ಕಾರಂಜಾಕ್ಕೆ ಶೀಘ್ರ ಅನುದಾನ: ಸಚಿವೆ ಉಮಾಶ್ರೀ
ಕ.ಪ್ರ. ವಾರ್ತೆ ಬೀದರ್ ಡಿ. 21
ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕಾರಂಜಾ ಯೋಜನೆಗೆ ಬಾಕಿ ಅನುದಾನ ಬಿಡುಗಡೆ ಸಂಬಂಧ ಕೇಂದ್ರ ಸರ್ಕಾರ ಆಕ್ಷೇಪಗಳನ್ನು ಎತ್ತಿದ್ದು, ಇದಕ್ಕೆಲ್ಲ ಸಮರ್ಪಕ ಉತ್ತರ ನೀಡಿ ಕನಿಷ್ಠ ರು. 54 ಕೋಟಿ ಅನುದಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಭರವಸೆ ಭರವಸೆ ವ್ಯಕ್ತಪಡಿಸಿದರು.
ಅವರು ಜಿಲ್ಲೆಯ ಕಾರಂಜಾ ಯೋಜನೆ ಕುರಿತಂತೆ ಹಳ್ಳಿಖೇಡ(ಬಿ) ಪ್ರವಾಸಿ ಮಂದಿರದಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಕೆಲ ಹಂತಗಳ ಮಾತುಕತೆ ಬಾಕಿಯಿದ್ದು ಇತ್ತ ಅಧಿಕಾರಿಗಳು ಜವಾಬ್ದಾರಿ ಮೆರೆಯಬೇಕಿದೆ ಎಂದರು.
ಜವಾಬ್ದಾರಿ ಇರಲಿ: ಜಿಲ್ಲೆಯ ರೈತರಿಗೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸದೇ ಇದ್ದಲ್ಲಿ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಅಧಿಕಾರಿಗಳು ಎಚ್ಚರಿಕೆಯಿಂದಷ್ಟೇ ಅಲ್ಲ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್ ಮಾತನಾಡಿ, ಅಧಿಕಾರಿಗಳಲ್ಲಿ ಆಸಕ್ತಿ ಕುಂಠಿತವಾಗಿದೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದರು. ಒಂದೆಡೆ ನೀರಿಲ್ಲದೆ ಬೆಳೆಗಳು ಹಾಳಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದರೆ ಜಲಾಶಯಕ್ಕಾಗಿ ತಮ್ಮ ಆಸ್ತಿ ಕಳೆದುಕೊಂಡ ಸಂತ್ರಸ್ತರೂ ಅತಂತ್ರರಾಗಿ ಕುಳಿತಿರುವದು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದರು.
ಅನುದಾನ ಇಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಜಲ ಸಂಪನ್ಮೂಲ ಇಲಾಖೆಯ ನೀರಾವರಿ ಯೋಜನೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರ ದೇವರಾಜ್, ಕಳೆದ ಮೂರ್ನಾಲ್ಕು ದಶಕಗಳಿಂದ ಕುಂಟುತ್ತಲೇ ಸಾಗಿದ್ದ ಕಾರಂಜಾ ಯೋಜನೆಗೆ ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಅನುದಾನದ ಹರಿದಿಲ್ಲ. ಹೀಗಾಗಿ ಯೋಜನೆಯ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸುಮಾರು ರು. 9.9ಕೋಟಿ ಅಂದಾಜು ವೆಚ್ಚದಲ್ಲಿ 1971ರಲ್ಲಿ ಆರಂಭವಾದ ಈ ಯೋಜನೆಗೆ ಈಗಾಗಲೇ ರು. 550 ಕೋಟಿ ವ್ಯಯಿಸಲಾಗಿದ್ದು, ಇನ್ನೂ ಸುಮಾರು ರು. 74 ಕೋಟಿ ಅಗತ್ಯವಿದೆ. ಈ ಪೈಕಿ ಕೇಂದ್ರದ ಪಾಲಾಗಿ ಕನಿಷ್ಠ ರು. 55.72 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಸಂಸದ ಧರಂಸಿಂಗ್ ಅವರು ಈ ನಿಟ್ಟಿನಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿ ಮನ ಒಲಿಸಬೇಕು ಎಂದು ಮನವಿ ಮಾಡಿದರು.
ಯೋಜನೆ ಪೂರ್ಣ: ಒಟ್ಟಾರೆ ಯೋಜನೆಯಿಂದ ಸುಮಾರು 29227 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ್ದು, ಯೋಜನೆಯಡಿಯಲ್ಲಿ ಬಲದಂಡೆ ಕಾಲುವೆ ಕಿಮಿ 131ರ ವರೆಗಿನ ಕಾಮಗಾರಿಗಳು ಹಾಗೂ ಅದರಡಿಯಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ 1ರಿಂದ 106ರವರೆಗೆ ಕಾಮಗಾರಿ ಈಗಾಗಲೇ ಪೂರ್ಣಗೊಳಿಸಲಾಗಿದೆ. ಎಡದಂಡೆ ಕಾಲುವೆ ಕಿ.ಮೀ. 39.5 ವರೆಗಿನ ಕಾಮಗಾರಿ ಹಾಗೂ ಅದರಡಿಯಲ್ಲಿ ಬರುವ ಎಲ್ಲ ವಿತರಣಾ ಕಾಲುವೆ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ವಿವರ ತಿಳಿಸಿದರು.
6364ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ: ಕಾರಂಜಾ ಯೋಜನೆ ಏತ ನೀರಾವರಿ ಕಾಲುವೆ ಕಿ.ಮೀ. 24ವರೆಗೆ ಇರುತ್ತದೆ. ಇದರಲ್ಲಿ ಕಿ.ಮೀ. 21ವರೆಗೆ ಕಾಮಗಾರಿ ಹಾಗೂ ವಿತರಣಾ ಕಾಲುವೆ ಕಾಮಗಾರಿ ಈಗಾಗಲೇ ಪೂರ್ಣಗೊಳಿಸಲಾಗಿದೆ. ಇನ್ನುಳಿದ 3 ಕಿಮೀ ಕಾಮಗಾರಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟಾರೆ ನೀರಾವರಿ ಸೃಷ್ಟಿಸಬೇಕಾದ ಪ್ರದೇಶದ ಪೈಕಿ ಈಗಾಗಲೆ 22793ಹೆಕ್ಟೇರ್ ಪ್ರದೇಶಕ್ಕೆ ಸೌಲಭ್ಯ ಕಲ್ಪಿಸಿದೆ. ಇನ್ನು 6434 ಹೆ. ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಬಾಕಿಯಿದೆ ಎಂದು ತಿಳಿಸಿದರು.
ಅನುದಾನ ಬಿಡುಗಡೆಗೆ ಕೇಂದ್ರ ಹಿಂದೇಟು: ಸುಮಾರು 7.69ಟಿಎಂಸಿ ಸಾಮರ್ಥ್ಯದ 582 ಮೀಟರ್ ಎತ್ತರದ ಕಾರಂಜಾ ಜಲಾಶಯಕ್ಕೆ ಬರಬೇಕಿದ್ದ ನೀರಿನ ಒಳಹರಿವು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕೇಂದ್ರದ ಜಲಸಂಪನ್ಮೂಲ ಇಲಾಖೆ ಅಂಕಿ ಅಂಶಗಳ ಸಮೇತ ಸೂಚಿಸಿ ಆಕ್ಷೇಪಣೆಗಳಿಟ್ಟಿದ್ದರೆ ರಾಜ್ಯದ ಅಧಿಕಾರಿಗಳು ಇದೆಲ್ಲಕ್ಕೂ ನಮ್ಮ ಬಳಿ ಉತ್ತರವಿದೆ ಎನ್ನುತ್ತಿದ್ದಾರಾದರೆ ಇದಕ್ಕೆಲ್ಲ ಉತ್ತರ ಸಿಗುವುದು ಡಿ. 24ರಂದು. ಅಂದು ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ರಾಜ್ಯದ ವತಿಯಿಂದ ವಾದ ಮಂಡಿಸಲಿದ್ದೇವೆ ಎಂದು ದೇವರಾಜ ತಿಳಿಸಿದರು.ಈ ವಿಷಯವಾಗಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಅಧಿಕಾರಿಗಳು ಕೊಂಚವಾದ್ರೂ ಬೇಜವಾಬ್ದಾರಿ ತೋರಿದ್ರೆ ಅನುದಾನ ನೀಡಬೇಕಾದ ಕೇಂದ್ರದ ಬಾಗಿಲು ಮುಚ್ಚಿಕೊಳ್ಳುತ್ತದೆ. ಎಚ್ಚರವಾಗಿರಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ: ಕಾರಂಜಾ ಜಲಾಶಯದಿಂದ ಸುಮಾರು 131 ಕಿಮೀ ಹರಿಯುವ ನೀರಿನ ಕಾಲುವೆಗಳು ಸುಸ್ಥಿರವಾಗಿರಬೇಕು. ಆರಂಭದಿಂದ ಅಂತ್ಯದ ವರೆಗೆ ಅಡೆತಡೆಯಿಲ್ಲದೆ ನೀರು ಹರಿಯುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಒಂದು ವೇಳೆ ಕರ್ತವ್ಯ ಮರೆತರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದರು.
ನೀರು ಬಳಕೆದಾರರ ಮಹಾಮಂಡಳಿ ಅಧ್ಯಕ್ಷ ಸಿಎಚ್ ಪಾಟೀಲ್ ಮಾತನಾಡಿ, ಕಾರಂಜಾ ಜಲಾಶಯದಿಂದ ರೈತರ ಹೊಲಗದ್ದೆಗಳಿಗೆ ನೀರುಣಿಸಬೇಕಾದ ಮುಖ್ಯ ಹಾಗೂ ಒಳ ಕಾಲುವೆಗಳು ಹೂಳಿನಿಂದ ತುಂಬಿದ್ದು, ಒಂದು ವೇಳೆ ಇವುಗಳನ್ನೆಲ್ಲ ಸರಿಪಡಿಸದೇ ನೀರು ಹರಿಸಿದ್ದೆ ಆದಲ್ಲಿ ಹೊಲಗದ್ದೆಗಳಲ್ಲಿ ನೀರು ನುಗ್ಗಿ ಭಾರಿ ಹಾನಿ ಅನುಭವಿಸುವ ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಇದಕ್ಕೆಸಮಜಾಯಿಸಿ ನೀಡಿ, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ರೈತರನ್ನು ಆಕ್ರೋಶಕ್ಕೆ ಗುರಿ ಮಾಡದಂತೆ ಯೋಜನೆ ಪೂರ್ಣಗೊಳಿಸಲು ಶ್ರಮಿಸುವಂತೆ ಸೂಚಿಸಿದರು.ಕೆಲವೇ ದಿನಗಳಲ್ಲಿ ನೀರು ಕಾಲುವೆಯಲ್ಲಿ ಸಮರ್ಪಕವಾಗಿ ಹರಿಯುವದನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿ, ಕೇಂದ್ರ ಜಲಸಂಪನ್ಮೂಲ ಅಧಿಕಾರಿಗಳಿಗೆ ವರದಿ ಸಲ್ಲಿಸುವದಕ್ಕೂ ಮುನ್ನ ಅಗತ್ಯ ಪೂರ್ವ ತಯಾರಿ ಮಾಡಿಟ್ಟುಕೊಳ್ಳಿ ಎಂದು ಅಧೀಕ್ಷಕ ಅಭಿಯಂತರ ದೇವರಾಜರಿಗೆ ಸಚಿವೆ ಉಮಾಶ್ರೀ ಸೂಚಿಸಿದರು.
ಸಭೆಯಲ್ಲಿ ಡಿಸಿ ಡಾ. ಪಿ.ಸಿ ಜಾಫರ್, ಸಿಇಓ ಉಜ್ವಲ್‌ಕುಮಾರ ಘೋಷ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಖಾಜಿ ಅರ್ಷದ್ ಅಲಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಪಾಟೀಲ್ ಇತರರಿದ್ದರು.
ಸಂತ್ರಸ್ತರಿಗೆ ಉದ್ಯೋಗ ಮೀಸಲಾತಿ ಸಡಿಲಿಕೆ
ಬೀದರ್: ಕಾರಂಜಾ ಸಂತ್ರಸ್ತರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ನಿಯಮಗಳನ್ನು ಸರಳಗೊಳಿಸುವತ್ತ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ತಿಳಿಸಿದರು. ಅವರು ಶನಿವಾರ ಕಾರಂಜಾ ಯೋಜನೆ ಪ್ರಗತಿ ಪರಿಶೀಲನೆ ಸಂದರ್ಭ ಮಾತನಾಡಿ, ಸಂತ್ರಸ್ತರ ಆಶಯದಂತೆ ಅವರ ಬಾಳು ಬೆಳಕಾಗಿಸಲು ಅಗತ್ಯ ನಿರ್ಧಾರಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದರು. ಇದಕ್ಕೂ ಮುನ್ನ ಸಂತ್ರಸ್ತ ರೈತ ಮುಖಂಡ ಈಶ್ವರ ಸೋನಿ ಅವರು ಸಂತ್ರಸ್ತರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಕೇವಲ ಡಿ ಗ್ರೂಪ್‌ಗೆ ಸೀಮಿತವಾಗಿದ್ದು, ಇಂದು ಶೈಕ್ಷಣಿಕ ಪ್ರಗತಿ ಹೆಚ್ಚಾಗಿದೆ. ಮೀಸಲಾತಿ ಉನ್ನತ ಹುದ್ದೆಗಳಿಗೂ ಅನ್ವಯಿಸಬೇಕು. ಮೀಸಲಾತಿ ಈಗ 20 ವರ್ಷಗಳಿಗೆ ನಿಗದಿಯಾಗಿದ್ದು ಬದಲಾಗಬೇಕು. ಸಂತ್ರಸ್ತರ ಕುರಿತಾಗಿ ನೀಡುವ ಪ್ರಮಾಣ ಪತ್ರ ಶೀಘ್ರ ವಿತರಣೆಗೆ ಆಗ್ರಹಿಸಿದ್ದರು. ಕಾರಂಜಾ ಯೋಜನೆ ರಾಜ್ಯ ನೀರಾವರಿ ನಿಗಮಕ್ಕೆ ಹಸ್ತಾಂತರವಾಗಿದ್ದು, ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ಯೋಜನೆಗಾಗಿ ಬೇಕಿರುವ ಅನುದಾನದ ಕೊರತೆ ಕಾಡುವುದಿಲ್ಲ ಎಂದು ಉಮಾಶ್ರೀ ತಿಳಿಸಿದರು.