ಕಂಕರ್ ಯಂತ್ರ ಅಳವಡಿಕೆ ಆದೇಶ ರದ್ದತಿಗೆ ಒತ್ತಾಯ
ಮುದಗಲ್: ಪಟ್ಟಣದ ಹೊರ ವಲಯದಲ್ಲಿನ ಸರ್ಕಾರಿ ಸ್ವಾಮ್ಯದ ಸರ್ವೆ ನಂ 618ರಲ್ಲಿ ಕಂಕರ್ ಯಂತ್ರವನ್ನು ಅಳವಡಿಸಲು ಖಾಸಗಿಯವರಿಗೆ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಸುಮಾರು 3 ಸಾವಿರ ಬಡ ಕೂಲಿಕಾರರು ಕಂಕರ್ ಒಡೆದು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ತಾಲೂಕಿನ ಎಲ್ಲ ಕಂಕರ್ ಯಂತ್ರಗಳನ್ನು ಮುದಗಲ್ ಹೊರವಲಯದಲ್ಲಿ ಅಳವಡಿಸಲು 40 ಎಕರೆ ಜಮೀನನ್ನು ಬಾಡಿಗೆ ರೂಪದಲ್ಲಿ ಮಂಜೂರು ಮಾಡಿದ್ದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ. ಕಂಕರ್ ಯಂತ್ರಗಳನ್ನು ಅಳವಡಿಸುವುದರಿಂದ ಸುತ್ತಮುತ್ತಲಿನ ಜಮೀನುಗಳ ಬೆಳೆ ನಾಶವಾಗುವುದಲ್ಲದೆ, ಜನರು ವಾಸ ಮಾಡುವ ಬಾಬಾ ಕಟ್ಟೆ, ಜಕ್ಕೆರಮಡು ನಿವಾಸಿಗಲು ಧೂಳಿನಿಂದ ರೋಗಗ್ರಸ್ಥರಾಗುವಂತಾಗುತ್ತದೆ. ಅಲ್ಲದೆ ಬಾಬಾ ಕಟ್ಟೆ ಸರ್ಕಾರಿ ಶಾಲಾ ಮಕ್ಕಳಿಗೆ ಶಬ್ದಮಾಲಿನ್ಯ, ವಾಯುಮಾಲಿನ್ಯದ ಜೊತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜನರ ಆರೋಗ್ಯ ಹಾಳಾಗುವುದಲ್ಲದೆ, ಸಾವಿರಾರು ಜನರು ನಿರುದ್ಯೋಗಿಗಳಾಗುವ ಪರಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಕೂಡಲೇ ಆದೇಶವನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು. ಇಲ್ಲದಿದ್ದರೆ ನಿರುದ್ಯೋಗಿಗಳಾಗುವ ಮಹಿಳೆಯರು, ಪುರುಷರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ಗೆ ನೇಮಕ
ರಾಯಚೂರು: ರಾಯಚೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷವು ನಗರ ಘಟಕದ ಅಧ್ಯಕ್ಷರನ್ನಾಗಿ ಜಿ. ಬಸವರಾಜರೆಡ್ಡಿ ಅವರನ್ನು ನೇಮಿಸಿದೆ. ಅದೇ ರೀತಿ ಉಪಾಧ್ಯಕ್ಷರಾಗಿ ಮಹ್ಮದ್ ಖಾಜಾ ಹುಸೇನ್, ಈರಪ್ಪಗೌಡ ಯರಮರಸ್, ಬಸವರಾಜ್, ಜಗದೀಶ್, ಜಗನ್ನಾಥ ಕುಲಕರ್ಣಿ, ಚಂದ್ರಕಾಂತ ಮನೌಳಿ, ಎನ್. ಶೇಖರರೆಡ್ಡಿ, ಪ್ರಕಾಶ ಕುಲಕರ್ಣಿ, ತಿಮ್ಮಪ್ಪ ಕೋರ್ಟ್, ನಂದಿನಿ ನರಸಿಂಹಲು, ಬಿಂದು ಕುಮಾರಿ ಅವರನ್ನು ನೇಮಕ ಮಾಡಲಾಗಿದೆ. ಎಂ.ಆರ್. ದತ್ತಾ ಕೋಶಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ರಮೇಶ್, ಜೆ. ತಿಮ್ಮಪ್ಪ, ಎನ್. ನಾಗರಾಜ್, ಮಹ್ಮದ್ ಉಮರ್ ಫಾರೂಕ್, ಕೆ. ರವಿ, ಕಾರ್ಯದರ್ಶಿಯಾಗಿ ಎನ್. ಸುರೇಶ್, ಖಾಜಾ ವಕಾರ್ ಅಹ್ಮದ್, ರಘು, ಸೈಯದ್ ಉಮರ್ ಜಾವೆದ್, ಸಹ ಕಾರ್ಯದರ್ಶಿಗಳಾಗಿ ಇಲ್ಲೂರು ಗೋಪಾಲಯ್ಯ, ಮಹಾವೀರ, ಶಶಿಧರ್ ಏಗನೂರು, ಈರಣ್ಣ ಮುದ್ಗಲ್, ಜೆ. ಸೋಮಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ಮಹ್ಮದ್ ಯುನೂಸ್, ಶಂಕರ ಸೇರಿ ಅನೇಕರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಿ ಪಕ್ಷ ಆದೇಶ ಹೊರಡಿಸಿದೆ.
ಬಸ್ ಡಿಕ್ಕಿ; ಮಹಿಳೆ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಗುರುಗುಂಟಾ ಬಳಿ ಅಂಬಣ್ಣದೊಡ್ಡಿ ಹತ್ತಿರ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವಿಗೀಡಾಗಿದ್ದಾಳೆ. ಮೃತಳನ್ನು ಯಲ್ಲಮ್ಮ(55) ಎಂದು ಗುರುತಿಸಲಾಗಿದೆ. ಈಕೆ ರಸ್ತೆ ಬದಿ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡ ಯಲ್ಲಮ್ಮಳನ್ನು ಲಿಂಗಸ್ಗೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಿಸದೇ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ವ್ಯಸನಿ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಮಲ್ಲಪ್ಪ(27) ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು ಅದರಿಂದ ಬೇಸತ್ತಿದ್ದ ಆತನ ಪಾಲಕರು ಮದ್ಯ ಸೇವಿಸದಂತೆ ಬುದ್ಧಿಮಾತು ಹೇಳಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಆತ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಯಿಟ್ಟುಕೊಂಡಿದ್ದು ಸುಟ್ಟ ಗಾಯಗಳಿಂದ ಬಳಲಿದಾಗ ಆತನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
ಸಿಂಧನೂರು: ನಗರದ ಶುಶ್ರೂಷತಾ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಆಯುಷ್ ವೈದ್ಯಾಧಿಕಾರಿಗಳಿಂದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಜರುಗಿತು. ಡಾ. ಖಲೀದ್ ಅವರು ಪ್ರಸ್ತುತ ಆರೋಗ್ಯದ ಸಮಸ್ಯೆಗಳಿಗೆ ಆಯುರ್ವೇದದಿಂದ ದೊರಕುವ ಪರಿಹಾರದ ಬಗ್ಗೆ ಮಾತನಾಡಿ ಸಂಧಿವಾತ, ಆಮವಾತ, ವಾತರಕ್ತ, ಹರ್ದಿತಾ, ಪಕ್ಷಾಗಾತ, ಮನ್ಯಸ್ಥಂಭ ಸೇರಿದಂತೆ ಮತ್ತಿತರ ರೋಗಗಳ ಲಕ್ಷಣ ಮತ್ತು ಅವುಗಳಿಗೆ ಲಭ್ಯವಿರುವ ಆಯುರ್ವೇದ ಚಿಕಿತ್ಸೆಯ ಬಗ್ಗೆ ವಿವರಿಸಿದರು. ರಾಯಚೂರು ಎಎಫ್ಐ ಅಧ್ಯಕ್ಷ ಡಾ. ವಿವೇಕಾನಂದ, ಸ್ಥಳೀಯ ವೈದ್ಯರಾದ ಡಾ. ಗುರುಪ್ರಸಾದ, ಡಾ. ವಿ.ಆರ್. ಜೋಷಿ, ಡಾ. ಮೌನೇಶ, ಡಾ. ರಮೇಶ ಕೌಲೂರು, ಮತ್ತಿತರ ಆಯುಷ್ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.