ಅಸುರಕ್ಷಿತ ಲೈಂಗಿಕ ಕ್ರಿಯೆಯೇ ಏಡ್ಸ್‌ಗೆ ಕಾರಣ: ಡಾ. ಭಾಗೀರತಿ
ಸಿಂಧನೂರು: ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದವರಿಗೆ ಎಚ್‌ಐವಿ ಸೋಕು ಕಂಡುಬರುತ್ತದೆ. ಇದು ಏಡ್ಸ್‌ಗೆ ರಹದಾರಿಯಾಗುತ್ತದೆ ಎಂದು ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾಗೀರತಿ ಅಭಿಪ್ರಾಯಪಟ್ಟರು.
ತಾಲೂಕಿನ ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮದುವೆಗೂ ಮುನ್ನ ಮಿಲನ ಬೇಡ. ಇದರಿಂದ ಯುವಕ-ಯುವತಿಯರು ದಾರಿ ತಪ್ಪುತ್ತಿದ್ದಾರೆ. ಎಚ್‌ಐವಿ ಏಡ್ಸ್ ಹರಡುವ ಬಗ್ಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್‌ಟಿಐ, ಎಸ್‌ಟಿಐ ಮೂಲಕ ಮಾರ್ಗದರ್ಶನ ಪಡೆದುಕೊಳ್ಳಬಹುದು. ಏಡ್ಸ್ ಪೀಡಿತರನ್ನು ಗೌರವದಿಂದ ಕಾಣುವುದು ಮುಖ್ಯವಾಗಿದೆ ಎಂದು ಹೇಳಿದರು.
ಎಆರ್‌ಟಿ ಹಾಗೂ ಐಸಿಟಿಸಿ ಆಪ್ತಸಮಾಲೋಚಕ ಪಾಮೇಶ ಕಟ್ಟಿಮನಿ ಐಸಿಟಿಸಿ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜವಳಗೇರಿ ಪಪೂ ಕಾಲೇಜು ಪ್ರಾಚಾರ್ಯ ಎಸ್.ಶಿವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಉಪನ್ಯಾಸಕರಾದ ಶೀಲಾ, ಮಲ್ಲಿಕಾರ್ಜುನ, ಡಾ. ನಾರಾಯಣ ಉಪಸ್ಥಿತರಿದ್ದರು. ಉಪನ್ಯಾಸಕ ವೈ.ಶಂಕ್ರಪ್ಪ ನಿರೂಪಿಸಿದರು.