'ನಂದವಾಡಗಿ'ಗೆ ಸಿಎಂ ಸಮ್ಮತಿ ಸಿಕ್ಕೀತೆ?
ಕ.ಪ್ರ. ವಾರ್ತೆ , ಮುದಗಲ್ , ಡಿ.24
ಲಿಂಗಸ್ಗೂರು ತಾಲೂಕಿನ ಪ್ರಮುಖ ನೀರಾವರಿ ಯೋಜನೆ ನಂದವಾಡಗಿ ಏತ ನೀರಾವರಿಯನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಆಸಕ್ತಿ ತೋರುವರೇ ಎಂಬ ಪ್ರಶ್ನೆ ತಾಲೂಕಿನ ಜನರಲ್ಲಿ ಕಾಡುತ್ತಿದೆ.
ಯೋಜನೆ ಮೂಲ ವರದಿ ಪ್ರಕಾರ- 53 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಲು 14.42 ಟಿಎಂಸಿ ನೀರು ಒದಗಿಸಬೇಕಾಗಿತ್ತು. ಆದರೆ ಸದ್ಯದ ಯೋಜನೆ ಪ್ರಕಾರ- 3.75 ಟಿಎಂಸಿ ನೀರು ಒದಗಿಸುತ್ತಿರುವುದು ಯಾತಕ್ಕೂ ಸಾಲದು ಎನ್ನುತ್ತಿದ್ದಾರೆ ರೈತರು.
ಈ ಯೋಜನೆ ಜಾರಿಗಾಗಿ ರೈತರು, ಅನೇಕ ರಾಜಕೀಯ ಮುಖಂಡರು ಹೋರಾಟ, ಜಾಗೃತಿ, ಕಾಲ್ನಡಿಗೆ ಜಾಥಾ ಹಾಗೂ ಕಳೆದ ವರ್ಷ ಲಿಂಗಸ್ಗೂರಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಸತತ ಹೋರಾಟಗಳು ನಡೆದಿವೆ. ಆದರೆ ಈ ಯೋಜನೆಗೆ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಈಗಿನ ಸಿಎಂ ಸಿದ್ದರಾಮಯ್ಯ ಸ್ಪಂದಿಸಬಹುದು ಎಂಬ ಆಶಾಭಾವ ರೈತರದ್ದು.
ನೀರಾವರಿಗೊಳಪಡುವ ಗ್ರಾಮಗಳು: ಲಿಂಗಸ್ಗೂರು ತಾಲೂಕಿನ ಲೆಕ್ಕಿಹಾಳ, ಸಜ್ಜಲಗುಡ್ಡ, ಕಿಲಾರಟ್ಟಿ, ಬೊಮ್ಮನಾಳ, ಖೈರವಾಡಗಿ, ಆದಾಪೂರ, ಕಸಬಾಲಿಂಗಸ್ಗೂರು, ಬಂಡಿಸುಂಕಾಪುರ, ಉಪ್ಪಾರ ನಂದಿಹಾಳ, ಗುಂಡಸಾಗರ, ಮಾವಿನಬಾವಿ, ಭೂಪುರ, ಗುಡಿಹಾಳ, ಕಳ್ಳಿಲಿಂಗಸ್ಗೂರು, ಕುಣೆಕೆಲ್ಲೂರ, ಮಾರಲದಿನ್ನಿ, ಮಟ್ಟೂರ, ಮೆಟ್ಟಿಕೆಲ್ಲೂರ, ಸಾಂತಪುರ, ನಾಗಲಾಪುರ, ಲಮಸ್ಕಿಹಾಳ, ಸಂತೆಕೆಲ್ಲೂರ, ಕಪಗಲ್, ಅಂಕಶದೊಡ್ಡಿ, ಹೂವಿನಭಾವಿ, ಬುದ್ದಿನ್ನಿ, ಸಾನಬಾಳ, ಬೆಡರಕಾರಲಕುಂಟಿ, ಮುಸಲಕಾರಲಕುಂಟಿ, ಬಸಾಪುರ, ಗೋನಾವಾರ, ಸರ್ಜಾಪುರ, ಕುಪ್ಪಿಗುಡ್ಡ, ಚಿಕ್ಕ ಹೆಸರೂರ, ಗೆಜ್ಜಲಗಟ್ಟಾ, ನಿಲೊಗಲ್, ಚಿಕ್ಕನಗನೂರ, ವೀರಾಪುರ, ಹಟ್ಟಿ, ಗುಡದನಾಳ, ಮೆದನಾಪೂರ, ಹೀರೆನಗನೂರ, ಅನ್ವರಿ. ಹುನಗುಂದ ತಾಲೂಕಿನ ಕಲ್ಕವಟಗಿ, ಕಂಬಳಿಹಾಳ, ನಂದವಾಡಗಿ, ಚಮಲಾಪುರ, ಹರ್ಣಪುರ.
ಮಾನವಿ ತಾಲೂಕಿನ ಪಾಮನಕೆಲ್ಲೂರ, ಅಮರಾಮಪುರ, ತುಪ್ಪದೂರ, ಬೆಂಚಮರಡಿ, ಬುದ್ದಿನ್ನಿ, ಸಾನಬಾಳ, ಈಲಾಲಪೂರ, ಗುಡಿಹಾಳ, ಚಿಲ್ಕರಾಗಿ, ಆನಂದಗಲ್, ಕೊಟೆಕಲ್, ಅಮೀನಗಡ, ಇರಕಲ್, ಯತಗಲ್, ನೀಲಾಗಲ್, ಕಾಚಾಪುರ, ವಟಗಲ್, ಯಕ್ಸಲಾಪುರ, ಕವಿತಾಳ, ಪರಸಾಪುರ, ಹುಸೇನಪುರ, ಹೀರೆಹಣಗಿ ಮತ್ತು ಪಾತಾಪುರ ಗ್ರಾಮಗಳು ಒಳಪಡುತ್ತಿವೆ. ಇದಕ್ಕೆ ಬೇಕಾದ ನೀರಿನ ಪ್ರಮಾಣ 14.43 ಟಿಎಂಸಿ ನೀರು ಬೇಕಾಗಿದೆಂದು ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಪುಲ್‌ವರಂ ಯೋಜನೆ ನೀರು ತನ್ನಿ: ಆದರೆ ಸರ್ಕಾರದ ಮುಂದೆ ಈ ಯೋಜನೆಯ ಎ ಮತ್ತು ಬಿ ಸ್ಕೀಂನಲ್ಲಿ ನೀರು ಹಂಚಿಕೆ ಮಾಡುವ ಪ್ರಸ್ತಾವನೆಯಿಲ್ಲ. ಇದರಂತೆ ಆಂಧ್ರಪ್ರದೇಶ ಇರದರಾ ಸಾಗರ ಪುಲ್‌ವರಂ ಯೋಜನೆಯಿಂದ ನಮ್ಮ ರಾಜ್ಯಕ್ಕೆ ನೀರು ಮರು ಹಂಚಿಕೆಯಾದ 23 ಟಿಎಂಸಿ ನೀರಿನಲ್ಲಿ ಈ ನಂದವಾಡಗಿ ಏತನೀರಾವರಿ ಯೋಜನೆಗೆ 4 ಟಿಎಂಸಿ ನೀರು ಹಂಚಿಕೆ ಮಾಡಬೇಕೆಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ.
ಆದರೆ ಈಗಾಗಲೇ ಸಲ್ಲಿಸಿದ್ದ 3 ತಾಲೂಕಿನ ಒಟ್ಟು 53.800 ಹೆಕ್ಟೇರ್ ಭೂ ಪ್ರದೇಶಕ್ಕೆ 4 ಟಿಎಂಸಿ ನೀರು ಸಾಕಾಗುವುದಿಲ್ಲ. ಆದ್ದರಿಂದ ಸರ್ಕಾರ ನೀರಿನ ಮೂಲಗಳಿಂದ ಯೋಜನೆಗೆ ಒಳಪಡುವ ಒಟ್ಟು ಪ್ರದೇಶವನ್ನು ನೀರಾವರಿ ಮಾಡಬೇಕೆಂದು ಕಳೆದ ಬಜೆಟ್‌ನಲ್ಲಿ ಈ ಯೋಜನೆಗೆ ಹಣ ಮೀಸಲಿಡಬೇಕೆಂದು ಹೋರಾಟ ಸಮಿತಿಯ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಯೋಜನೆ ಸರ್ವೆಗೆ 1.50 ಕೋಟಿ, ಯೋಜನೆ ಪೂರ್ಣಗೊಳಿಸಲು 270 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಈ ಯೋಜನೆಗೆ ತಕ್ಕಂತೆ ನೀರಿನ ಪ್ರಮಾಣದ ಅಲೋಕೇಷನ್ ಮಾಡಬೇಕಾಗಿದೆ ಎಂಬುದು ರೈತರ ಒತ್ತಾಯ.
ರೈತರ ಕೂಗಿಗೆ ಸಿಎಂ ಸ್ಪಂದಿಸುವರೇ?: ತಾಲೂಕಿನಲ್ಲಿ ನಡೆದ ಅನೇಕ ಹೋರಾಟಗಳಿಗೆ ವಿವಿಧ ಸಂಘಟನೆ, ರಾಜಕೀಯ ಮುಖಂಡರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದರು. ಆಗ ಹೋರಾಟಗಾರರೊಂದಿಗೆ ಚರ್ಚಿಸಿದ ಹಿಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಯೋಜನೆ ಜಾರಿಗೆ ಭರವಸೆ ನೀಡಿದಾಗ ಅದಕ್ಕೆ ಹೋರಾಟಗಾರರು ತಕ್ಷಣ ಯೋಜನೆ ಜಾರಿಗೆ ಸರ್ವೆ ನಡೆಸಬೇಕೆಂದು ಹೋರಾಟವನ್ನು ಮುಂದುವರಿಸಿದಾಗ ಸರ್ಕಾರ ಸಮ್ಮತಿಸಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು(ಡಿ.25) ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಆಗಮಿಸುತ್ತಿದ್ದು, ನಂದಾಡಗಿ ಏತ ನೀರಾವರಿ ಯೋಜನೆ ಶೀಘ್ರ ಆರಂಭಿಸುವ ಭರವಸೆ ನೀಡುವರೇ ಕಾದು ನೋಡಬೇಕಾಗಿದೆ.
ಯೋಜನೆ ಸುತ್ತಮುತ್ತ
ಯೋಜನೆಯಲ್ಲಿ 14.50 ಟಿಎಂಸಿ ನೀರಿನ ಬಳಕೆ ಪ್ರಮಾಣವಿದ್ದು, ನದಿ ಜೋಡಣೆ ಹಾಗೂ ಪ್ರವಾಹ ಸಮಯದ ಹೆಚ್ಚುವರಿ ನೀರನ್ನು ಬಳಸಲು ನಿರ್ಧರಿಸಲಾಗಿದೆ. ಇದಕ್ಕೆ ನಾರಾಯಣಪುರ ಆಣೆಕಟ್ಟೆ ನೀರಿನ ಮೂಲ. ಘಟಕದ ಸ್ಥಳ ಹುನಗುಂದ ತಾಲೂಕಿನ ತೊಂಡಿಹಾಳ. ಈ ಯೋಜನೆಯಡಿ ಹುನಗುಂದ ತಾಲೂಕಿನ 5 ಗ್ರಾಮಗಳು, ಲಿಂಗಸ್ಗೂರು ತಾಲೂಕಿನ 47 ಗ್ರಾಮಗಳು, ಮಾನವಿ ತಾಲೂಕಿನ 23 ಗ್ರಾಮಗಳು ಒಳಪಡುತ್ತಿವೆ. ಈ ಕುರಿತು ನೀರಾವರಿ ಇಲಾಖೆ ತಜ್ಞರ ಸಮಿತಿ ಈ ಮೂರು ತಾಲೂಕಿನ ಒಟ್ಟು 53,800 ಹೆಕ್ಟೇರ್ (1.30 ಲಕ್ಷ ಎಕರೆ) ನೀರಾವರಿ ಆಗುತ್ತದೆಂದು ವರದಿ ಸಲ್ಲಿಸಲಾಗಿದೆ.
- ಪಂಪಯ್ಯ ಮಠ