ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎನ್ನಾರ್ಬಿಸಿ ಕಾಲುವೆ ವಿಸ್ತರಣೆ 5 ವರ್ಷದಲ್ಲಿ ಪೂರ್ಣ: ಶಾಸಕ

Vishwanath S
Updated On : 25 Dec 2013, 12:26 pm

ಕ.ಪ್ರ. ವಾರ್ತೆ ,  ದೇವದುರ್ಗ್ಣ ಡಿ.24
ತಾಲೂಕು ವ್ಯಾಪ್ತಿಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ಬಾಕಿ ಇರುವ ಕಾಲುವೆ ಕಾಮಗಾರಿಯನ್ನು ಮುಂದಿನ 5 ವರ್ಷದಲ್ಲಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದೆಂದು ಶಾಸಕ ಎ. ವೆಂಕಟೇಶ ನಾಯಕ ತಿಳಿಸಿದರು.
ತಾಲೂಕಿನ ಅರಕೇರಾ ಗ್ರಾಮದಲ್ಲಿ ಸಿಎಂ ಭೇಟಿ ಹಿನ್ನೆಲೆಯಲ್ಲಿ ಮಂಗಳವಾರ ಸಿದ್ಧತೆ ಪರಿಶೀಲಿಸಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದಾಗಿ ದೇವದುರ್ಗ ಮತ್ತು ಮಾನವಿ ತಾಲೂಕಿನ ಸಿಎಂ ಭೇಟಿ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಸದ್ಯ ಡಿ.25ರಂದು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆಂದು ಹೇಳಿದರು.
ನಾರಾಯಣಪುರ ಬಲದಂಡೆ ಕಾಲುವೆ ಈಗಾಗಲೇ 95 ಕಿ.ಮೀ.ವರೆಗೆ ನಿರ್ಮಿಸಲಾಗಿದೆ. ದೇವದುರ್ಗ ಮತ್ತು ರಾಯಚೂರು ತಾಲೂಕಿನ 96 ಹಳ್ಳಿಗಳ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸದ್ಯದ 95 ಕಿ.ಮೀ.ನಿಂದ 125 ಕಿ.ಮೀ.ವರೆಗೆ ಕಾಲುವೆ ನಿರ್ಮಾಣ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಡಿ.25ರಂದು ಚಾಲನೆ ನೀಡಲಿದ್ದಾರೆಂದು ಹೇಳಿದರು.
ವಿವಿಧ ಕಾಮಗಾರಿ: ನೀರಾವರಿ ವಂಚಿತ ಎಸ್ಸಿ, ಎಸ್ಟಿ ರೈತರಿಗೆ ನಿಗಮದಿಂದ ಕೊಳವೆಬಾವಿ, ಅಮರಾಪುರ ಗ್ರಾಮದಲ್ಲಿ ಏತ ನೀರಾವರಿ ಯೋಜನೆಗೆ ಮಂಜೂರು ಮಾಡಲಾಗುತ್ತದೆ. ತಾಲೂಕಿನ ಗ್ರಾಮೀಣ ಭಾಗ ಸೇರಿ ಜಿಲ್ಲೆ, ತಾಲೂಕು ಸಂಪರ್ಕ ರಸ್ತೆಗಳು ಕೂಡಾ ಹಾಳಾಗಿದ್ದು, ಈ ಹಿನ್ನೆಲೆಯಲ್ಲಿ ದೇವದುರ್ಗ-ಗೂಗಲ್- 28 ಕಿ.ಮೀ. ರಸ್ತೆ 33 ಕೋಟಿ ಮರು ನಿರ್ಮಾಣ ಕಾಮಗಾರಿ, ಮುಷ್ಟೂರಿನಿಂದ ಸಿರವಾರವರೆಗೆ 16 ಕಿ.ಮೀ. ರಸ್ತೆ 16 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಕಾಮಗಾರಿ, ದೇವದುರ್ಗ-ಕೋಣಚಪ್ಪಳಿ-ಮ್ಯಾದರಗೋಳ 27 ಕಿ.ಮೀ. ರಸ್ತೆ ಅಭಿವೃದ್ಧಿಗೆ 29.30 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆಂದು ಹೇಳಿದರು.
ಅದೇ ರೀತಿ ದೇವದುರ್ಗ ಕ್ರಾಸ್‌ದಿಂದ ಮಾತಪಳ್ಳಿ 21 ಕಿ.ಮೀ. ರಸ್ತೆಗೆ 23.50 ಕೋಟಿ ಅರಕೇರಾ ಕ್ರಾಸ್‌ದಿಂದ ಗಲಗ- ನಾರಾಬಂಡಾವರೆಗೆ 28.20 ಕಿ.ಮೀ.ಗೆ 29.50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಇಂದು ಚಾಲನೆ: ಡಿ.25ರಂದು ನಡೆಯುವ ಸಮಾರಂಭದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಸೇರಿ ಅನೇಕ ಸಚಿವರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ತಾಲೂಕಿನ ಮತ್ತಿತರೆ ಬೇಡಿಕೆಗಳ ಕುರಿತು ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುತ್ತದೆ ಎಂದು ಶಾಸಕ ಎ. ವೆಂಕಟೇಶ ನಾಯಕ ತಿಳಿಸಿದರು. ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಆರ್‌ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎ. ರಾಜಶೇಖರ ನಾಯಕ, ಪಕ್ಷದ ಜಿಲ್ಲಾ ಮುಖಂಡ ರವಿಕುಮಾರ ಪಾಟೀಲ್, ಖಾಜಾಗೌಡ ಗಬ್ಬೂರು, ಪ್ರಕಾಶ ಖೇಣದ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement