29ರಂದು ರಸ್ತೆ ತಡೆ; ರೈತ ಸಂಘದ ಎಚ್ಚರಿಕೆ
ರಾಯಚೂರು: ತುಂಗಭದ್ರಾ ಎಡದಂಡೆಯ ಎಲ್ಲ ಉಪನಾಲೆಗಳಿಗೆ ಮುಂದಿನ 2ರಿಂದ 3 ದಿನದಲ್ಲಿ ನೀರು ಹರಿಸದಿದ್ದಲ್ಲಿ ಡಿ.29ರಂದು ಮಾನವಿ ಪಟ್ಟಣದಲ್ಲಿ ರೈತ ಸಂಘದಿಂದ ರಸ್ತೆ ತಡೆ ಚಳವಳಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಎಚ್ಚರಿಸಿದರು.
ಮಾನವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ತಹಸೀಲ್ದಾರ್ ಎಂ.ಐ. ಶಹನೂರು ಅಧ್ಯಕ್ಷತೆಯ ಜಲಸಂಪನ್ಮೂಲ ಅಧಿಕಾರಿಗಳ ಮತ್ತು ರೈತರ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ರೈತರು ಹತ್ತಿ, ಜೋಳ, ಮೆಣಸಿನಕಾಯಿ ಸೇರಿ ಮಿತ ಬೆಳೆ ಬೆಳೆದಿದ್ದು ಅವುಗಳು ನೀರಿಲ್ಲದೇ ಒಣಗುತ್ತಿವೆ ಎಂದು ಆರೋಪಿಸಿದರು.
ಚಳವಳಿ ಹಮ್ಮಿಕೊಳ್ಳಲು ನಿರ್ಧಾರ: ನಾಲೆಯಲ್ಲಿ ನೀರಿನ ಮಟ್ಟ ಸುಧಾರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ರೈತರ ಬೇಡಿಕೆಗಳಿಗೆ ಅಧಿಕಾರಿಗಳು ಸರಳವಾಗಿ ಜಗ್ಗುವುದಿಲ್ಲ. ಬೆಳೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ. ರಾಜ್ಯ ರೈತ ಸಂಘದಿಂದ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾಗಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿ ವೀರ್ಸಿಂಗ್, ಐಸಿಸಿ ಸಭೆಯ ನಿರ್ಧಾರದಂತೆ ಕೆಳಭಾಗಕ್ಕೆ ನೀರು ಹರಿಸುವುದು ಅಸಾಧ್ಯವಾಗಿದೆ. 2 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ನೀರು ಎಡದಂಡೆ ಕಾಲುವೆಗೆ ಹರಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ಸಂಘದ ಮಾನವಿ ತಾಲೂಕಾಧ್ಯಕ್ಷ ಬಾಲಾಜಿಸಿಂಗ್, ವಿಶ್ವನಾಥರೆಡ್ಡಿ ಜೀನೂರು, ಬಸನಗೌಡ ಮಾಲಿ ಪಾಟೀಲ್, ಭೀಮೇಶ್ವರ್ ರಾವ್, ವೆಂಕಟರಾವ್, ಬಾಬುರಾವ್ ತಡಕಲ್, ನರಸಿಂಗರಾವ್, ಮುದ್ದಣ್ಣ ಗವಿಗಟ್ಟು, ರಮೇಶ ಗೋರ್ಕಲ್ ಸೇರಿ ಅನೇಕರಿದ್ದರು.