ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಡು, ಕೃಷಿಯಿಂದ ನಾಡಿನ ರೈತರಿಗೆ ಹೆಚ್ಚು ಲಾಭ; ಸಲಹೆ

Vishwanath S
Updated On : 25 Dec 2013, 12:25 pm

ರಾಯಚೂರು: ಸಾಂಪ್ರದಾಯಿಕ ಕೃಷಿ ಪದ್ಧತಿಯ ಕಡೆಗಣನೆ, ಜಾಗತಿಕ ತಾಪಮಾನದಲ್ಲಿನ ಹೆಚ್ಚಳ, ಕಾಡು ಕಡಿದು ನಾಡು ಬೆಳೆಸುತ್ತಿರುವುದು, ಅತಿಯಾದ ರಾಸಾಯನಿಕಗಳ ಬಳಕೆಯು ಸದ್ಯದ ಆಧುನಿಕ ಜಗತ್ತಿನಲ್ಲಿ ಕೃಷಿ ಕ್ಷೇತ್ರದ ಮುಂದಿರುವ ಬಹುದೊಡ್ಡ ಸವಾಲುಗಳಾಗಿವೆ. ಇಂಥ ಎಲ್ಲ ಸವಾಲುಗಳಿಗೆ ಕಾಡು ಕೃಷಿ ಪದ್ಧತಿಯೊಂದೇ ಉತ್ತರ ಎಂದು ಖ್ಯಾತ ಕೃಷಿ ವಿಜ್ಞಾನಿ ಡಾ. ಖಾದರ್ ಹೇಳಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಕೆಲ ದಶಕಗಳಿಂದೀಚೆಗೆ ಕೃಷಿ ಬೇಸಾಯ ಪದ್ಧತಿಗಳಲ್ಲಿನ ಬದಲಾವಣೆಗಳಿಂದಾಗಿ ಕಳೆದ 25 ವರ್ಷಗಳಲ್ಲಿ ಶೇ.24ರಷ್ಟು ನೆಲ ಬರಡಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಧುನಿಕ ಕೃಷಿಯ ಅಳವಡಿಕೆಯಿಂದ ಕೃಷಿಯ ಮೂಲ ನೆಲೆಯಾದ ಜಮೀನು ಬರಡಾಗುತ್ತಿದೆ. ಕೃಷಿ ವ್ಯವಸ್ಥೆ ಉದ್ಧರಿಸಲು ಅದರ ನೆಲೆಯನ್ನು ಗಟ್ಟಿಗೊಳಿಸುವ ಅವಶ್ಯಕತೆಯಿದೆ. ಕೃಷಿಕರು, ದೇಶದ ಪ್ರಜೆಗಳು ಈ ನಿಟ್ಟಿನಲ್ಲಿ ಮರೆವು ಪ್ರದರ್ಶಿಸಿದಲ್ಲಿ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ ಎಂದು ಎಚ್ಚರಿಸಿದರು.
ಸೂಕ್ಷ್ಮ ಜೀವಿಗಳಿಂದಾಗಿಯೇ ಮಣ್ಣಿನ ಫಲವತ್ತತೆ: ಕಾಡಿನಲ್ಲಿ ಅಲ್ಲಿನ ಸೂಕ್ಷ್ಮ ಜೀವಿಗಳಿಂದಾಗಿಯೇ ಮಣ್ಣಿನ ಫಲವತ್ತತೆ ನಾಶವಾಗುವುದಿಲ್ಲ. ಅದೇ ರೀತಿಯ ಪದ್ಧತಿ ನಾವೆಲ್ಲರೂ ಇಂದು ಕೃಷಿ ವ್ಯವಸ್ಥೆಯಲ್ಲಿಯೂ ಅಳವಡಿಕೆ ಮಾಡಿಕೊಳ್ಳುವ ಜರೂರತ್ತಿದೆ ಎಂದ ಅವರು, ಈಗಾಗಲೇ ಆಧುನಿಕ ಕೃಷಿ ಪದ್ಧತಿಯ ಕಾರಣಕ್ಕೆ ಶೇ.25ರಿಂದ 30 ಮೂಲ ಬಿತ್ತನೆ ಬೀಜಗಳ ತಳಿಗಳು ನಾಶವಾಗಿವೆ. ಮುಂದಿನ ದಿನಗಳಲ್ಲಿ ಇಂಥ ತಳಿಗಳು ಸಂಪೂರ್ಣ ನಾಶವಾಗುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಪಾಯಕಾರಿ ಬೆಳವಣಿಗೆ: ವಿಶ್ವದಾದ್ಯಂತ ಸದ್ಯ ಏಕ ಬೆಳೆ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಕೆಲವೇ ಕೆಲ ಬೆಳೆಗಳನ್ನು ಎಲ್ಲೆಡೆ ಬೆಳೆಯಲಾಗುತ್ತಿದೆ. ಇನ್ನುಳಿದ ಬೆಳೆಗಳನ್ನು ಬೆಳೆಯಲು ರೈತರಲ್ಲಿ ಆಸಕ್ತಿಯ ಕೊರತೆಯಿದೆ. ಮಾಂಸಹಾರದ ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ಭೂಮಿಯ ಮೇಲೆ ವಾಸವಾಗಿರುವ ಎಲ್ಲರಿಗೂ ಸಾಕಾಗುವಷ್ಟು ಆಹಾರ ಧಾನ್ಯ ಬೆಳೆಯಬಹುದಾದಷ್ಟು ಅವಕಾಶಗಳಿದ್ದರೂ ಮಾಂಸಹಾರದ ಸೇವನೆಗೆ ಎಲ್ಲರೂ ಮೊರೆ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಕ್ಷ್ಮಾಣು ಜೀವನಗಳಿರುವ ಮಣ್ಣಿನಿಂದ ತಯಾರಿಸಿದ ದ್ರಾವಣವನ್ನು ಬರಡಾಗಿರುವ ಜಮೀನಿನ ಮೇಲೆ ಚೆಲ್ಲುವ ಮೂಲಕ ಅನುಸರಿಸುವ ಪದ್ಧತಿಯಿಂದ ಮಣ್ಣಿನಲ್ಲಿ ಪುನಃ ಜೀವ ತುಂಬುವ ಕಾರ್ಯ ಈಗಾಗಲೇ ತಾವು ಮಾಡಿದ್ದು, ಹೆಗ್ಗಡದೇವನಕೋಟೆ ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿನ ಹರಡಿ ಹೊಲದಲ್ಲಿ ಉತ್ತಮ ಬೆಳೆಯನ್ನು ಬೆಳೆಯಲಾಗಿದೆ ಎಂದು ತಿಳಿಸಿದರು.
ರೈತರು, ಕೃಷಿ ತಜ್ಞರು ಮತ್ತು ಸರ್ಕಾರಗಳು ಕಾಡು ಕೃಷಿಯತ್ತ ಗಮನ ಹರಿಸಬೇಕು. ಇಂಥ ಕೃಷಿ ಪದ್ಧತಿಯ ಅಳವಡಿಕೆ ಯಿಂದ ಮಣ್ಣಿನ ಫಲವತ್ತತೆ ತುಂಬಿಕೊಡುವ ಕಾರ್ಯ ಮಾಡುವುದು ಅವಶ್ಯಕ ಎಂದು ಹೇಳಿದರು. ಕೃಷಿ ಭಾರತ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಬಾಳೆ, ಮಲ್ಲನಗೌಡ ಇಂದೂಪುರ, ಬಂದಪ್ಪಗೌಡ ಐರೆಡ್ಡಿ ಸೇರಿ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement