ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಡಿಮೆ ಅವಧಿ; ಕರೆಂಟ್ ಕಾಮಗಾರಿ ಪೂರ್ಣ

Mainashree
Updated On : 22 Dec 2013, 10:29 am

ಕ.ಪ್ರ. ವಾರ್ತೆ  ರಾಯಚೂರು  ಡಿ.21
ದೇಶದ ಉತ್ತರ ಮತ್ತು ದಕ್ಷಿಣ ರಾಜ್ಯಗಳ ವಿದ್ಯುತ್ ಸಾಗಣೆ ಮಾರ್ಗಕ್ಕೆ ಸಂಪರ್ಕ ಕೊಂಡಿಯಾಗಿರುವ ರಾಯಚೂರು- ಸೋಲಾಪುರ ವಿದ್ಯುತ್ ಮಾರ್ಗದ ಪ್ರಾಯೋಗಿಕ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ರಾಯಚೂರು-ಸೋಲಾಪುರ ಮಧ್ಯೆ 765 ಕೆವಿ ವಿದ್ಯುತ್ ಮಾರ್ಗದ ನಿರ್ಮಾಣ ಪೂರ್ಣಗೊಂಡಿದ್ದು, ಡಿ.29ರ ನಂತರ ವಿದ್ಯುತ್ ಪ್ರವಹಿಸುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ರಾಯಚೂರು ನಗರದ ಅಸ್ಕಿಹಾಳ ಬಳಿಯಿಂದ ಮಹಾರಾಷ್ಟ್ರದ ಸೋಲಾಪುರವರೆಗಿನ 765ಕೆವಿ/400 ವಿದ್ಯುತ್ ಸಾಗಣೆ ಮಾರ್ಗದ ಕಾಮಗಾರಿ ನಿಗದಿತ ಸಮಯಕ್ಕೂ ಮುನ್ನವೇ ಪೂರ್ಣಗೊಂಡು, ಪವರ್ ಗ್ರಿಡ್ ಕಾರ್ಪೊರೇಷನ್ ಸಾಧನೆ ಮೆರೆದಿದೆ.
ರಾಯಚೂರಿನ ಅಸ್ಕಿಹಾಳ ಬಳಿ ದಕ್ಷಿಣ ಭಾರತದ ಮೊಟ್ಟ ಮೊದಲ 765/400 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ಕಳೆದ ವರ್ಷದ ಅ.12 ರಂದು ಚಾಲನೆ ನೀಡಲಾಗಿತ್ತು. ದೇಶದ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಇದುವರೆಗೆ ವಿದ್ಯುತ್ ಸಾಗಣೆಗೆ ಅಗತ್ಯ ಮಾರ್ಗ ಮತ್ತು ವಿತರಣೆ ಕೇಂದ್ರದ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಹೆಚ್ಚುವರಿ ವಿದ್ಯುತ್ ದೇಶದ ಉತ್ತರ ಭಾಗದಲ್ಲಿ ಲಭ್ಯವಿದ್ದರೂ ಅದರ ಸಾಗಣೆ ಮತ್ತು ಸಮರ್ಪಕ ಪೂರೈಕೆಗೆ ಅಡಚಣೆಯಾಗಿತ್ತು.
ದಕ್ಷಿಣ ಭಾರತದ ಮೊದಲ ಯೋಜನೆ: ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೊರೇಷನ್ ಮುಂದಾಗಿತ್ತು. ರಾಯಚೂರಿನ ಅಸ್ಕಿಹಾಳ ಬಳಿ 765/400 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಮುಂದಾಗಿತ್ತು. 93 ಎಕರೆ ಪ್ರದೇಶದಲ್ಲಿ ಈ ಕೇಂದ್ರವಿದ್ದು, ಈ ಕೇಂದ್ರಕ್ಕೆ ರಾಯಚೂರು- ಸೋಲಾಪುರ ಮಧ್ಯೆ ವಿದ್ಯುತ್ ಮುಖ್ಯ ಮಾರ್ಗ ನಿರ್ಮಿಸಿ ಸಂಪರ್ಕ ಕಲ್ಪಿಸುವುದು ಯೋಜನೆ.
ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬೃಹತ್ ವಿದ್ಯುತ್ ಉಪಕೇಂದ್ರ ಎನಿಸಿರುವ ರಾಯಚೂರಿನ ಪವರ್ ಗ್ರಿಡ್‌ನ ವಿದ್ಯುತ್ ಉಪಕೇಂದ್ರದ ಸ್ಥಾಪನೆಗೆ ಕೇಂದ್ರ 650 ಕೋಟಿ ವೆಚ್ಚಕ್ಕೆ ಯೋಜಿಸಿತ್ತು. ವಿದ್ಯುತ್ ಮಾರ್ಗ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 200 ಕಿಮೀ ಉದ್ದದ ರಾಯಚೂರು-ಸೋಲಾಪುರ 765ಕೆವಿ ವಿದ್ಯುತ್ ಸಾಗಣೆ ಮಾರ್ಗವನ್ನು ಈಗಾಗಲೇ ಸಂಪೂರ್ಣವಾಗಿ ನಿರ್ಮಿಸಿದ್ದು ಇದಕ್ಕಾಗಿ 200ಕೋಟಿ ವೆಚ್ಚವಾಗಿದೆ. ಆರ್‌ಟಿಪಿಎಸ್‌ನಿಂದ ಪವರ್ ಗ್ರಿಡ್‌ಗೆ ಸಂಪರ್ಕ ಕಲ್ಪಿಸಲು 400 ಕೆವಿ ವಿದ್ಯುತ್ ಮಾರ್ಗ ಅಳವಡಿಕೆಯೂ ಮುಗಿದಿದೆ.
ಕಳವು ಸ್ಥಗಿತ: ದೇಶದ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಕಳವು ದೊಡ್ಡ ಸಮಸ್ಯೆ. ಆದರೆ ರಾಯಚೂರಿನಲ್ಲಿ ಸ್ಥಾಪಿಸುವ ವಿದ್ಯುತ್ ಕೇಂದ್ರದಿಂದ ಸಾಗಣೆಯಾಗುವ ವಿದ್ಯುತ್ ಕಳವು ಬಹುಮಟ್ಟಿಗೆ ಅಸಾಧ್ಯ ಎಂಬ ರೀತಿ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಪವರ್ ಗ್ರಿಡ್ ಮೂಲಗಳು ತಿಳಿಸಿವೆ.
ವಿದ್ಯುತ್ ಉತ್ಪಾದನೆ ಕೇಂದ್ರದಿಂದ ಕಟ್ಟಕಡೆಯಲ್ಲಿ ವಿದ್ಯುತ್ ಪಡೆಯುವ ರಾಜ್ಯದವರೆಗೂ ಗುಣಮಟ್ಟದ ವಿದ್ಯುತ್ ಪೂರೈಕೆಯ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ನಿರ್ಮಿಸಿರುವ ವಿದ್ಯುತ್ ಗೋಪುರಗಳಿಗೆ ಡಿ.29ರ ನಂತರದಲ್ಲಿ ಯಾವುದೇ ಸಂದರ್ಭ ವಿದ್ಯುತ್ ಪೂರೈಕೆಯಾಗಲಿದೆ ಎಂದು ಪವರ್ ಗ್ರಿಡ್‌ನ ಮೂಲಗಳು ತಿಳಿಸಿವೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಹಿರಿಯ ಅಧಿಕಾರಿ ಎಲ್.ಆರ್.ಬನ್ಸಲ್, ಈಗಾಗಲೇ ರಾಯಚೂರು- ಸೋಲಾಪುರ ಮಧ್ಯೆ 533 ವಿದ್ಯುತ್ ಗೋಪುರಗಳ ನಿರ್ಮಾಣ ಮುಗಿದಿದೆ. ವಿದ್ಯುತ್ ತಂತಿ ಅಳವಡಿಸಲಾಗಿದೆ. ಸಣ್ಣಪುಟ್ಟ ಕೆಲಸ ಬಾಕಿಯಿದ್ದು ತ್ವರಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 208 ಕಿಮೀ ಉದ್ದದ ಮಾರ್ಗದ ನಿರ್ಮಾಣ ಕಾಮಗಾರಿಯನ್ನು 2014ರ ಮೇ ವೇಳೆಗೆ ಕಾರ್ಪೊರೇಷನ್ ಪೂರ್ಣಗೊಳಿಸುವ ಗುರಿಯಿತ್ತು. ಅವಧಿಗೂ ಮುನ್ನವೇ ಈ ಕಾರ್ಯಮುಗಿಸಿ ಡಿ.29ರ ನಂತರದಲ್ಲಿ ಪ್ರಾಯೋಗಿಕವಾಗಿ ವಿದ್ಯುತ್ ಪ್ರವಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಉಂಟಾಗುವ ಲೋಪದೋಷ ಸರಿಪಡಿಸಿ ಅಂತಿಮವಾಗಿ ಜನವರಿಯ ಕೊನೆಗೆ ಲೋಕಾರ್ಪಣೆ ಮಾಡುವ ಉದ್ದೇಶವಿದೆ ಎಂದಿದ್ದಾರೆ.

ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement