ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೊನೆಗೂ 'ಆಸರೆ' ಆಗಲಿಲ್ಲವಲ್ಲ...!

Mainashree
Updated On : 23 Dec 2013, 11:14 am

ಕ.ಪ್ರ. ವಾರ್ತೆ  ಲಿಂಗಸ್ಗೂರು  ಡಿ.22
ತಾಲೂಕಿನಲ್ಲಿ ನೆರೆ ಹಾವಳಿ ಸಂಭವಿಸಿ ಜಲಾವೃತಗೊಂಡ ಗ್ರಾಮಗಳ ನೆರೆ ಸಂತ್ರಸ್ತ ಕುಟುಂಬಗಳಿಗೆ ಸೂರು ಕಲ್ಪಿಸಲು ಆಸರೆ ಮನೆಗಳನ್ನು ನಿರ್ಮಿಸಿದ್ದು, ಆದರೆ ಆಸರೆ ಮನೆಗಳಲ್ಲಿ ಸಮರ್ಪಕ ಮೂಲಭೂತ ಸೌಕರ್ಯವಿಲ್ಲದ ಪರಿಣಾಮ ಫಲಾನುಭವಿಗಳು ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ.
ಸಹಯೋಗ: 2009 ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ನೆರೆ ಹಾವಳಿ ಸಂಭವಿಸಿ ತಾಲೂಕಿನ ಸುಣಕಲ್ ಹಾಗೂ ಚಿಕ್ಕಉಪ್ಪೇರಿ ಗ್ರಾಮಗಳು ಜಲಾವೃತಗೊಂಡು ಜನತೆ ಮನೆ-ಮಠ ಕಳೆದು ಕೊಂಡು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಕೆಲವರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ವಾಸವಾಗಿದ್ದರು. ಆಗ ಅಂದಿನ ಬಿಜೆಪಿ ಸರ್ಕಾರ ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಸಹಯೋಗದೊಂದಿಗೆ ಆಸರೆ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು.
ಚಿಕ್ಕ ಉಪ್ಪೇರಿ ಗ್ರಾಮದಲ್ಲಿ 16 ಎಕರೆ ಪ್ರದೇಶದಲ್ಲಿ 160 ಮನೆಗಳು ಹಾಗೂ ಸುಣಕಲ್ ಗ್ರಾಮದಲ್ಲಿ 29 ಎಕರೆ ಪ್ರದೇಶದಲ್ಲಿ 200ಮನೆಗಳನ್ನು ನಿರ್ಮಿಸುವ ಉದ್ದೇಶದಿಂದ ರೈತರಿಗೆ ಹಣ ನೀಡಿ ಭೂಮಿ ಖರೀದಿಸಲಾಯಿತು. ಈ ಪ್ರದೇಶದಲ್ಲಿ ಆಸರೆ ಮನೆಗಳನ್ನು ನಿರ್ಮಿಸಲು ಗುತ್ತಿಗೆ ನೀಡುವ ಕುರಿತು ಹಟ್ಟಿ ಚಿನ್ನದಗಣಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಘವನ್ ಬೆಂಗಳೂರಿನ ಬಿನ್ಯಾಸ್ ಕಂಪನಿ ಜೊತೆ ಮಾತುಕತೆ ನಡೆಸಿ ಪ್ರತಿ ಮನೆ ರು. 1.24 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಒತ್ತಡದ ಕಾಮಗಾರಿ: ನಂತರ 2010 ಏಪ್ರಿಲ್ 12ರಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಅವರು ಸುಣಕಲ್  ಹಾಗೂ ಚಿಕ್ಕಉಪ್ಪೇರಿ ಗ್ರಾಮಗಳಿಗೆ ಆಗಮಿಸಿ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದ್ದರು. ಶಂಕುಸ್ಥಾಪನೆ ನೆರವೇರಿಸಿ ನಾಲ್ಕು ವರ್ಷಗಳು ಕಳೆದರೂ ಮನೆಗಳು ಪೂರ್ಣಗೊಳ್ಳದೆ ನಿಧಾನಗತಿಯಲ್ಲಿ ಸಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಳ್ಳಲು ಒತ್ತಡಗಳು ಬಂದಿತು. ಆಗ ಬಿನ್ಯಾಸ್ ಕಂಪನಿ ತರಾತುರಿಯಲ್ಲಿ ಆಸರೆ ಮನೆಗಳನ್ನು ಪೂರ್ಣಗೊಳಿಸಿತು.
ಮನೆಗಳ ನಿರ್ಮಾಣದಲ್ಲಿ ಸಾದಾ ಉಸುಕು, ಕ್ರಶರ್ ಮೆಷಿನ್‌ಗಳ ಜಲ್ಲಿಕಲ್ಲು ಸಂಗ್ರಹಿಸಿ ಹಾಲೋ ಬ್ಲಾಕ್ ತಯಾರಿಸಿ ಮನೆಗಳನ್ನು ಕಟ್ಟಲಾಗಿದೆ. ಹಾಲೋ ಬ್ಲಾಕ್‌ಗಳಿಗೆ ಕಡಿಮೆ ಪ್ರಮಾಣ ಸಿಮೆಂಟ್ ಹಾಕಿ ಬಳಸಲಾಗಿದೆ. ಕ್ಯೂರಿಂಗ್ ಸರಿಯಾಗಿ ಮಾಡದೆ ಇರುವ ಹಾಲೋಬ್ಲಾಕ್‌ಗಳನ್ನು ಬಳಸಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿ ಬಂದವು. ಈ ಎಲ್ಲ ಆರೋಪಗಳ ಮಧ್ಯೆ ಸುಣಕಲ್ ಗ್ರಾಮಗಳಲ್ಲಿ ನಿರ್ಮಿಸಿದ ಆಸರೆ ಮನೆಗಳ ಹಕ್ಕುಪತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಚಿಕ್ಕಉಪ್ಪೇರಿ ಗ್ರಾಮಗಳ ಫಲಾನುಭವಿಗಳಿಗೆ ಇನ್ನು ಹಕ್ಕುಪತ್ರ ಹಸ್ತಾಂತರಿಸಬೇಕಿದೆ.
ಕಳಪೆ ಕಾಮಗಾರಿ: ಆನೆಹೊಸೂರು ಕ್ಷೇತ್ರದ ಜಿಪಂ ಸದಸ್ಯೆ ಪುಷ್ಪಾ ಪಾಮಯ್ಯ ಮುರಾರಿ, ಜಿಪಂ ಸಭೆಯಲ್ಲಿ ಒತ್ತಾಯಿಸಿದ್ದು, ಸುಣಕಲ್ ಮತ್ತು ಚಿಕ್ಕಉಪ್ಪೇರಿ ಆಸರೆ ಮನೆಗಳಲ್ಲಿ ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಕೆಲ ಅಧಿಕಾರಿಗಳು ಅಮಾನತ್ತುಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಅಲ್ಲದೆ ಕಳಪೆಯಿಂದ ಕೂಡಿದೆ. ಈಗಾಗಲೇ ಸುಣಕಲ್ ಗ್ರಾಮದ ಮನೆಗಳ ಹಸ್ತಾಂತರ ಕಾರ್ಯ ಮುಗಿದಿದ್ದು, ಜನವಸತಿ ಪ್ರಾರಂಭವಾಗಿದೆ ಹಾಗೂ ಚಿಕ್ಕಉಪ್ಪೇರಿ ಗ್ರಾಮದ ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡುವಂತೆ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಸುಣಕಲ್ ಮತ್ತು ಚಿಕ್ಕಉಪ್ಪೇರಿ ಗ್ರಾಮಗಳಲ್ಲಿ ನಿರ್ಮಿಸಿದ ಆಸರೆ ಮನೆಗಳು ಅವ್ಯವಸ್ಥೆಯಿಂದ ಕೂಡಿದ್ದು, ಬೀದಿದೀಪ, ರಸ್ತೆ, ಚರಂಡಿ, ಮನೆಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲದ ಪ್ರಯುಕ್ತ ಸುಣಕಲ್ ಆಸರೆ ಮನೆಗಳಲ್ಲಿ ಕೆಲ ಫಲಾನುಭವಿಗಳು ವಾಸವಾಗಿದ್ದಾರೆ.
ಕೆಸರುಗದ್ದೆ ರಸ್ತೆ: ಚಿಕ್ಕಉಪ್ಪೇರಿ ಆಸರೆ ಮನೆಗಳಲ್ಲಿ ವಿದ್ಯುತ್ ಕಂಬಗಳು ವಾಲಿವೆ. ಮನೆಗಳ ಸುತ್ತ ಸ್ವಚ್ಛಗೊಳಿಸದ ಪರಿಣಾಮ ಮಳೆ ಬಂದರೆ ಕೆಸರು ಗದ್ದೆಯಂತೆ ಗೋಚರಿಸುತ್ತದೆ. ಇನ್ನು ಕೆಲವರು ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಉಪ್ಪೇರಿ ಆಸರೆ ಮನೆಗಳಲ್ಲಿ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಿ ನಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ವಾಸಿಸಲು ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಜಿಲ್ಲಾಧಿಕಾರಿ ಸ್ಪಷ್ಟನೆ: ತಾಲೂಕಿನ ಸುಣಕಲ್ ಮತ್ತು ಚಿಕ್ಕಉಪ್ಪೇರಿ ಗ್ರಾಮಗಳಲ್ಲಿ ನೆರೆ ಸಂತ್ರಸ್ಥರಿಗೆ ನಿರ್ಮಿಸಿದ ಆಸರೆ ಮನೆಗಳಲ್ಲಿ ಲೋಪ-ದೋಷಗಳಿದ್ದರೆ ಪರಿಶೀಲನೆ ನಡೆಸಿ ಸರಿಪಡಿಸುವಂತೆ ಹಟ್ಟಿ ಚಿನ್ನದಗಣಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು. ಆಸರೆ ಮನೆಗಳಲ್ಲಿ ಲೋಪ-ದೋಷಗಳಿದ್ದರೆ ಅದನ್ನು ಸರಿಪಡಿಸಿ ನಂತರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದೆಂದು ಜಿಲ್ಲಾಧಿಕಾರಿ ನಾಗರಾಜ್ ಸ್ಪಷ್ಟಪಡಿಸಿದರು.

 ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement