ವಜ್ಜಲ್ ರಾಜಿನಾಮೆಗೆ ಆಗ್ರಹ
ಕ.ಪ್ರ. ವಾರ್ತೆ , ಮುದಗಲ್ , ಡಿ.24
ನ್ಯಾ. ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿ ದಲಿತ ವಿರೋಧಿಯಾಗಿರುವ ಶಾಸಕ ಮಾನಪ್ಪ ವಜ್ಜಲ್ ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುದಗಲ್ ಘಟಕ ಒತ್ತಾಯಿಸಿದೆ.
ಕಳೆದ 17 ವರ್ಷಗಳಿಂದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ವಿವಿಧ ದಲಿತ ಸಂಘಟನೆಗಳು ಒಗ್ಗೂಡಿ ಒಳಮೀಸಲಾತಿ ವರ್ಗೀಕರಣಕ್ಕೆ ಹಂತಹಂತವಾಗಿ ಹೋರಾಟ ಮಾಡಿದ ಫಲವಾಗಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನ್ಯಾ. ಸದಾಶಿವ ಅವರು ರಾಜ್ಯದ ಮನೆ ಮನೆಗೆ ತೆರಳಿ ಸರ್ವೆ ಮಾಡಿ ಸದಾಶಿವ ವರದಿಯನ್ನು ನ್ಯಾಯಬದ್ಧವಾಗಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದರು.
ಅಹಿಂದ ಮುಂಚೂಣಿ ನಾಯಕರಾಗಿದ್ದ ಈಗಿನ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನಕಾರರಿಗೆ ಮೂರು ತಿಂಗಳ ಕಾಲಾವಕಾಶ ಕೇಳಿದರು.
ವಜ್ಜಲ್ ಹೇಳಿಕೆಗೆ ಖಂಡನೆ: ಈ ವೇಳೆ ಸದನದ ಒಳಗಡೆ ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಮಾಡಿದರೆ ರಕ್ತಪಾತವಾಗುತ್ತದೆ ಎಂದು ಮತ್ತು ವರದಿ ಅವೈಜ್ಞಾನಿಕವಾಗಿದೆ ಎಂದು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿ ರಾಜ್ಯದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನ್ಯಾ. ಸದಾಶಿವ ವರದಿ ಕೇವಲ ಎರಡು ಜಾತಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದ್ದಾರೆ.
ಮಾದಿಕ ಸಮುದಾಯಿತ 45 ಜಾತಿ, ಛಲವಾದಿ ಸಮುದಾಯದ 26 ಒಟ್ಟು 71 ಜಾತಿಗಳಿಗೆ ಈ ವರದಿ ಅನ್ವಯಿಸುತ್ತದೆ. ಆದರೆ 99 ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ್ದು ವಜ್ಜಲ್ರ ಬಳಿ ಯಾವುದೇ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ತಾಲೂಕು ಸಂಚಾಲಕ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದ ಮನಿ, ವೆಂಕಟೇಶ ಹಿರೇಮನಿ, ಪ್ರತಾಪ ಹಿರೇಮನಿ, ರಮೇಶ, ತಾಮಸ್ ವಂದಾಲಿ, ಪರಶುರಾಮ, ಶರಣಪ್ಪ ಗುಡಿಹಾಳ ಸವಾಲು ಹಾಕಿದ್ದಾರೆ.