ಕನ್ನಡ ಪದಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ
ಕ.ಪ್ರ. ವಾರ್ತೆ ಸಿಂಧನೂರು ಡಿ.22
ಕನ್ನಡದ ಬಗ್ಗೆ, ಕನ್ನಡ ಪದಗಳ ಬಗ್ಗೆ ಹಾಗೂ ಸಾಹಿತ್ಯದ, ನಾಡಿನ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಆರ್‌ಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಮಧುಮತಿ ದೇಶಪಾಂಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೇರೆಯವರಿಗೆ ಕಲಿಸಿ: ಅವರು ನಗರದ ಆರ್‌ಜಿಎಂ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಸಿರಿಗಂಧ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಕನ್ನಡಿಗರ ಹೃದಯದಲ್ಲಿ ನೆಲೆಸಬೇಕೆಂದು 100 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ನಿರ್ವಹಿಸುತ್ತಾ ಬಂದಿದೆ. ಬೇರೆ ಭಾಷೆಗಳಿಗೆ ಮಾರು ಹೋಗದೆ ಕನ್ನಡ ಭಾಷೆಯನ್ನು ತಂದೆ-ತಾಯಿಯ ಸ್ಥಾನಕ್ಕೆ ತೆಗದುಕೊಂಡು ಹೋಗಬೇಕು. ಬ್ರಿಟಿಷರೂ ದೇಶ ಬಿಟ್ಟು ತೊಲಗಿದ್ದರೂ, ಅವರ ಭಾಷೆ ಮಾತ್ರ ತೊಲಗುತ್ತಿಲ್ಲ. ಕನ್ನಡವನ್ನು ಮರೆಯದೆ ಮನಸ್ಸಿನಲ್ಲಿ ಉಳಿಸಿಕೊಂಡು ಬೇರೆಯವರಿಗೆ ಕಲಿಸಿ, ಎತ್ತೆತ್ತೆರಕ್ಕೆ ಬೆಳೆಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ಸಿರಿಗಂಧ ಕಾರ್ಯಕ್ರಮ ಇದೊಂದು ಒಳ್ಳೆಯ ಕಾರ್ಯಕ್ರಮ ಎಂದು ಹೇಳಿದರು.
ಶಿಕ್ಷಕ ಬಿ.ಕೆ. ಧರ್ಮಾಯತ್ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ದೇಶಿಯ ಭಾಷೆ ಉಳಿಸಿಕೊಂಡು ಅನ್ಯ ಭಾಷೆಯ ಕಡೆ ಒಲುವು ನೀಡಿ, ಜನರು ಆಂಗ್ಲ ಭಾಷೆಗೆ ಮಾರುಹೋಗಿದ್ದ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣವೇ ಆಂಗ್ಲ ಭಾಷೆ ಎಂದು ಆರೋಪಿಸಿದರು.
ತಾಲೂಕು ಕಸಾಪದ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಎಚ್. ವಕೀಲರು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆರ್.ಜಿ.ಎಂ. ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಬಿರಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ಸಿಂಧೂರವಾಣಿ ವರದಿಗಾರ ಎಂ.ಎಸ್. ಮುಸ್ತಾಫಾ, ಶಿಕ್ಷಕಿ ನಾಗರತ್ನಮ್ಮ ಬಂಗಾಶೆಟ್ಟಿ ಇದ್ದರು. ತಾಲೂಕು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸುಷ್ಮಾ ಪ್ರಾರ್ಥಿಸಿದರು. ಪತ್ರಕರ್ತೆ ಶಿವಲೀಲಾ ಹಿರೇಮಠ ಸ್ವಾಗತಿಸಿ, ಶಿಕ್ಷಕ ಶಿವಾನಂದ ನಿರೂಪಿಸಿದರು. ಹನುಮಂತಪ್ಪ ಭೇರ್ಗಿ ವಂದಿಸಿದರು.