ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷ್ಣಾ ನೀರು ಬಳಕೆ: ರೈತರಿಗೆ ಅನ್ಯಾಯವಾಗದು

Vishwanath S
Updated On : 26 Dec 2013, 11:27 am

ರಾಯಚೂರು: ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಕುರಿತು ಸದ್ಯ ರಾಜ್ಯದ ಪರ ವಕೀಲ ನಾರಿಮನ್ ನೇತೃತ್ವದ ತಂಡವು ಪರಿಶೀಲಿಸುತ್ತಿದ್ದು, ಈನಂತರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿದೆ. ಅಷ್ಟೇ ಅಲ್ಲ, ಕೃಷ್ಣಾ ನದಿಯಿಂದ ನಮ್ಮ ಹಕ್ಕಿನ ನೀರು ಪಡೆಯುವ ನಿಟ್ಟಿನಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸೂಕ್ತ ಕ್ರಮ: ಅವರು ಮಾನವಿಯಲ್ಲಿ ಬುಧವಾರ ಆಯೋಜಿಸಿದ್ದ ರು. 60 ಕೋಟಿಗೂ ಅಧಿಕ ಮೊತ್ತದ 22 ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ಸೂಕ್ತಕ್ರಮ ಕೈಗೊಳ್ಳುತ್ತದೆ. ರಾಜ್ಯದ ಪಾಲಿನ ನೀರಿನ ಸಮರ್ಪಕ ಬಳಕೆಗೆ ಈಗಾಗಲೇ ಯೋಜಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ರು. 50 ಸಾವಿರ ಕೋಟಿ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನೀಡಲಾಗುತ್ತಿದೆ ಎಂದು ತಿಳಿಸಿದರು.
ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಈ ಹಿಂದೆ ತಮ್ಮ ನೇತೃತ್ವದಲ್ಲಿ ಪಾದಯಾತ್ರೆ ಕೃಷ್ಣಾ ನದಿ ನೀರಿನ ಬಳಕೆಗೆ ಸಂಬಂಧಿಸಿ ಪಾದಯಾತ್ರೆ ನಡೆಸಲಾಗಿತ್ತು. ಆಗ ನೀಡಿದ ಭರವಸೆಯಂತೆಯೇ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಬಾಕಿ ಉಳಿದಿರುವ ಹಾಗೂ ಉದ್ದೇಶಿತ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಮುಖ್ಯ ಗುರಿ ಎಂದು ಹೇಳಿದರು.
ಹಸಿವು ಮುಕ್ತ ರಾಜ್ಯ ನಿರ್ಮಾಣ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 1ಕೋಟಿ ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪಡಿತರ ವ್ಯವಸ್ಥೆಯಡಿ ಜೋಳ, ಗೋಧಿ ವಿತರಿಸಲಾಗುತ್ತದೆ ಎಂದರು.
ಕ್ಷೀರಭಾಗ್ಯ ವಿಸ್ತರಣೆ: ಹೈ.ಕ. ಭಾಗದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಸದ್ಯ ವಾರಕ್ಕೆ ಮೂರು ದಿನ ಈ ಯೋಜನೆ ಅಡಿ ಮಕ್ಕಳಿಗೆ ಹಾಲು ನೀಡುತ್ತಿದ್ದು, ಮುಂದಿನ ವರ್ಷದಿಂದ ವಾರದ ಐದು ದಿನಗಳೂ ಹಾಲು ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು. ತೊಗರಿಗೆ ಸರ್ಕಾರ ರು. 5 ಸಾವಿರ ಬೆಂಬಲ ಬೆಲೆ ಪ್ರಕಟಿಸಿದೆ. ಕೇಂದ್ರ ಸರ್ಕಾರ ತೊಗರಿಗೆ ರು. 4300 ಪ್ರತಿ ಕ್ವಿಂಟಾಲ್ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ರು. 700 ಹೆಚ್ಚುವರಿಯಾಗಿ ನೀಡಿ ಒಟ್ಟು ರು. 5ಸಾವಿರ ಪ್ರತಿ ಕ್ವಿಂಟಾಲ್‌ಗೆ ನೀಡಲಿದೆ ಎಂದು ತಿಳಿಸಿದರು.
ಉತ್ತಮ ಆಡಳಿತ: ಶೀಘ್ರದಲ್ಲಿಯೇ ಹತ್ತಿಗೂ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಪ್ರಕಟಿಸಲಿದ್ದು, ರೈತರು ಈ ಬಗ್ಗೆ ಆತಂಕ ಪಡುವುದು ಬೇಡ ಎಂದು ಅಭಯ ನೀಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ದಲಿತರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಪರವಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ಹಾಗೂ ಪಾರದರ್ಶಕ ಮತ್ತು ಉತ್ತಮ ಆಡಳಿತ ನೀಡುವುದಕ್ಕೆ ಮೊದಲಾದ್ಯತೆ ನೀಡಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್, ಖಮರುಲ್ ಇಸ್ಲಾಂ, ಡಾ.ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್, ಶಾಸಕರಾದ ಹಂಪಯ್ಯ ನಾಯಕ, ಪ್ರತಾಪಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಮಾಜಿ ಶಾಸಕ ಎನ್.ಎಸ್. ಬೋಸರಾಜು ಸೇರಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement