ಅಸಹಜ ಆಹಾರ ಸೇವನೆ ಆರೋಗ್ಯಕ್ಕೆ ಮಾರಕ
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.22
ಅಸಹಜ ಆಹಾರ ಸೇವನೆಯಿಂದಲೇ ಮಾನವನಿಗೆ ರೋಗಕ್ಕೆ ಕಾರಣವಾಗುತ್ತದೆ. ಆರೋಗ್ಯಕರ ಜೀವನ ಸಾಗಿಸಲು ಉತ್ತಮ ಆಹಾರ ಸೇವನೆ ಅವಶ್ಯಕ ಎಂದು ಮೈಸೂರಿನ ಹಿರಿಯ ವಿಜ್ಞಾನಿ ಡಾ. ಖಾದರ್ ಹೇಳಿದರು.
ಅವರು ನಗರದಲ್ಲಿ ರಂಗಮಂದಿರದಲ್ಲಿ ಭಾನುವಾರ ಕೃಷಿ ಭಾರತ ರೈತರ ನೆಲೆ ಸಂಸ್ಥೆಯಿಂದ ಆಯೋಜಿಸಿದ್ದ ಆರೋಗ್ಯಕ್ಕಾಗಿ ಎಂತೆಂಥ ಆಹಾರ ಉಪಯೋಗಿಸಬೇಕು ಎಂಬ ವಿಷಯದ ಮೇಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಳವಳ: ಇಂದಿನ ದಿನಮಾನದಲ್ಲಿ ದೇಶದಲ್ಲಿ ಮೂಲಆಹಾರ ಪದ್ಧತಿ ಕೈಬಿಟ್ಟು ಅಸಹಜ ಆಹಾರ ಪದ್ಧತಿಗೆ ಎಲ್ಲರೂ ಒಗ್ಗಿಕೊಂಡಿದ್ದು, ಅದು ಮಾನವನ ಅನಾರೋಗ್ಯಕ್ಕೆ ದಾರಿಯಾಗಿದೆ. ತನ್ನ ಆರೋಗ್ಯ ತಾನೇ ಹಾಳು ಮಾಡಿಕೊಳ್ಳುವ ಕಾರ್ಯಕ್ಕೆ ಜನತೆ ಕೈಹಾಕಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಪರಂಪರಾಗತವಾಗಿ ಬೆಳೆಯಲಾಗುತ್ತಿದ್ದ ಬೆಳೆಗಳ ಬದಲಿಗೆ ವಿಷಯುಕ್ತ ಆಹಾರದ ಬೆಳೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಅತೀಯಾದ ಕ್ರಿಮಿನಾಶಕಗಳ ಬಳಕೆಯಿಂದಾಗಿ ಗಿಡಮೂಲಿಕೆಗಳೂ ವಿಷಯುಕ್ತವಾಗಿವೆ. ಜೀವನ ಶೈಲಿಯಲ್ಲಾಗಿರುವ ಬದಲಾವಣೆಗಳೂ ಅನಾರೋಗ್ಯಕ್ಕೆ ಕಾರಣವಾಗಿವೆ ಎಂದು ಎಚ್ಚರಿಸಿದರು.
ಅಜೀರ್ಣ ಸಮಸ್ಯೆ: ಮಾಂಸಹಾರ ಸೇವನೆಯಿಂದ ಅಜೀರ್ಣ ಸಂಬಂಧಿ ಸಮಸ್ಯೆಗಳು ಕಾಡುತ್ತಿದ್ದರೆ, ಮಧುಮೇಹಕ್ಕೂ ಇಂಥ ಅನೇಕ ಸಂಗತಿಗಳು ದಾರಿ ಮಾಡುತ್ತಿವೆ. ಈ ನಿಟ್ಟಿನಲ್ಲಿ ಜನತೆ ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾವಯವ ಕೃಷಿ ಪದ್ಧತಿಯಿಂದ ಉತ್ತಮ ಕೃಷಿ ಉತ್ಪನ್ನಗಳನ್ನು ಬೆಳೆಯಬಹುದು. ಸಾವಯವ ಕೃಷಿ ಪದ್ಧತಿ ಅಡಿ ಬೆಳೆದ ಆಹಾರ ಧಾನ್ಯಗಳಿಂದ ಮಾನವನ ಆರೋಗ್ಯ ಸುಧಾರಣೆ ಸಾಧ್ಯ ಎಂದರು.
ಉತ್ತಮ ಪದ್ಧತಿ ಅಗತ್ಯ: ಕೃಷಿ ಪ್ರದೇಶವಿಂದು ಅತೀಯಾದ ನೀರು ಮತ್ತು ರಾಸಾಯನಿಕಗಳ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಶೀಘ್ರವೇ ಮನುಷ್ಯ ಆಹಾರಕ್ಕಾಗಿಯೂ ಕಿತ್ತಾಡುವಂಥ ಪರಿಸ್ಥಿತಿ ದಾರಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜನತೆ ಈಗಲಾದರೂ ಎಚ್ಚೆತ್ತು ಉತ್ತಮ ಕೃಷಿ ಪದ್ಧತಿ ಹಾಗೂ ಸುರಕ್ಷಿತ ಆಹಾರ ಸೇವನಾ ಕ್ರಮ ಅನುಸರಿಸುವಂತೆ ಮನವಿ ಮಾಡಿದರು.
ಕೃಷಿ ಭಾರತ ಪತ್ರಿಕೆಯ ಚಂದ್ರಶೇಖರ್ ಬಾಳೆ, ಬಂದಪ್ಪೆ ಐರೆಡ್ಡಿ ಇದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.