ಮಕ್ಕಳ ಕಲಿಕಾ ಪ್ರದರ್ಶನಕ್ಕೆ ಕಲಿಕೋತ್ಸವ ಸಹಕಾರಿ
ಕ.ಪ್ರ. ವಾರ್ತೆ , ಸಿಂಧನೂರು , ಡಿ.24
ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯ ಕಲಿಕೋತ್ಸವ ಕಾರ್ಯಕ್ರಮ ಮಕ್ಕಳು ತರಗತಿಗಳಲ್ಲಿ ಕಲಿತಿರುವ ಕಲಿಕಾಂಶಗಳನ್ನು ಒರೆಗೆ ಹಚ್ಚಲು ಸಹಕಾರಿಯಾಗುತ್ತದೆ ಎಂದು ಬಿಇಒ ಅಮರಪ್ಪ ಅಭಿಪ್ರಾಯಪಟ್ಟರು.
ನಗರದ ಸುಕಾಲಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನಕನಗರ ಕ್ಲಸ್ಟರ್ ಮಟ್ಟದ 2013- 14ನೇ ಸಾಲಿನ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ತಾವು ಕಲಿಸಿದ ಪಠ್ಯ ಹಾಗೂ ಪಠ್ಯೇತರ ಕಲಿಕಾಂಶಗಳನ್ನು ಸಾರ್ವಜನಿಕವಾಗಿ ಮೌಲ್ಯಮಾಪನ ಮಾಡಿದಂತಾಗುತ್ತದೆ. ಪಾಲಕರು, ಸಮುದಾಯವರು ತಮ್ಮ ಮಕ್ಕಳು ಎಷ್ಟರ ಮಟ್ಟಿಗೆ ಕಲಿತಿದ್ದಾರೆ ಎಂದು ಅರಿಯಲು ಅನುಕೂಲ ಎಂದರು.
ಶಿಕ್ಷಕರ ಮೌಲ್ಯಮಾಪನಕ್ಕೂ ಅನುಕೂಲ: ಕನಕನಗರ ಸಿಆರ್ಪಿ ವೀರೇಶ ಗೋನವಾರ ಮಾತನಾಡಿ, ಕಲಿಕೋತ್ಸವ ಕಾರ್ಯಕ್ರಮ ಪ್ರಸ್ತುತ ಸಾಲಿನ ಆವಿಷ್ಕೃತ ಚಟುವಟಿಕೆಗಳಲ್ಲಿ ಒಂದಾಗಿದ್ದು, ಈ ಕಾರ್ಯಕ್ರಮವು ಮಕ್ಕಳ ಕಲಿಕಾ ಮಟ್ಟವನ್ನು ಸಾರ್ವಜನಿಕಗೊಳಿಸುವ ಜೊತೆಗೆ ಶಿಕ್ಷಕರ ಮೌಲ್ಯಮಾಪನವೂ ಆದಂತಾಗುತ್ತದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಾಗುವ ಜೊತೆಗೆ ಪಾಲಕರ, ಸಮುದಾಯ ಆಕರ್ಷಿಸಲು ಕಾರ್ಯಕ್ರಮ ಅನುವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯಗುರು ಅನಂತರಾವ್ ಮಾತನಾಡಿ ಮಕ್ಕಳಲ್ಲಿ ಶಿಸ್ತು ಮತ್ತು ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸಬೇಕೆಂದರು. ನಗರಸಭೆ ಸದಸ್ಯ ನಾಗಪ್ಪ ಗಿರಿಜಾಲಿ, ಹುಸೇನಪ್ಪ ಬಾಲಿ, ಶಿದ್ಲಿಂಗಪ್ಪ, ಕೆ.ಮಲ್ಲಪ್ಪ, ಬಸಯ್ಯಸ್ವಾಮಿ ಹಿರೇಮಠ, ಶಂಷಾವಲಿ, ಜಗನ್ನಾಥರಾವ್, ಭಾರತಿ, ವಿವಿಧ ಶಾಲೆಗಳ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು. ಶಿಕ್ಷಕಿ ರೇಣುಕಾ ಗೌಡರ್ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಅಂಗಡಿ ನಿರೂಪಿಸಿದರು. ಶಿಕ್ಷಕ ಅಂಭೋಜಿ ಪವಾರ್ ವಂದಿಸಿದರು.
ಸ್ಪರ್ಧೆಗಳು: ಸಮಾರಂಭದ ನಂತರ ಕಿರಿಯ ವಿಭಾಗ, ಹಿರಿಯ ವಿಭಾಗ ಸಾಮೂಹಿಕ ಮತ್ತು ವೈಯುಕ್ತಿಕ ಸ್ಪರ್ಧೆಗಳಲ್ಲಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಯೋಜನಾ ನಿರ್ದೇಶಕರ ಸಹಿಯುಳ್ಳ ಅಭಿನಂದನಾ ಪತ್ರ ಮತ್ತು ದಾನಿಗಳಿಂದ ಬಹುಮಾನ ನೀಡಲಾಯಿತು.
'ಗುಣಮಟ್ಟದ ಶಿಕ್ಷಣಕ್ಕೆ ಕಲಿಕೋತ್ಸವ ಪೂರಕ'
ಸಿಂಧನೂರು: ಹೈದ್ರಾಬಾದ್ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಕಲಿಕೋತ್ಸವದ ಮೂಲಕ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ ಎಂದು ತಾಪಂ ಸದಸ್ಯ ಅಮರೇಶ ಬಸಾಪುರ ಹೇಳಿದರು.
ತಾಲೂಕಿನ ಉಪ್ಪಲದೊಡ್ಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿಡಿಗೋಳ ಸಿಆರ್ಸಿ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಾಸಗಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗಲಿದೆ ಎಂದು ಪಾಲಕರು ಹೆಚ್ಚು ಹಣ ವ್ಯಯಮಾಡಿ ಕಳುಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಹೆಚ್ಚು ತರಬೇತಿ, ಅನುಭವಿ ಶಿಕ್ಷಕರಿದ್ದಾರೆ. ಅವರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ. ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ನಡೆಸಲು ಕಲಿಕೋತ್ಸವ ಪೂರಕವಾಗಲಿದೆ ಎಂದರು.
ಸಿಆರ್ಪಿ ಈರಪ್ಪ ಮಾತನಾಡಿ, ಹೈ.ಕ.ಕ್ಕೆ 371(ಜೆ) ಜಾರಿಯಾಗಿರುದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದೆ. ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿದರೆ, ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಕ್ಕೆ ಹೋಗಬಹುದಾಗಿದೆ ಎಂದರು. ಮುಖ್ಯಗುರು ಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಹೊಸಗೇರಪ್ಪ ಕರಡೋಣಿ, ಗ್ರಾಪಂ ಅಧ್ಯಕ್ಷೆ ಬಸಮ್ಮ ಗವಿಸಿದ್ದಪ್ಪ, ಉಪಾಧ್ಯಕ್ಷ ಬಸಣ್ಣ ಇತರರು ಭಾಗವಹಿಸಿದ್ದರು. ಶಿಕ್ಷಕ ವೆಂಕೋಬ ಪ್ರಾರ್ಥಿಸಿದರು. ಖಾಜೇಸಾಬ್, ಪುಷ್ಪಲತಾ, ಸುರೇಶ ಸ್ವಾಗತಿಸಿದರು. ರಂಗಪ್ಪ ನಿರೂಪಿಸಿದರು. ಕೊಟ್ರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಆರ್.ಕೆ. ವಂದಿಸಿದರು.
ಟಿಬಿಪಿ ಕ್ಯಾಂಪ್ನಲ್ಲಿ...
ನಗರದ ಉಪ್ಪಾರವಾಡಿ ಶಾಲೆಯಲ್ಲಿ ಟಿಬಿಪಿ ಕ್ಯಾಂಪ್ ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲೆಗಳ ಕಲಿಕೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಎಸ್ಡಿಎಂಸಿ ಉಪಾಧ್ಯಕ್ಷ ಆಲಂಬಾಷಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸದಸ್ಯ ಭಾಸ್ಕರ ಗುಡಿ ತಮಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟಿಬಿಪಿ ಕ್ಯಾಂಪ್ ಸಿಆರ್ಸಿ ಸಂಪನ್ಮೂಲ ವ್ಯಕ್ತಿ ಚನ್ನಬಸಪ್ಪ ಕುಂಬಾರ ಮಾತನಾಡಿ, ಮಕ್ಕಳ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಅಂಬಣ್ಣ ಮಾತನಾಡಿದರು. ಮುಖ್ಯಗುರು ಈಶ್ವರಪ್ಪ, ಶಿಕ್ಷಕಿ ರಾಜೇಶ್ವರಿ, ಗೀತಾಬಾಯಿ, ಸಿದ್ಧನಗೌಡ, ಸುವರ್ಣ, ಸಾವನ್ಸಾಬ, ಜ್ಯೋತಿಲಕ್ಷ್ಮಿ, ಸರಸ್ವತಿ, ಗಾಯತ್ರಿ ಸಿಬ್ಬಂದಿ ಉಪಸ್ಥಿತರಿದ್ದರು. ಸಿಂಧುಜಾ ಪ್ರಾರ್ಥಿಸಿದರು. ರಾಜಪ್ಪ ವಂದಿಸಿದರು. ಸುಜಾತಾ, ಕಾವೇರಿ ನಿರೂಪಿಸಿದರು.
ಲಿಂಗಸ್ಗೂರು; ವಲಯ ಮಟ್ಟದ ಕಲಿಕೋತ್ಸವ
ಲಿಂಗಸ್ಗೂರು: ತಾಲೂಕಿನ ದೇವರಭೂಪೂರ, ಪರಂಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2013-14 ನೇ ಸಾಲಿನ ವಲಯ ಮಟ್ಟದ ಕಲಿಕೋತ್ಸವ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ರಾಜಾ ಶ್ರೀನಿವಾಸ ನಾಯಕರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಮಹಾದೇವಪ್ಪ, ಗ್ರಾಪಂ ಸದಸ್ಯ ಗಜೇಂದ್ರ ನಾಯಕ, ಪ್ರಭು, ಎಸ್ಡಿಎಂಸಿ ಅಧ್ಯಕ್ಷರಾದ ದೇವೇಂದ್ರಪ್ಪ ಮಾಲೀಪಾಟೀಲ್, ಹನುಮನಗೌಡ, ಮುಖ್ಯಗುರು ಕೃಷ್ಣ, ಸಿಆರ್ಪಿ ಶಿವಶಂಕರ ಪಾಟೀಲ್, ಕರೀಂಸಾಬ, ಅಮರೇಗೌಡ ಪೊಲೀಸ್ ಪಾಟೀಲ್, ಎ.ಹೆಚ್. ಗದ್ದಿಗಿ, ಕೆ.ಎ. ಗೌಡ್ರು, ಕಾಶೀಬಾಯಿ ಸೇರಿದಂತೆ ಇದ್ದರು.
ಹಡಗಲಿ ಶಾಲೆಯಲ್ಲಿ...
ಮುದಗಲ್: ಪಟ್ಟಣ ಸಮೀಪದ ಹಡಗಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಲೇಖಾನ ಸಿಆರ್ಸಿ ವ್ಯಾಪ್ತಿಯ ಎಲ್ಲ ಶಾಲಾ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮ ಜರುಗಿತು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶಂಭುಲಿಂಗಪ್ಪ ಸಾಹುಕಾರ ಕಾರ್ಯಕ್ರಮ ಉದ್ಘಾಟಿಸಿದರು. ಸಿಆರ್ಸಿ ಸುಭಾಷ ಮಾತನಾಡಿದರು. ತಲೇಖಾನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗೇಶ, ಪತ್ರಕರ್ತ ದೇವಪ್ಪ ರಾಠೋಡ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಎಸ್ಡಿಎಂಸಿ ಅಧ್ಯಕ್ಷ ಮಹಾಂತಯ್ಯಸ್ವಾಮಿ ವಹಿಸಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷ ನಾಗಪ್ಪ, ಸದಸ್ಯರಾದ ಶರಣಪ್ಪ ತುಗ್ಗಲಿ, ಮೇಗಪ್ಪ ರಾಠೋಡ, ಗ್ರಾಪಂ ಸದಸ್ಯ ದುರುಗಪ್ಪ ಕಟ್ಟಿಮನಿ, ಹೆಮಣ್ಣ ತಳುವಾರ, ರೆಡ್ಡಪ್ಪ, ಬಸನಗೌಡ, ಮುಖ್ಯಗುರು ಟೋಪು ರಾಠೋಡ, ಶಿಕ್ಷಕರು ಇದ್ದರು.