ರಸ್ತೆ ಕಾಮಗಾರಿ ಆರಂಭಕ್ಕೆ ಒತ್ತಾಯ; ಶಾಸಕ ಸಲಹೆ
ಕ.ಪ್ರ. ವಾರ್ತೆ , ಮಸ್ಕಿ , ಡಿ.24
ಮಸ್ಕಿ ಕ್ಷೇತ್ರದಲ್ಲಿ ಈಗಾಗಲೇ ಮಂಜೂರಾಗಿರುವ ರಸ್ತೆಗಳ ನಿರ್ಮಾಣಕ್ಕೆ ಹೋರಾಡುವ ಅವಶ್ಯಕತೆಯಿಲ್ಲ. ಬದಲಿಗೆ ಕಾಮಗಾರಿ ಶೀಘ್ರ ಪ್ರಾರಂಭಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸರ್ಕಾರಕ್ಕೆ ಮನವಿ ಮಾಡುವುದು ಹೆಚ್ಚು ಸೂಕ್ತ ಎಂದು ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಕ್ಷದ ಕಾರ್ಯಕರ್ತರ ಸಭೆ ನಂತರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಂಧನೂರು-ಲಿಂಗಸ್ಗೂರು ರಸ್ತೆ ನಿರ್ಮಾಣಕ್ಕಾಗಿ 81 ಕೋಟಿ ಮಂಜೂರಾತಿ ದೊರೆತಿದೆ. ಹಣಕಾಸು ಇಲಾಖೆಯ ಅನುಮತಿಗಾಗಿ ಪ್ರಸ್ತಾವನೆ ಕಳಿಸಲಾಗಿದೆ. ಜ.15ರೊಳಗೆ ಟೆಂಡರ್ ಕರೆಯುವ ಸಾಧ್ಯತೆಯಿದೆ. ಸಿಂಧನೂರು-ಮಸ್ಕಿ ರಸ್ತೆಯ ಗುಂಡಿ ಮುಚ್ಚುವ ತಾತ್ಕಾಲಿಕ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದರು.
ಲಿಂಗಸ್ಗೂರು-ಅಂಕುಶದೊಡ್ಡಿ ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಕವಿತಾಳ-ತೋರಣದಿನ್ನಿ ಕ್ರಾಸ್ವರೆಗಿನ ರಸ್ತೆ ದುರಸ್ಥಿಗೆ 30 ಲಕ್ಷ ಮಂಜೂರಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ 2ನೇ ಹಂತದ 30 ಕಿ.ಮೀ. ಜಂಗಮರಹಳ್ಳಿ ಕ್ರಾಸ್ದಿಂದ ಜಂಗಮರಹಳ್ಳಿವರೆಗೆ, ಯದ್ದಲದಿನ್ನಿ, ನಾರಾಯಣನಗರ, ಸುಂಕನೂರು, ದೊಣಮರಡಿ, ತಡಕಲ್ ರಸ್ತೆಗಳ ಕಾಮಗಾರಿ ನಡೆದಿದೆ ಎಂದು ಹೇಳಿದರು.
ಜಿಲ್ಲೆಗೆ ಆಗಮಿಸಲಿರುವ ಸಿಎಂ ಮತ್ತಿತರೆ ಸಚಿವರಿಗೆ ಪಕ್ಷಾತೀತ ನಿಯೋಗದೊಂದಿಗೆ ಭೇಟಿಯಾಗಿ ಕ್ಷೇತ್ರದಲ್ಲಿ ಈಗಾಗಲೇ ಮಂಜೂರಾತಿ ನೀಡಿದ ರಸ್ತೆಗಳ ಕಾಮಗಾರಿಗೆ ಶೀಘ್ರ ಚಾಲನೆ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು. ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಗ್ರಾಮೀಣ ಅಧ್ಯಕ್ಷ ಹನಮಂತಪ್ಪ ಮುದ್ದಾಪೂರ, ಲಿಂಗಸ್ಗೂರು ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ್ ಮತ್ತಿತರರಿದ್ದರು.
ಸಿಂಧನೂರು- ಮಸ್ಕಿ ರಸ್ತೆಗೆ 82 ಕೋಟಿ ಬಿಡುಗಡೆ: ಬಾದರ್ಲಿ
ಸಿಂಧನೂರು: ಹಲವು ವರ್ಷಗಳ ಸಮಸ್ಯೆಯಾಗಿದ್ದ ಮಸ್ಕಿ- ಸಿಂಧನೂರು ಹೆದ್ದಾರಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಮೂಲಕ 82 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ನಬಾರ್ಡ್ ಯೋಜನೆಯಲ್ಲಿ ಎಸ್.ಎನ್. ಕ್ಯಾಂಪ್ನಿಂದ ಬಸಾಪುರವರೆಗಿನ ರಸ್ತೆಗೆ 50 ಲಕ್ಷ, ಬನ್ನಿಗನೂರಿನಿಂದ ಕೊಪ್ಪಳ ಕ್ಯಾಂಪ್ವರೆಗೆ ರಸ್ತೆ ಸುಧಾರಣೆಗೆ 1 ಕೋಟಿ, ಸಾಲಗುಂದಾ- ಬೂದಿಹಾಳ ಮಧ್ಯದ ಸೇತುವೆ ನಿರ್ಮಾಣಕ್ಕೆ 50 ಲಕ್ಷ, ಸೋಮಲಾಪುರದಿಂದ ಮುಕ್ಕುಂದವರೆಗಿನ ರಸ್ತೆ ಸುಧಾರಣೆಗೆ 2 ಕೋಟಿ, ಗೋಮರ್ಸಿಯಿಂದ ಅಲಬನೂರವರೆಗೆ 1.20 ಕೋಟಿ. ಗಾಂಧಿನಗರದಿಂದ ಗೊರೇಬಾಳ ಕ್ಯಾಂಪ್ವರೆಗಿನ ರಸ್ತೆ ದುರಸ್ತಿಗೆ 2 ಕೋಟಿ ಮಂಜೂರಾಗಿದ್ದು ಶೀಘ್ರವೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಹಾಗೆಯೇ ಅಲಬನೂರಿನಿಂದ ಜವಳಗೇರಾ ಒಳ ಮುಖ್ಯರಸ್ತೆ ನಿರ್ಮಾಣಕ್ಕೆ ಸಿಆರ್ಪಿಎಫ್ ಯೋಜನೆ ಅಡಿ 4 ಕೋಟಿ ಮಂಜೂರಾಗಿದೆ. ಸಿಂಧನೂರು ನಗರಾಭಿವೃದ್ಧಿಗೆ ಹೆಚ್ಚುವರಿಯಾಗಿ 3 ಕೋಟಿ ವಿಶೇಷ ಅನುದಾನ ಎಸ್ಎಫ್ಸಿ ಯೋಜನೆ ಅಡಿ ಮಂಜೂರಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.