ದುರಸ್ತಿ ಕಾಣದ ಬೊಮ್ಮನಾಳ ಕೆರೆ
ಕ.ಪ್ರ.ವಾರ್ತೆ , ಮುದಗಲ್ , ಡಿ.26
ಸರ್ಕಾರ ಕೆರೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೀಡುತ್ತಿದೆ. ನೀರು ಸಂಗ್ರಹಕ್ಕೆ ಕೆರೆಗಳ ಜೀರ್ಣೋದ್ಧಾರ ಮಾಡುವುದಾಗಿ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳುತ್ತಿದ್ದಾರೆ. ಅದಕ್ಕೆ ಅಪವಾದ ಎನ್ನುವಂತೆ ಸಮೀಪದ ಬೊಮ್ಮನಾಳ ಸಣ್ಣ ನೀರಾವರಿ ಯೋಜನೆಯ ಕೆರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿ ಭಾಗ್ಯ ಕಂಡಿಲ್ಲ.
ನೀರಾವರಿ ಪ್ರದೇಶ: ಸುಮಾರು 350 ಹೆಕ್ಟೇರ ಭೂ ಪ್ರದೇಶ ನೀರಾವರಿಯ ಉದ್ದೇಶ ಹೊಂದಿರುವ ಬೊಮ್ಮನಾಳ ಕೆರೆ 1230 ಮೀಟರ್ ಉದ್ದವಿದೆ. 1976ರಲ್ಲಿ ರು. 9.14 ಲಕ್ಷ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಬೊಮನಾಳ ಕೆರೆ ಜಲಾನಯನದ ಕಾಮಗಾರಿ ಆರಂಭಿಸಿತ್ತು. 1230 ಮೀಟರ ಕೆರೆಯ ಉದ್ದದಲ್ಲಿ 74.80 ಹೆಕ್ಟೇರ್ ಜಲಾನಯನ ಪ್ರದೇಶದಲ್ಲಿ 52.97 ಮಿಲಿಯನ್ ಕ್ಯುಬಿಕ್ ಫೀಟ್ನಷ್ಟು ನೀರಿನ ಸಾಮರ್ಥ್ಯ ಹೊಂದಿದೆ. ಕೆರೆಗೆ ಬಲದಂಡೆ 3.90 ಕಿ.ಮೀ ಎಡದಂಡೆಗೆ 3.5 ಕಿ.ಮೀ ಕಾಲುವೆ ಉದ್ದವಿದೆ.
ಬೋಗಸ್: ಆದರೆ ಪ್ರತಿ ವರ್ಷ ಕೆರೆಯ ದುರಸ್ತಿಗಾಗಿ ಲಕ್ಷಾಂತರ ರು. ವೆಚ್ಚ ಮಾಡಲಾಗುತ್ತದೆ. ಕಾಮಗಾರಿಗಳು ಕೇವಲ ಕಾಗದದಲ್ಲಿ ಮಾತ್ರ. ನಿಜ ಸ್ವರೂಪದಲ್ಲಿ ಕೆಲಸ ಸ್ವಲ್ಪವೂ ಕಣ್ಣಿಗೆ ಕಾಣುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಕಾಲುವೆ ನಿರ್ಮಿಸಿದಾಗಿನಿಂದ ಹೂಳು ತೆಗೆದಿಲ್ಲ. ಕೆರೆಯಲ್ಲಿ ಸಾಕಷ್ಟು ನೀರಿದ್ದರೂ, ರೈತರಿಗೆ ಪ್ರಯೋಜನವಾಗುತ್ತಿಲ್ಲ.
ಕಳೆದ ವರ್ಷ ಕೆರೆ ದುರಸ್ತಿಗೆ ಜಲಸಂವರ್ಧನ ಇಲಾಖೆಯಿಂದ ರು. 30 ಲಕ್ಷ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ ಕೆಲಸ ಮಾತ್ರ ಏನೂ ಆಗಿಲ್ಲ.
ವಂಚಿತ: ಕೆರೆಯ ದುರಸ್ತಿ ಕಾಮಗಾರಿ ಹೊಣೆ ಹೊತ್ತ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಈ ಪ್ರದೇಶದ ರೈತರು ನೀರಾವರಿ ಸೌಲಭ್ಯದಿಂದ ವಂಚಿವಾಗಿದ್ದಾರೆ. ಈ ಕೆರೆಯಿಂದ ನೀರು ಪಡೆದು ವರ್ಷಕ್ಕೆ ಎರಡು ಬೆಳೆ ಬೆಳೆಬೇಕಾಗಿದ್ದ ರೈತರು ಒಂದು ಬೆಳೆ ಪಡೆಯುವುದಕ್ಕೆ ಹರಸಾಹಸ ಮಾಡಬೇಕಾಗಿದೆ. ಈ ಪ್ರದೇಶದ ರೈತರಿಗೆ ಕೆರೆ ಇದ್ದರೂ ಇಲ್ಲದಂತಾಗಿದೆ.
ನಿರುಪಯುಕ್ತ: ಕೆರೆಯ ಒಡ್ಡಿನ ಮೇಲೆ ಮುಳ್ಳುಗಂಟಿಗಳು ಬೆಳೆದಿದೆ. ಜಾಕವಾಲ್ ಹತ್ತಿರ ಹೋಗಬೇಕಾದರೆ ದಾರಿ ಇಲ್ಲದಂತಾಗಿದೆ. ಕಾಡನ್ನು ಕತ್ತರಿಸಿಲ್ಲ. ರಾಜ್ಯ ಸರಕಾರ ಕೆರೆಗಳಿಗೆ ಹೂಳೆತ್ತುವ ಮೂಲಕ ಅವುಗಳನ್ನು ನೀರಾವರಿಗೆ ಯೋಗ್ಯವನ್ನಾಗಿ ಮಾಡುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಹಳೆಯದಾದರೂ ಈ ಕೆರೆಗೆ ಪ್ರಯೋಜನವಾಗಿಲ್ಲ.
ಒತ್ತುವರಿ: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಯತ್ತ ಸುಳಿಯದೆ ಇದ್ದುದರಿಂದ ಮಳೆ ಅಷ್ಟಕಷ್ಟೆ. ಸುತ್ತಮುತ್ತಲಿನ ಜಮೀನುಗಳ ಮಾಲೀಕರು ಕೆರೆಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಕೆರೆಯಲ್ಲಿ ಹೂಳಿನಲ್ಲಿ ಕಡಲೆ, ಸೌತೆಕಾಯಿ ಬೆಳೆದು ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಬೊಮ್ಮನಾಳ ಕೆರೆಯ ನೀರಾವರಿ ಯೋಜನೆ ಯಶಸ್ವಿಗೊಳಿಸುವುದು ಅವಶ್ಯಕವಾಗಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕೆರೆ ಅಭಿವೃದ್ಧಿ ಬಗ್ಗೆ ಇಚ್ಛಾಶಕ್ತಿ ವಹಿಸಬೇಕಾಗಿದೆ.
ಅಭಿಪ್ರಾಯ: ಬೊಮ್ಮನಾಳ ಕೆರೆ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಅನಕೂಲಕರವಾಗಿದೆ. ಅಲ್ಲದೆ ರಾಂಪುರ ಏತ ನೀರಾವರಿ ಯೋಜನೆಯ ನಾಲೆಯ ನೀರು ಸಂಗ್ರಹ ಮಾಡಿ ಎರಡು ಬೆಳೆಗೆ ಬೇಕಾದಷ್ಟು ನೀರನ್ನು ನೀಡಬಹುದಾಗಿದೆ. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ದುರಸ್ತಿ ನೆಪದಲ್ಲಿ ಬೋಗಸ್ ಬಿಲ್ ಬರೆದುಕೊಳ್ಳುತ್ತಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿ ಕೆರೆ ದುರಸ್ತಿ ಹಾಗೂ ಕಾಲುವೆ ದುರಸ್ತಿಗೊಳಿಸಿ ರೈತರ ಜಮೀನಿಗೆ ನೀರು ಒದಗಿಸಬಹುದಾಗಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕಡಿಮೆಯಾಗಿದೆ ಎಂದು ರೈತ ಹನುಮಂತಪ್ಪ ಹೇಳುತ್ತಾರೆ.
-ಪಂಪಯ್ಯ ಮಠ