ನೀರಿನ ಪೂರೈಕೆಗೆ ಸಮಿತಿ ರಚನೆಗೆ ನಗರಸಭೆ ಒಪ್ಪಿಗೆ
ಸಿಂಧನೂರು: ಮುಂಬರುವ ಏ.1 ರಿಂದ ಜು.31ರವರೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು, ನೀರು ಸರಬರಾಜು ತಾಂತ್ರಿಕ ಸಿಬ್ಬಂದಿ ತಂಡವನ್ನೊಳಗೊಂಡ ನಗರಸಭೆ ಹಿರಿಯ ಸದಸ್ಯರ ತಂಡವನ್ನು ರಚಿಸಲು ನಗರಸಭೆ ಸಾಮಾನ್ಯ ಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು.
ಮಾಹಿತಿ: ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಎಸ್‌ಆರ್ ಪಕ್ಷದ ಸದಸ್ಯ ಕೆ. ಮರಿಯಪ್ಪ ಕುಡಿಯುವ ಕೆರೆ ನೀರಿನ ಪ್ರಮಾಣ, ಎರಡು ವರ್ಷದಿಂದ ಮಾಡಿದ ಖರ್ಚು ಮಾಹಿತಿಗೆ ಉತ್ತರಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಗಂಗಾಧರ ಗೌಡ ದೊಡ್ಡ ಕೆರೆ, ಸಣ್ಣ ಕೆರೆ, ಅತಿ ಸಣ್ಣ ಕೆರೆ, ತುರ್ವಿಹಾಳ ಜಾಕ್ವೆಲ್ ಹತ್ತಿರ ನಿರ್ಮಿಸಿರುವ ಕೆರೆ ಸೇರಿ ಒಟ್ಟು 1350 ಮೆಗಾ ಗ್ಯಾಲನ್ ನೀರು ಸಂಗ್ರಹವಾಗುತ್ತಿದ್ದು, ಮಿತವಾಗಿ ನೀರು ಬಳಕೆಯಾದರೆ ಮಾತ್ರ ಬೇಸಿಗೆಯಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬಹುದು ಎಂದು ಉತ್ತರಿಸಿದರು. ಮುಂದಿನ ಬೇಸಿಗೆಯಲ್ಲಿ ಉಲ್ಬಣಿಸುವ ನೀರಿನ ಬರವನ್ನು ನೀಗಿಸಲು, ಚರ್ಚೆ ಮಾಡಿ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಸಹಾಯ ಧನ: ಹುಡ್ಕೋ ನವ ನಿರ್ಮಾಣ ಸಹಾಯ ಧನದ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತವಾದ ನಗರಾಭಿವೃದ್ಧಿಗಾಗಿ ಶೇ.90ರಷ್ಟು ಸಹಾಯ ಧನವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಗ್ನಿಶಾಮಕ ದಳದ ಆವರಣದಲ್ಲಿ ಬೋರ್ವೆಲ್, ತುರ್ವಿಹಾಳ ಮುಖ್ಯಪೈಪ್‌ನಿಂದ ಅಗ್ನಿಶಾಮಕ ದಳಕ್ಕೆ ನಳದ ಜೋಡಣೆ, ನಗರಸಭೆ ವ್ಯಾಪ್ತಿಯ ಹೂಳು ತೆಗೆಯಲು ಕಾರ್ಮಿಕರನ್ನು ನೇಮಿಸಿಕೊಳ್ಳುವುದು, ನೈರ್ಮಲ್ಯಕ್ಕಾಗಿ ಬ್ಲೀಚಿಂಗ್ ಪೌಡರ್ ಮತ್ತಿತರ ಸಾಮಗ್ರಿ ಖರೀದಿಸಲು ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ನಗರಸಭಾಧ್ಯಕ್ಷ ಜಾಫರ್ ಅಲಿ ಜಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಕೆಗಳನ್ನು ಓದಿ ದೃಢೀಕರಿಸಲಾಯಿತು. ಪೌರಾಯುಕ್ತ ನಾಸೀರ ಅಲಿ, ಉಪಾಧ್ಯಕ್ಷೆ ಲಕ್ಷ್ಮಿ ರಮೇಶ, ಹಿರಿಯ ಸದಸ್ಯರಾದ ಕೆ. ಮರಿಯಪ್ಪ, ಮಲ್ಲಿಕಾರ್ಜುನ ಪಾಟೀಲ್, ಚಂದ್ರು ಮೈಲಾರ, ಪ್ರಭುರಾಜ, ಲಿಂಗರಾಜ ಹೂಗಾರ, ಶೇಖರಪ್ಪ ಗಿಣಿವಾರ, ಹಾಜಿಮಸ್ತಾನ್, ಶರಣಬಸವ, ಸಣ್ಣವೀರಭದ್ರಪ್ಪ ವಿರೋಧ ಪಕ್ಷದ ಸದಸ್ಯರು, ಅಧಿಕಾರ ವರ್ಗ ಭಾಗವಹಿಸಿದ್ದರು