ಸುದ್ದಿ ಸಂಕ್ಷೇಪ
ನಾಳೆ ಜಿಲ್ಲಾ 'ಲೋಕಾ' ಪ್ರವಾಸ
ರಾಯಚೂರು: ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಡಿ.23ರಿಂದ ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಲಿದ್ದಾರೆ. ಈ ಕುರಿತು ಲೋಕಾಯುಕ್ತ ಕಚೇರಿಯು ಪ್ರಕಟಣೆ ನೀಡಿ, ಡಿ. 23ರಂದು ಲಿಂಗಸ್ಗೂರು ಪ್ರವಾಸಿ ಮಂದಿರದಲ್ಲಿ, ಡಿ.24ರಂದು ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾಗೂ ಡಿ. 27ರಂದು ಸಿಂಧನೂರಿನ ಪ್ರವಾಸಿ ಮಂದಿರದಲ್ಲಿ, ಡಿ.27ರ ಮಧ್ಯಾಹ್ನ 3ಕ್ಕೆ ಮಾನವಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಲಾಗುತ್ತದೆ. ಲಿಂಗಸ್ಗೂರು, ದೇವದುರ್ಗ, ಸಿಂಧನೂರು ಗಳಲ್ಲಿ ನಿಗದಿತ ದಿನದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ಸ್ಥಳದಲ್ಲಿಯೇ ಪ್ರಪತ್ರಗಳನ್ನು ಪಡೆದು ಸಲ್ಲಿಸಲು ಲೋಕಾಯುಕ್ತ ಕಚೇರಿ ತಿಳಿಸಿದೆ.
24ರಂದು ಸಿಎಂ ಜಿಲ್ಲಾ ಪ್ರವಾಸ
ರಾಯಚೂರು: ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಡಿ.24ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು,ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಅವರು ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಜಿಲ್ಲೆಯ ಮಾನವಿಯ ಹೆಲಿಪ್ಯಾಡ್ಗೆ ಬೆಳಗ್ಗೆ 11ಕ್ಕೆ ಆಗಮಿಸಲಿದ್ದಾರೆ. ಮಾನವಿ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾನವಿ ಪಟ್ಟಣದಲ್ಲಿ ಚಾಲನೆ ನೀಡುವರು. ಮಧ್ಯಾಹ್ನ 2ಕ್ಕೆ ಮಾನವಿಯಿಂದ ದೇವದುರ್ಗ ತಾಲೂಕಿನ ಅರಕೇರಾ ಹೆಲಿಪ್ಯಾಡಿಗೆ ಪ್ರಯಾಣಿಸಿ ಮಧ್ಯಾಹ್ನ 2.15ಕ್ಕೆ ದೇವದುರ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅರಕೇರಾದಲ್ಲಿ ಉದ್ಘಾಟನೆ ಮತ್ತು ಅಡಿಗಲ್ಲು ನೆರವೇರಿಸುವರು. ಮಧ್ಯಾಹ್ನ 3.30ಕ್ಕೆ ಅರಕೇರಾದಿಂದ ಬೆಂಗಳೂರಿಗೆ ಮರಳಲಿದ್ದಾರೆಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
24ಕ್ಕೆ ಜಿಲ್ಲೆಗೆ ಸಚಿವ ಪಾಟೀಲ್
ರಾಯಚೂರು: ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಡಿ.24ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಅವರು ಬೆಳಗ್ಗೆ 5ಕ್ಕೆ ಗುಲ್ಬರ್ಗದಿಂದ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿ, ಮಾನವಿ ಪಟ್ಟಣವನ್ನು ತಲುಪಲಿದ್ದಾರೆ. ಅಂದು ಬೆಳಗ್ಗೆ 11ಕ್ಕೆ ಮಾನವಿ ಪಟ್ಟಣದಲ್ಲಿ ನಡೆಯವಿರುವ ಸಿಎಂ ಅವರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಮಧ್ಯಾಹ್ನ 2.15ಕ್ಕೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮಕ್ಕೆ ತೆರಳಿ, ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಿಎಂ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ಸಚಿವರ ಆಪ್ತ ಕಾರ್ಯದರ್ಶಿ ಕಚೇರಿ ತಿಳಿಸಿದೆ.
ಉದ್ಯೋಗ ಖಾತ್ರಿ-ಕೆಲಸ ನೀಡಲು ಒತ್ತಾಯ
ರಾಯಚೂರು: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ತಾಲೂಕಿನ ಏಗನೂರು ಗ್ರಾಮದ ಕೂಲಿಕಾರ್ಮಿಕರಿಗೆ ಕಳೆದ 2-3 ತಿಂಗಳಿನಿಂದ ಕೆಲಸ ನೀಡದಿರುವುದನ್ನು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಖಂಡಿಸಿದೆ.
ಈ ಕುರಿತು ತಾಪಂ ಇಒಗೆ ಶನಿವಾರ ದೂರು ಸಲ್ಲಿಸಿ, ಏಗನೂರು ಗ್ರಾಮದ ಬಡಕೂಲಿಕಾರ್ಮಿಕರು ಕಳೆದ 2-3ತಿಂಗಳಿನಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಕೆಲಸ ನೀಡಿಲ್ಲ.ಚಿಕ್ಕಸೂಗೂರು ಗ್ರಾಪಂ ಪಿಡಿಒ ಅವರು ಬಡಕಾರ್ಮಿಕರಿಗೆ ಕೂಲಿ ಕೆಲಸ ನೀಡಲು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಸಮಿತಿ ದೂರಿದೆ. ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ನಿರಾಕರಿಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಕೂಲಿಕೆಲಸ ನೀಡಬೇಕು. ತಪ್ಪಿದಲ್ಲಿ ಡಿ.27 ರಂದು ಚಿಕ್ಕಸೂಗೂರು ಗ್ರಾಪಂ ಎದುರು ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಆನಂದ ಏಗನೂರು, ಬಿ.ನರಸಪ್ಪ, ಎಂ.ವೀರೇಶ್, ಸುರೇಶ್ ದುಗನೂರು ಸೇರಿ ಅನೇಕರಿದ್ದರು.
ಇಂದು ಅಡಿಗಲ್ಲು ಸಮಾರಂಭ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಗಬ್ಬೂರು ಮೆಥೋಡಿಸ್ಟ್ ಚರ್ಚ್ನ ಆವರಣ ಗೋಡೆಯ ಅಡಿಗಲ್ಲು ಸಮಾರಂಭವನ್ನು ಡಿ.22ರಂದು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 11.45ಕ್ಕೆ ನಡೆಯುವ ಸಮಾರಂಭದಲ್ಲಿ ಶಾಸಕ ವೆಂಕಟೇಶ ನಾಯಕ ಅವರು ಅಡಿಗಲ್ಲು ನೆರವೇರಿಸಲಿದ್ದು, ಜಿಲ್ಲಾ ಮೇಲ್ವಿಚಾರಕರಾದ ರೆ.ಬಿ.ಜಯ ಡಿ.ಎಸ್. ಹಾಗೂ ಸಭಾಪಾಲಕರಾದ ರೆ. ಸುರೇಶಬಾಬು ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ರಾಣಿ ರಿಚರ್ಡ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಯುವ ಮುಖಂಡ ಬಿ.ವಿ.ನಾಯಕ, ಜಿಪಂ ಮಾಜಿ ಸದಸ್ಯರಾದ ಸದಾಶಿವಯ್ಯ ಮಠದ್, ಸಿದ್ದಯ್ಯ ತಾತಾ ಗುರುವಿನ್, ಜಿಪಂ ಸದಸ್ಯೆ ಪದ್ಮಾವತಿ ಅಬಕಾರಿ, ತಾಪಂ ಸದಸ್ಯ ಜನಾರ್ದನ, ಗ್ರಾಪಂ ಅಧ್ಯಕ್ಷೆ ನರಸಮ್ಮ ಸೇರಿ ಅನೇಕರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
ಆಯ್ಕೆ ಪಟ್ಟಿ ರದ್ದು: ಆದೇಶ
ರಾಯಚೂರು: ಸ್ಥಳೀಯ ನಗರಸಭೆಯುಂದ 2010-11 ಮತ್ತು 2011-12ನೇ ಸಾಲಿನಲ್ಲಿ ಶೇ.7.25ರ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಪೂರ್ಣಗೊಂಡವರಿಗೆ ಗಣಕಯಂತ್ರಗಳನ್ನು ವಿತರಿಸಲು ತಯಾರಿಸಿದ ಪಟ್ಟಿಯನ್ನು ರದ್ದುಪಡಿಸಲಾಗಿದೆ ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಈ ಕುರಿತು ನಗರಸಭೆಯ ಪೌರಾಯುಕ್ತ ಬಸಪ್ಪ ಅವರು ಆದೇಶ ಹೊರಡಿಸಿದ್ದು, ನಗರಸಭೆಯ 2010-11ನೇ ಸಾಲಿನ ಶೇ.7.25ರ ಯೋಜನೆಯಡಿ ಬಡ ಜನರ ಶ್ರೇಯೋಭಿವೃದ್ಧಿಗೆ ಕಾಯ್ದಿರಿಸಿದ ಅನುದಾನ ರು. 10 ಲಕ್ಷ ಅನುದಾನದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದವರಿಗೆ 33 ಗಣಕಯಂತ್ರಗಳನ್ನು ವಿತರಿಸಲು ಯೋಜಿಸಲಾಗಿತ್ತು.
ಈ ನಿಟ್ಟಿನಲ್ಲಿ ಆಯ್ಕೆ ಮಾಡಿದ್ದ ಫಲಾನುಭವಿಗಳ ಪಟ್ಟಿಗೆ 2013ರ ಸೆ.4ರಂದು ಆಕ್ಷೇಪ ವ್ಯಕ್ತವಾಗಿದ್ದರಿಂದ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆ
ರಾಯಚೂರು: ತಾಲೂಕಿನಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿಗಳಿಗೆ ಹಾಗೂ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವವರ ಮಕ್ಕಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ. ನೋಂದಣಿ ಮಾಡಿಕೊಳ್ಳಲು ಇಲಾಖೆಯ ವೆಬ್ಸೈಟ್ ವಿಳಾಸ ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ. ಆನ್ಲೈನ್ ನಲ್ಲಿ ಹೊಸ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಡಿ.31 ಕೊನೆಯ ದಿನ. ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಬ್ಯಾಂಕ್ ಖಾತೆಗಳನ್ನು ಡಿ.25ರೊಳಗೆ ತೆರೆದು ಅದರ ಪ್ರತಿಯನ್ನು ಶಾಲೆಯ ಮುಖ್ಯ ಗುರುಗಳಿಗೆ ನೀಡಲುಕಚೇರಿ ತಿಳಿಸಿದೆ.
ಇಂದು ಸಂವಾದ, ಪುಸ್ತಕ ಬಿಡುಗಡೆ
ರಾಯಚೂರು: ನಗರದ ಸರ್ಕಾರಿ ನೌಕರರ ಸಂಘದ ಮನೋರಂಜನಾ ಕೇಂದ್ರದಲ್ಲಿ ಡಿ.22ರಂದು ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ-2013ರ ಕುರಿತು ಸಂವಾದ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಪದ್ಮವರ್ಧನ್ ವಕೀಲರು ವಹಿಸುವರು. ಪ್ರಾಸ್ತಾವಿಕವಾಗಿ ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಕುಮಾರ ಸಮತಳ ಮಾತನಾಡಲಿದ್ದಾರೆ. ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕುರಿತು ಪ್ರೊ.ಶ್ರೀಧರ್ ವಿಷಯ ಮಂಡಿಸಲಿದ್ದಾರೆ. ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾಯರಾಜ್ ಮರ್ಚಟ್ಹಾಳ್ ಅವರು ಪುಸ್ತಕ ಬಿಡುಗಡೆಗೊಳಿಸುವರು.