋತ್ನಾಳ, ಬಸನಗೌಡ ಹಾಲಾಪುರ ಸೇರಿ ಅನೇಕರಿದ್ದರು.

ಅಕ್ರಮ ಮರಳು ಸಾಗಣೆ: ತಹಸೀಲ್ದಾರರಿಂದ ಟ್ರ್ಯಾಕ್ಟರ್ ವಶ
ಮುದಗಲ್: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟ್ರ್ಯಾಕ್ಟರ್‌ಗಳನ್ನು ತಹಸೀಲ್ದಾರ ಮಹಾಜನ್ ವಶಪಡಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ನಾಗಲಾಪುರ ಹಳ್ಳದಿಂದ ರಾತ್ರೋರಾತ್ರಿ ಮರಳು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ರಾತ್ರಿಯಿಡೀ ಮರಳು ಸಾಗಿಸುತ್ತಿದ್ದ ಟ್ಯಾಕ್ಟರ್‌ಗಳನ್ನು ಹಿಡಿಯಲು ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಲಾಯಿತು. ಮುದಗಲ್ ಹೊರವಲಯದ ಪೆಟ್ರೋಲ್ ಪಂಪ್ ಬಳಿ ಮರಳು ತುಂಬಿರುವ ಟ್ಯಾಕ್ಟರ್‌ಗಳನ್ನು ತಡೆಯಲು ಹೋದಾಗ ಚಾಲಕರು ವೇಗವಾಗಿ ಚಲಿಸಿ ತಪ್ಪಿಸಿಕೊಂಡು ಹೋಗುತ್ತಿದ್ದರು. ವಾಹನದ ಕೀಲಿ ಕಿತ್ತುಕೊಂಡು ಜಮೀನಲ್ಲಿ ಪರಾರಿಯಾಗಿದ್ದರು. ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಮುದಗಲ್ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಲಾಗಿದೆ. ಹುನಕುಂಟಿ ಗ್ರಾಮದ ಟ್ರ್ಯಾಕ್ಟರ್ ಎಂದು ಗೊತ್ತಾಗಿದ್ದು, ಮಾಲೀಕ, ಚಾಲಕರ ಮೇಲೆ ದೂರು ನೀಡಲಾಗಿದೆ ಎಂದು ತಹಸೀಲ್ದಾರ್ ಮಹಾಜನ ತಿಳಿಸಿದರು.

ಗೋ ರಕ್ಷಣೆ ಎಲ್ಲರ ಕರ್ತವ್ಯ: ವಿಶ್ವಪ್ರಸನ್ನ ತೀರ್ಥರು
ಸಿಂಧನೂರು: ನಗರದ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಉಡುಪಿಯ ಪೇಜಾವರ ಮಠದ ಕಿರಿಯಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಗೋವುಗಳ ರಕ್ಷಣೆ ಎಲ್ಲರ ಕರ್ತವ್ಯ. ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಇವುಗಳನ್ನು ತಪ್ಪದೇ ಬಳಸುವ ಎಲ್ಲರೂ ಗೋವುಗಳ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು. ನಿತ್ಯವೂ ಗೋಗ್ರಾಸಕ್ಕಾಗಿ ಕೈಲಾದಷ್ಟು ಸಹಾಯ ಸಲ್ಲಿಸಬೇಕು. ಗುರುಗಳಾದ ವಿಶ್ವೇಶತೀರ್ಥಶ್ರೀಪಾದರ ಅಪ್ಪಣೆಯಂತೆ ಉಡುಪಿಯ ಹತ್ತಿರದ ನೀಲಾವರದಲ್ಲಿ ಒಂದು ಗೋಶಾಲೆಯನ್ನು ನಿರ್ಮಿಸಿ 10 ವರ್ಷಗಳು ಕಳೆದಿವೆ ಎಂದು ಹೇಳಿದರು. ಸಿಂಧನೂರಿನ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಹಿರಿಯರಾದ ಎಂ.ಕೆ. ಗೌರಕರ್, ರಾಮಕೃಷ್ಣಾಚಾರ್ಯ ಗೋನವಾರ್, ನರಸಿಂಹಾಚಾರ್ಯ ಮಠಾಧಿಕಾರ್, ಮಧ್ವರಾಜಾಚಾರ್ಯ, ವೆಂಕಟೇಶ ಪ್ರಭು, ವೆಂಕಟೇಶ ಕೆಂಗಲ್, ಪಾಂಡುರಂಗ ದೇಸಾಯಿ ಶೇಷಗಿರಿರಾವ್ ಇದ್ದರು. ಈ ವೇಳೆ ಶ್ರೀಗಳು ರಾಯಚೂರು ರಸ್ತೆಯಲ್ಲಿರುವ ಗೋಶಾಲೆಗೆ ಭೇಟಿ ನೀಡಿದರು.

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಯಚೂರು: ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ನಿರ್ವಹಿಸುವ ಕ್ರೀಡಾ ಶಾಲೆ ಹಾಗೂ ವಸತಿ ನಿಲಯಗಳಿಗೆ 2014-15ನೇ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದೆ. ಕಿರಿಯರ ವಿಭಾಗದ ಬಾಲಕ ಬಾಲಕಿಯರ ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟಬಾಲ್, ವಾಲಿಬಾಲ್ ಮತ್ತು ಜಿಮ್ನಾಸ್ಟಿಕ್ ವಿಭಾಗಗಳಲ್ಲಿನ ಬಾಲಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. 14ವರ್ಷದೊಳಗಿನ ಮತ್ತು 8ನೇ ತರಗತಿಗೆ ಪ್ರವೇಶ ಪಡೆಯುವವರು ಮಾತ್ರ ಅರ್ಹರಾಗಿದ್ದಾರೆ. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲೆ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ದೃಢೀಕರಣ ಪತ್ರ ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಲಿಂಗಸ್ಗೂರು ತಾಲೂಕಿನ ಒಳಾಂಗಣ ಕ್ರೀಡಾಂಗಣದಲ್ಲಿ ಲಿಂಗಸ್ಗೂರು ತಾಲೂಕಿನ ವಿದ್ಯಾರ್ಥಿಗಳ ಆಯ್ಕೆ ಡಿ.24ರಂದು, ದೇವದುರ್ಗ ತಾಲೂಕಿನ ಆಯ್ಕೆ ಅರಕೇರಾ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಡಿ.26ರಂದು, ಮಾನವಿಯಲ್ಲಿ ಡಿ.27ರಂದು ಕಾಕತೀಯ ಪ್ರೌಢಶಾಲೆಯಲ್ಲಿ, ಡಿ.28ರಂದು ಸಿಂಧನೂರಿನ ಆರ್‌ಜಿ ಎಂ ಕಾಲೇಜು ಮೈದಾನದಲ್ಲಿ ಹಾಗೂ ರಾಯಚೂರು ತಾಲೂಕಿನ ಆಯ್ಕೆ ಡಿ.30ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಮಹಾಪರಿನಿರ್ವಾಣ ದಿನಾಚರಣೆ
ಲಿಂಗಸ್ಗೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟ ತಾಲೂಕು ಘಟಕದಿಂದ ಡಿ.22 ರಂದು ಡಾ. ಬಿ.ಆರ್. ಅಂಬೇಡ್ಕರರ ಮಹಾಪರಿನಿರ್ವಾಣ ದಿನ ಆಚರಿಸಲಾಗುವುದೆಂದು ಸಂಘದ ಪ್ರಭುಲಿಂಗ ಮೇಗಳಮನಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಟ್ಟಣದ ಶಾದಿ ಮಹಲ್‌ನಲ್ಲಿ ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಮುಖಂಡರಾದ ಖಾದರಪಾಶಾ, ರುದ್ರಪ್ಪ ಬ್ಯಾಗಿ, ಲಾಲ್ ಹುಸೇನ ಕಂದಗಲ್, ಅಮರಣ್ಣ ಗುಡಿಹಾಳ, ಸಂಗಣ್ಣ ದೇಸಾಯಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.

ಮಕ್ಕಳ ಪ್ರತಿಭೆ ಗುರುತಿಸಲು 'ಕಾರಂಜಿ' ಪೂರಕ: ರುದ್ರಗೌಡ
ಮುದಗಲ್: ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೂರಕವಾಗಿದೆ ಎಂದು ತಾಪಂ ಸದಸ್ಯ ರುದ್ರಗೌಡ ಪಾಟೀಲ್ ತುರಡಗಿ ಹೇಳಿದರು. ವಂದಾಲಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಬನ್ನಿಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮೀಣ ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಅಡಗಿರುತ್ತವೆ. ಅವನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯಮಟ್ಟಕ್ಕೆ ಕಳಿಸುವ ಪ್ರಯತ್ನ ಶಿಕ್ಷಕರು, ನಿರ್ಣಯಕರು ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಬಿಆರ್‌ಸಿ ಸಂಯೋಜನಕ ನಾಗನಗೌಡ ಬಯ್ಯಾಪೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಶಿಕ್ಷಣ ಸಂಯೋಜಕ ಹಾ. ಮುನಿಯಪ್ಪ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗಂಗನಗೌಡ, ಅತಿಥಿಗಳಾಗಿ ನೀಲಪ್ಪಗೌಡ, ಸಿಆರ್‌ಸಿ ಸಂಯೋಜಕ ಬಸವರಾಜ ಹಿರೇಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಗನಗೌಡ ತುರಡಗಿ, ಹೂನೂರು ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ಬಸವರಾಜ, ಅಮರೇಗೌಡ ಬ್ಯಾಲಿಹಾಳ, ವೀರಭದ್ರಗೌಡ ತುರಡಗಿ, ಗುರುಬಸಪ್ಪ ಮು.ಗು, ಮಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಹೋರಾಟಕ್ಕೆ ಸಂದ ಜಯ; ಎಐಡಿಎಸ್‌ಒ
ರಾಯಚೂರು: ವೃತ್ತಿ ಶಿಕ್ಷಣ ಸಂಸ್ಥೆಗಳ 2006ರ ಕಾಯಿದೆ ಜಾರಿಯನ್ನು ರಾಜ್ಯ ಸರ್ಕಾರ ತಡೆಹಿಡಿದಿರುವುದನ್ನು ಸ್ವಾಗತಿಸಿರುವ ಎಐಡಿಎಸ್‌ಒ ಈ ನಿಟ್ಟಿನಲ್ಲಿ ಸಂಘಟನೆಯು ನಡೆಸಿದ ಹೋರಾಟ ವಿದ್ಯಾರ್ಥಿಗಳಿಗೆ ಸಂದ ಜಯ ಎಂದು ತಿಳಿಸಿದೆ. ಈ ಕುರಿತು ನಗರದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದ ಸಂಘಟನೆಯ ಪ್ರಮುಖರು ಹಾಗೂ ವಿದ್ಯಾರ್ಥಿಗಳು, ಕೊನೆಗೂ ಸರ್ಕಾರ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿದ್ದು, ಹಳೆಯ ಪದ್ಧತಿಯಂತೆಯೇ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಡಿ.19ರಂದು ರಾಜ್ಯಾದ್ಯಂತ ಹೋರಾಟ ನಡೆಸಲಾಗಿತ್ತು. ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ಮನಸ್ಥಿತಿ ಅರಿತ ಸರ್ಕಾರ ತನ್ನ ನಿರ್ಧಾರ ಹಿಂಪಡೆದಿದೆ. ಆದರೂ ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರದಿಂದ ಇದ್ದು ಸರ್ಕಾರವು ಇಂತಹ ಕಾಯ್ದೆ ಜಾರಿಗೆ ಮುಂದಾದರೆ ಮತ್ತೆ ಬೃಹತ್ ಹೋರಾಟಕ್ಕೆ ಸಜ್ಜಾಗುವಂತೆ ಈ ವೇಳೆ ಪ್ರಮುಖರು ಸಲಹೆ ನೀಡಿದರು. ನಗರದ ಎಸ್‌ಆರ್‌ಪಿಎಸ್ ಕಾಲೇಜಿನ ಆವರಣದಲ್ಲಿ ನಡೆದ ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷ ಮಹೇಶ್ ಚೀಕಲಪರ್ವಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಣ್ಣಿನ ಉಚಿತ ಚಿಕಿತ್ಸೆ ಶಿಬಿರಕ್ಕೆ ಸಂಸದ ಚಾಲನೆ
ಸಿಂಧನೂರು: ತಾಲೂಕಿನ ಚಿಕ್ಕಬೇರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ, ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಣ್ಣಿನ ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕಣ್ಣುಗಳ ಆರೋಗ್ಯವನ್ನು ಕಡೆಗಣಿಸದಂತೆ ಕಿವಿ ಮಾತು ಹೇಳಿ, ಗ್ರಾಮೀಣ ಭಾಗದಲ್ಲಿ ಉಚಿತ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿದರು. ಅರಳಹಳ್ಳಿಯ ರೇವಣಸಿದ್ದಯ್ಯ ತಾತ, ಕಾಂತಯ್ಯ ಸ್ವಾಮಿ ಹಿರೇಮಠ, ಮಾಳಿಂಗರಾಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕೆ. ಗೋನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣು ಪಾ. ಹಿರೇಮಠ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ, ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಅಣಗೌಡ್ರು, ನೇತ್ರಾಧಿಕಾರಿ ಧನಂಜಯ ಮೂರ್ತಿ, ಬಸನಗೌಡ ಬುಕ್ಕನಟ್ಟಿ, ವೀರನಗೌಡ ನಿಡಿಗೋಳ, ನಾಗಪ್ಪ ಯತ್ನಟ್ಟಿ, ಜಹಿರುಲ್ಲಾ ಹಸನ್, ವೆಂಕೋಬ ಕಲ್ಲೂರು ಇತರರು ಇದ್ದರು.

ಜ.7ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಗುಲ್ಬರ್ಗ: ರಾಷ್ಟ್ರಪತಿಗಳು ಬರುವ ಜನವರಿ 7ರಂದು ಕೇಂದ್ರ ಸರ್ಕಾರದ ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿ, ಐಐಐಟಿ ಮತ್ತು ಎನ್‌ಐಟಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಸಂದೇಶ ನೀಡಲಿದ್ದಾರೆ. ವೀಡಿಯೋ ಕಾನ್ಫರೆನ್ಸ್‌ನಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ಎಸ್. ಮೂರ್ತಿ ಸ್ವಾಗತ ಭಾಷಣ ಮಾಡಲಿದ್ದಾರೆ. ಕುರುಕ್ಷೇತ್ರದ ಎನ್‌ಐಟಿ ಸಂಸ್ಥೆಯ ನಿರ್ದೇಶಕರು ವಂದನಾರ್ಪಣೆ ಮಾಡಲಿದ್ದಾರೆಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ಎಸ್.ಮೂರ್ತಿ ತಿಳಿಸಿದರು. 12ನೇ ಪಂಚವಾರ್ಷಿಕ ಯೋಜನೆ ಅಂತ್ಯದವರೆಗೆ 150 ಬೋಧಕ ಸಿಬ್ಬಂದಿ, 200 ಪೂರಕ ಸಿಬ್ಬಂದಿಯಲ್ಲಿ 100 ನೇರ ಮತ್ತು 100 ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ಎಸ್. ಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2014ರ ಫೆಬ್ರವರಿ 6 ಮತ್ತು 7 ರಂದು ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆಯನ್ನು ರಾಷ್ಟ್ರಪತಿ ಭವನದಲ್ಲಿ ಕರೆದಿದ್ದಾರೆ ಎಂದರು.

ಅಂಬಾದೇವಿ ಜಾತ್ರೆ; ಪೂರ್ವಭಾವಿ ಸಭೆ ಯಶಸ್ವಿ
ಸಿಂಧನೂರು: ಜಿಲ್ಲೆಯ ಸುಪ್ರಸಿದ್ಧ ಯಾತ್ರಾಸ್ಥಳ ಸಿದ್ಧಪರ್ವತ ಅಂಬಾಮಠದ ಅಂಬಾದೇವಿಯ ಜಾತ್ರಾ ಮಹೋತ್ಸವವು ಜ.16ರಂದು ನಡೆಯಲಿರುವ ಹಿನ್ನೆಲೆ ಇತ್ತೀಚೆಗೆ ನಗರದ ತಾಪಂ.ನಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಹಾಯಕ ಆಯುಕ್ತ ಯೋಗೀಶ್ ಮಾತನಾಡಿ, ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಹಾಗೂ ಜಾತ್ರಾ ಮಹೋತ್ಸವದ ಸುತ್ತಮುತ್ತ 6 ಕಿ.ಮೀ.ವರೆಗೆ ಮದ್ಯ ಮಾರಾಟ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಕಳೆದ ಬಾರಿಯಂತೆ ಈ ಬಾರಿಯು ಸಹ ಅಗತ್ಯ ನೀರು ಪೂರೈಕೆಯಾಗಬೇಕು. ಯಾವುದೇ ಸಂದರ್ಭದಲ್ಲೂ ಸಮಸ್ಯೆ ಉಂಟಾಗಬಾರದು. ನೀರಿನ ಪೂರೈಕೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಜಿಪಂ ಜೆಇ ಆಂಜನೇಯ ಅವರಿಗೆ ಸೂಚಿಸಲಾಯಿತು. ರಥದ ಚಕ್ರಗಳಲ್ಲಿ ಬಿರುಕು ಹೆಚ್ಚಿದ್ದರಿಂದ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಿ, ಮಾಡಬೇಕಾದ ಕೆಲಸದ ಬಗ್ಗೆ ಮಾಹಿತಿ ನೀಡುವಂತೆ ಪಿಡಬ್ಲ್ಯೂಡಿ ಎಇಇ ಗೊಂಚಿಗೆ ಸೂಚಿಸಲಾಯಿತು. ಯಾತ್ರಿ ನಿವಾಸ ಕಟ್ಟಡವನ್ನು ಇದುವರೆಗೆ ಹಸ್ತಾಂತರಿಸದ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಗೆ ಪತ್ರ ಬರೆದು ಜಾತ್ರೆಯ ಪೂರ್ವದಲ್ಲಿ ಹಸ್ತಾಂತರ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಬೇಡ ಜಂಗಮ ಸಮಾಜ ಪದಾಧಿಕಾರಿಗಳ ನೇಮಕ
ರಾಯಚೂರು: ಮಾನವಿ ತಾಲೂಕು ಬೇಡ ಜಂಗಮ ಸಮಾಜ ಸಂಘದ ಯುವ ಘಟಕದ ನೂತನ ಪದಾಧಿಕಾರಿಗಳನ್ನು ಸಂಘದ ಅಧ್ಯಕ್ಷ ಬಸವರಾಜಯ್ಯಸ್ವಾಮಿ ಹಿರೇಮಠ ಬಲ್ಲಟಗಿ ಅವರು ನೇಮಕ ಮಾಡಿದ ಆದೇಶ ಹೊರಡಿಸಿದ್ದಾರೆ. ಬೇಡ ಜಂಗಮ ಸಮಾಜ ಸಂಘ ಯುವ ಘಟಕದ ನೂತನ ಅಧ್ಯಕ್ಷರಾಗಿ ಎಂ. ಶಿವಶಂಕ್ರಯ್ಯ ಸ್ವಾಮಿ ರಾಜಲದಿನ್ನಿ, ಗೌರವಾಧ್ಯಕ್ಷರಾಗಿ ಜಗದೀಶಯ್ಯಸ್ವಾಮಿ ಮಲ್ಲಿನಮಡಗು, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸ್ವಾಮಿ ಬಾಳೇಹಳ್ಳಿ ಹಿರೇಮಠ ಬಲ್ಲಟಗಿ, ಶಿವಯ್ಯಸ್ವಾಮಿ ಬಲ್ಲಟಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ರುದ್ರಯ್ಯ ಸ್ವಾಮಿ ಭೋಗಾವತಿ ಹಾಗೂ ಮಲ್ಲಿಕಾರ್ಜುನ ಮಾಚನೂರು ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ನಾಲವಾರ ಶ್ರೀಗೆ ತುಲಾಭಾರ
ಚಿತ್ತಾಪುರ: ತಾಲೂಕಿನ ಮರತೂರ ಗ್ರಾಮದ ಟೆಂಗಳಿ ದಂಪತಿಗಳು ಸುಕ್ಷೇತ್ರ ನಾಲವಾರದ ಡಾ. ಸಿದ್ದ ತೋಟೆಂದ್ರ ಶ್ರೀ ತುಲಾಭಾರವನ್ನು ಕೈಗೊಂಡು ಆಶೀರ್ವಾದ ಪಡೆದರು. ಸಂಜೆ ಗ್ರಾಮಕ್ಕೆ ಆಗಮಿಸಿ ಶ್ರೀಗಳಿಗೆ ಗ್ರಾಮದ ಮುಖ್ಯದ್ವಾರದಿಂದ ಪೂರ್ಣ ಕುಂಭ ಕಳಸಗಳೊಂದಿಗೆ ಸ್ವಾಗತಿಸಲಾಯಿತು. ಮೆರವಣಿಗೆಯೂ ಕಾಶಿ ವಿಶ್ವನಾಥ ದೇವಾಲಯ, ಹುಣಚಿರಾಯ ಮಠದ ಮೂಲಕ ಡೊಳ್ಳು, ಕುಣಿತ, ಸಿಡಿಮದ್ದು, ವಾಧ್ಯಗಳೊಂದಿಗೆ, ಜಯಘೋಷದೊಂದಿಗೆ ಅದ್ಧೂರಿ ಮೆರವಣಿಗೆ ನೆರವೇರಿತು. ಮೆರವಣಿಗೆಯ ನಂತರ ಗ್ರಾಮದ ಅಣವೀರಪ್ಪ ಟೆಂಗಳಿ ಕುಟುಂಬದ ದಂಪತಿಗಳು ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರವನ್ನು ನೆರವೇರಿಸಿ ಕೃತಾರ್ಥರಾದರು. ಕಾಶಿನಾಥ ಮಳಗ, ಸುನೀಲ್, ಅಭಿಷೇಕ ಯರಗೋಳರಿಂದ ಸಂಗೀತ ಸೇವೆ ನಡೆಯಿತು.

25ರಿಂದ ಕಡಕೋಳ ಜಾತ್ರಾ ಮಹೋತ್ಸವ
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಕಡಕೋಳದ ಮಡಿವಾಳೇಶ್ವರರ ಜಾತ್ರಾ ಮಹೋತ್ಸವವು ಬರುವ ಡಿ.25 ಮತ್ತು 26ರಂದು ವೈಭವದಿಂದ ಜರುಗಲಿದೆ. ಡಿ.25ರಂದು ಬೆಳಗ್ಗೆ 6ಕ್ಕೆ ಮಡಿವಾಳೇಶ್ವರರ ಕರ್ತು ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ. ನಂತರ ಗುರುಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ 8.30ಕ್ಕೆ ಜಂಗಮ ಮಹೇಶ್ವರರಿಗೆ ಅಯ್ಯಾಚಾರ ದೀಕ್ಷಾ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 7.30ಕ್ಕೆ ಧರ್ಮಸಭೆ ನಡೆಯಲಿದ್ದು, ಚೌಡಾಪುರದ ಸಿದ್ಧರಾಮ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಡಕೋಳ ಮಡಿವಾಳೇಶ್ವರ ಮಠದ ರುದ್ರಮುನಿ ಶ್ರೀ ನೇತೃತ್ವ ವಹಿಸಲಿದ್ದಾರೆ. ಶಾಸಕ ಡಾ. ಅಜಯಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಎಸ್.ಆರ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಬಾಬುರಾವ ಚಿಂಚನಸೂರ ಮಡಿವಾಳೇಶ್ವರ ವಿರಚಿತ ನಿಜಲೀಲಾಮೃತ ವಚನಗಳ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಾಸಕರಾದ ಮಾಲಿಕಯ್ಯ ಗುತ್ತೇದಾರ, ರಮೇಶ ಭೂಸನೂರ, ಗುರುಪಾಟೀಲ್, ನ್ಯಾಯವಾದಿ ಹಿರೇಮಠ, ರಾಜುಗೌಡ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments