ಕಲಿಕೋತ್ಸವ ವಿನೂತನ ಕಾರ್ಯಕ್ರಮ
ಸುರಪುರ: ಮಕ್ಕಳ ಕಲಿಕೆಯಲ್ಲಿನ ಆಸಕ್ತಿಯನ್ನು ಗುರುತಿಸಲು ಕಲಿಕೋತ್ಸವ ಹೆಚ್ಚಿನ ನೆರವು ನೀಡುತ್ತದೆ. ಮಕ್ಕಳ ಪ್ರತಿಭೆ ಗುರುತಿಸುವ ಉದ್ದೇಶದಿಂದ ಸರಕಾರ ವಿನೂತನ ಕಾರ್ಯಕ್ರಮ ಜಾರಿ ಮಾಡಿದೆ ಎಂದು ಸಮನ್ವಯಧಿಕಾರಿ ಮಹಾದೇವ ರೆಡ್ಡಿ ತಿಳಿಸಿದರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ದರ್ಜೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರ್ತಿಸಿ ಗುಣಾತ್ಮಕ ಶಿಕ್ಷಣ ಒದಗಿಸಲು ಮತ್ತು ಕಲಿಕೆಯನ್ನು ದೃಢಪಡಿಸುವ ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಪರಿಣಾಕಾರಿ ಶಿಕ್ಷಣ ಕಲಿಕೆಗಾಗಿ ಮಕ್ಕಳಿಗೆ ಅಗತ್ಯ ಇರುವ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಿದೆ. ಕಲಿಕೋತ್ಸವಕ್ಕೆ ಪೂರಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಮಕ್ಕಳು ಆರೋಗ್ಯಕರ ರೀತಿಯಲ್ಲಿ ಸ್ಪರ್ಧೆ ಮಾಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಸಿಆರ್ಪಿ ಚೆನ್ನಪ್ಪ ಹೂಗಾರ ಮಾತನಾಡಿದರು. ಶಾಲೆಯ ಮುಖ್ಯ ಗುರು ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಾಶಾಶಿಸಂ ಕಾರ್ಯದರ್ಶಿ ಸೋಮರೆಡ್ಡಿ ಮಂಗ್ಯಾಳ, ಎಪಿಎಫ್‌ನ ವಲಯ ಸಂಯೋಜಕ ಅಡಿವೆಪ್ಪ, ಮಾರ್ಗದರ್ಶಕಿ ಶೋಭಾ ಮೇದಾಗಲ್ಲಿ, ಶಾಂತಪ್ಪ ಅಗ್ನಿ, ನಿಂಗಯ್ಯ, ದೇವರಾಜ ಪಾಟೀಲ್ ಇನ್ನಿತರರಿದ್ದರು.