ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ವಿದ್ಯಾಸಿರಿ ಯೋಜನೆ ವಿಸ್ತರಿಸಿ'

Vishwanath S
Updated On : 26 Dec 2013, 11:27 am

ರಾಯಚೂರು: ರಾಜ್ಯದ ವಿದ್ಯಾರ್ಥಿಗಳ ಶುಲ್ಕ ಮರು ಪಾವತಿ ಹಾಗೂ ವಿದ್ಯಾಸಿರಿ ಯೋಜನೆಯ ಲಾಭ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲು ಜನಸಂಗ್ರಾಮ ಪರಿಷತ್ ಆಗ್ರಹಿಸಿದೆ.
ಈ ಕುರಿತು ಮಾನವಿಯಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆ ಪ್ರಮುಖರು, ಬಡ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆಹಾರ ಮತ್ತು ವಸತಿಗಾಗಿ ಆರ್ಥಿಕ ಸಹಾಯ ನೀಡುವುದು ಸ್ವಾಗತಾರ್ಹ. ಈ ಯೋಜನೆಯು ಕೇವಲ ಹಿಂದುಳಿದ ವರ್ಗಗಳ 1ಎ, 2ಎ, 3ಎ, 3ಬಿ ಹಾಗೂ ಇತರೆ ಅಲ್ಪಸಂಖ್ಯಾತ (2ಬಿ ವರ್ಗದಲ್ಲಿ ಬರುವ ಮುಸ್ಲಿಂರನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ಮಾತ್ರ ರೂಪಿಸಿರುವುದು ಸರಿಯಲ್ಲ ಎಂದು ದೂರಿದರು.
ಲಾಭ ದೊರೆಯಲಿ: ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲೇ ಬರುವ ಮುಸ್ಲಿಂ ವಿದ್ಯಾರ್ಥಿಗಳಿಗೂ ಈ ಯೋಜನೆ ವಿಸ್ತರಿಸುವುದು ಅಗತ್ಯವಾಗಿದೆ. ಆದ್ದರಿಂದ, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ 2ಬಿ ಗುಂಪಿಗೆ ಸೇರಿದ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೂ ವಿದ್ಯಾಸಿರಿ ಯೋಜನೆ ಲಾಭ ದೊರೆಯುವಂತೆ ಮಾಡಲು ಮನವಿ ಮಾಡಿದರು.
ಅದೇ ರೀತಿ ಕರ್ನಾಟಕ ಸರ್ಕಾರದ ಹಳೆಯ ಯೋಜನೆಗಳಲ್ಲೊಂದಾದ ಬಡ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಯ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತಿದೆ. ಆದರೆ ಕಳೆದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯನ್ನು ಬೇರ್ಪಡಿಸಿರುವುದರಿಂದ 2ಬಿ ಗುಂಪಿಗೆ ಸೇರಿದ ಬಡ ಮುಸ್ಲಿಂ ವಿದ್ಯಾರ್ಥಿಗಳನ್ನು ಆ ಯೋಜನೆಯಿಂದ ಕೈಬಿಡಲಾಗಿದೆ ಎಂದು ದೂರಿದರು.
ಸಂಘಟನೆ ಪ್ರಮುಖರಾದ ಡಾ.ರಝಾಕ್ ಉಸ್ತಾದ್, ಅಕ್ಬರ್ ಹುಸೇನ್ ನಾಗುಂಡಿ, ಸೈಯದುದ್ದೀನ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement