ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕನಿಷ್ಠ ವೇತನ, ಸಾಮಾಜಿಕ ಭದ್ರತೆಗೆ ಆಗ್ರಹ

Mainashree
Updated On : 22 Dec 2013, 10:29 am

ಕ.ಪ್ರ. ವಾರ್ತೆ  ರಾಯಚೂರು  ಡಿ.21
ದುಡಿಯುವ ಮಹಿಳೆಯರಿಗೆ ಕನಿಷ್ಟ ಕೂಲಿ ರು. 10 ಸಾವಿರ, ಕೆಲಸದ ಭದ್ರತೆ ಜತೆಗೆ ಸಾಮಾಜಿಕ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶನಿವಾರ ಸಿಐಟಿಯು ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಉದ್ಯಾನವನದಿಂದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಎಲ್ಲ ವಿಭಾಗದಲ್ಲಿ ದುಡಿಯುವ ಮಹಿಳೆಯರಿಗೆ ಕನಿಷ್ಟ ಕೂಲಿಯನ್ನು ರು. 10 ಸಾವಿರಕ್ಕೆ ನಿಗದಿ ಪಡಿಸಬೇಕು. ಮಹಿಳೆಯರಿಗೆ ಸೇವಾ ಭದ್ರತೆ ಜತೆಗೆ ಸಾಮಾಜಿಕವಾಗಿಯೂ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಸಮಾನ ವೇತನ: 1976ರ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮದಂತೆ ಪುರುಷ ಹಾಗೂ ಮಹಿಳೆಯರಿಗೆ ಸಮಾನ ರೂಪದ ವೇತನ ನೀಡಬೇಕು. ಕೆಲಸದ ನೇಮಕಾತಿಯಲ್ಲಿ ತಾರತಮ್ಯ ಮಾಡಬಾರದು. 1987ರ ಸಮಾನ ವೇತನ ನಿಯಮದಂತೆ ಸೇವಾ ನಿಮಯಗಳಾದ ಬಡ್ತಿ, ತರಬೇತಿ ಮತ್ತು ವರ್ಗಾವಣೆಗಳಲ್ಲಿ ತಾರತಮ್ಯ ಮಾಡಬಾರದೆಂದು ಒತ್ತಾಯಿಸಿದರು.
1961ರ ಹೆರಿಗೆ ಭತ್ಯೆ ಕಾಯಿದೆಯ ಪ್ರಕಾರ ಎಲ್ಲ ವಿಭಾಗಗಳಲ್ಲಿ ದುಡಿಯುವ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆ ನೀಡಬೇಕು. ಗರ್ಭಪಾತ, ಗರ್ಭಿಣಿಯರಿಗೆ ಉಂಟಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಹೆರಿಗೆ ಪೂರ್ವದಲ್ಲಿ ಮತ್ತು ಮಗುವಿಗೆ 15 ತಿಂಗಳು ಆಗುವವರೆಗೆ ಕೆಲಸದ ಅವಧಿಯಲ್ಲಿ ಅವಕಾಶ ಕೊಡಬೇಕೆಂದು ಆಗ್ರಹಿಸಿದರು.
ಹೆರಿಗೆ ಭತ್ಯೆ: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕಿಯರಿಗೆ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆ ಯರಿಗೆ ಗುತ್ತಿಗೆ ಆಧಾರದಲ್ಲಿ ದುಡಿಯುವ ವೇಳೆ ಎಲ್ಲ ವಿಭಾಗದಲ್ಲಿ ಹೆರಿಗೆ ಭತ್ಯೆ ನೀಡುತ್ತಿಲ್ಲ. ದುಡಿಯುವ ಮಹಿಳೆಯೂ ಎಲ್ಲಿಯೇ ಕಾರ್ಯನಿರ್ವಹಿಸಿದರೂ ಹೆರಿಗೆ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.
ವಿಶ್ರಾಂತಿ ಕೊಠಡಿ: ದುಡಿಯುವ ಮಹಿಳೆಯರಿರುವ ಸ್ಥಳದಲ್ಲಿ ಶಿಶುಪಾಲನಾ ಕೇಂದ್ರಗಳು, ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಎಲ್ಲ ಎಪಿಎಂಸಿಗಳಲ್ಲಿ ಮಹಿಳಾ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ದುಡಿಯುವ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆ ನಿಟ್ಟಿನಲ್ಲಿ ಎಲ್ಲ ಹಂತಗಳಲ್ಲಿ ಅಂತರಿಕ ದೂರು ಸಮಿತಿಗಳನ್ನು ರಚಿಸಿ ಲೈಂಗಿಕ ಕಿರುಕುಳದ ವಿರುದ್ಧ ಪ್ರಜ್ಞೆ ಮೂಡಿಸಬೇಕು. ದುಡಿಯುವ ಮಹಿಳೆಗೆ ಸಂಬಂಧಿಸಿದ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷೆ ಎಚ್. ಪದ್ಮಾ, ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ತಾಲೂಕು ಕಾರ್ಯದರ್ಶಿ ಡಿ.ಎಸ್. ಶರಣಬಸವ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement