ರೈತರ ದಿನಾಚರಣೆ ಯಶಸ್ವಿ
ರಾಯಚೂರು: ಭಾರತದ ಮಾಜಿ ಪ್ರಧಾನಿ ದಿ. ಚೌಧರಿ ಚರಣಸಿಂಗ್ ಜನ್ಮದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಕೃಷಿ ವಿವಿ ಮತ್ತಿತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ನಗರದಲ್ಲಿ ರೈತರ ದಿನಾಚರಣೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಕೃಷಿ ನಿರ್ದೇಶಕ ರುದ್ರೇಶಪ್ಪ ವಹಿಸಿದ್ದರು. ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ. ಬಾಲ ಕೃಷ್ಣನ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎ.ಎಸ್. ಹಳೆಪೇಟಿ, ಡಾ. ಶಂಕರಗೌಡ, ಡಾ. ಸೋಮಶೇಖರ್ ಸೇರಿ ಅನೇಕರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ 200 ರೈತರು ಮತ್ತು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಮಗ್ರ ಕೃಷಿ ಬೇಸಾಯ ಪದ್ಧತಿಯ ಬಗ್ಗೆ ಡಾ. ಬಿ.ಕೆ. ದೇಸಾಯಿ ಹಾಗೂ ಡಾ. ಪ್ರಹ್ಲಾದ್ ಉಪನ್ಯಾಸ ನೀಡಿದರು.
ಅಂಗನವಾಡಿ
ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ
ಸಿಂಧನೂರು: ತಾಲೂಕಿನ ಬಾದರ್ಲಿ, ಬಪ್ಪೂರ, ಗೊರೇಬಾಳ ಗ್ರಾಮಗಳ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತಿಯರ ಹುದ್ದೆಗಳಿಗೆ ಹಾಗೂ 14 ಸಹಾಯಕಿಯರ ಹುದ್ದೆಗಳಿಗೆ ಜಿಲ್ಲಾಧಿಕಾರಿ ಆದೇಶದನ್ವಯ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಬಾದರ್ಲಿ ಪಂಚಾಯಿತಿಯ ಹೆಡಗಿನಾಳ-3, ಬಪ್ಪೂರ ಗ್ರಾಪಂ ನಂಜಲದಿನ್ನಿ-2 ಹಾಗೂ ಗೊರೇಬಾಳ ಗ್ರಾಪಂ ಗೊರೇಬಾಳ-1 ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಡಗಿನಾಳ-3 ಇತರೆ ವರ್ಗಕ್ಕೆ, ನಂಜಲದಿನ್ನಿ-2 ಎಸ್‌ಸಿ ವರ್ಗಕ್ಕೆ ಹಾಗೂ ಗೊರೇಬಾಳ-1 ಇತರೆ ವರ್ಗಕ್ಕೆ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.
ದುರ್ಗಾಪ್ರಸಾದ್ ದ್ವಿತೀಯ ಸ್ಥಾನ
ಸಿಂಧನೂರು: ನಗರದ ಸಂಕೇತ ಪ.ಪೂ.ಕಾಲೇಜಿನ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿ ದುರ್ಗಾಪ್ರಸಾದ್ ಎಂ. ಮುಚ್ಚಳಕ್ಯಾಂಪ್ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿ.21 ಮತ್ತು 22ರಂದು ಶಾದಿಮಹಲ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ದುರ್ಗಾಪ್ರಸಾದ ಎಂ. ಮುಚ್ಚಳಕ್ಯಾಂಪ್ ದ್ವಿತೀಯ ಬಹುಮಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಎಸ್. ಬಸವರಾಜ, ಕಾರ್ಯದರ್ಶಿ ಎಸ್. ಅನಿಲರಾಜ, ಕಾಲೇಜಿನ ಪ್ರಾಚಾರ್ಯ ಶ್ರೀಧರ ಕುಲಕರ್ಣಿ, ಸಿಬ್ಬಂದಿ ಶುಭ ಹಾರೈಸಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರ
ರಾಯಚೂರು: ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಗುರುವಾರ ರಾತ್ರಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ದೂರು ದಾಖಲಾಗಿದೆ.ಅತ್ಯಾಚಾರ ಎಸಗಿದವನನ್ನು ಅದೇ ಗ್ರಾಮದ ನೀತಿರಾಜ್ ಎಂದು ಗುರುತಿಸಲಾಗಿದೆ. ಈತ ಗ್ರಾಮದ ತನ್ನ ಮನೆಯ ಪಕ್ಕದಲ್ಲಿದ್ದ ಮನೆಯ ನಿವಾಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರೇಷ್ಮೆಯಿಂದ ಲಾಭ
ಮುದಗಲ್: ವಾಣಿಜ್ಯ ಬೆಳೆಗಳಲ್ಲೊಂದಾದ ರೇಷ್ಮೆ ಕೃಷಿ ರೈತರಿಗೆ ಅತ್ಯಂತ ಲಾಭದಾಯಕ ಬೆಳೆಯಾಗಿದೆ ಎಂದು ರೇಷ್ಮೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎ.ಡಿ. ಮೋಮಿನ್ ರೈತರಿಗೆ ಸಲಹೆ ನೀಡಿದರು.
ಪಟ್ಟಣ ಸಮೀಪದ ಆಮದಿಹಾಳ ಗ್ರಾಮದಲ್ಲಿ ಲಿಂಗಸ್ಗೂರು ತಾಲೂಕು ರೇಷ್ಮೆ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ರೇಷ್ಮೆ ಕೃಷಿ ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ರೇಷ್ಮೆ ಇತರ ಬೆಳೆಗಳಿಗಿಂತ ಭಿನ್ನವಾಗಿದ್ದು ರೇಷ್ಮೆಯಲ್ಲಿ ಕಡಿಮೆ ಖರ್ಚು, ಅಧಿಕ ಲಾಭ ದೊರೆಯಲಿದೆ ಎಂದರು.
ಭಾರತಕ್ಕೆ 2ನೇ ಸ್ಥಾನ: ಸರ್ಕಾರ ನಂಜುಂಡಪ್ಪ ವರದಿ ಅನುಷ್ಠಾನದಡಿಯಲ್ಲಿ ಹನಿ ನೀರಾವರಿಗೆ ಶೇ. 90ರಷ್ಟು ರಿಯಾಯತಿ ಹಾಗೂ ಉಳಿದ ಎಲ್ಲಾ ಯೋಜನೆಯಡಿ ಶೇಕಡಾ ಶೇ. 5ರಷ್ಟು ರಿಯಾಯತಿ ದರ ಹೆಚ್ಚಳವಾಗಿದೆ ರೇಷ್ಮೆ ರೈತರು ಇದರ ಲಾಭ ಪಡೆಯಬೇಕು ಅವರು, ರೇಷ್ಮೆ ಕೃಷಿಯಲ್ಲಿ ವಿಶ್ವಕ್ಕೆ ಚೀನಾ ಪ್ರಥಮ ಸ್ಥಾನ ಹೊಂದಿದರೆ, ಭಾರತ 20 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಬೆಳೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದೆ ಎಂದು ಹೇಳಿದರು.
ಇದಕ್ಕೂ ಮುಂಚೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಬಸಲಿಂಗಪ್ಪಗೌಡ, ಮಾನವಿಯ ಸಹಾಯಕ ನಿರ್ದೇಶಕ ಕೆ.ಜಮುನಾಜಿರಾವ್ ಹಾಗೂ ಲಿಂಗಸ್ಗೂರು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ರಾಜೇಂದ್ರಕುಮಾರ ದೇವದುರ್ಗ ರೇಷ್ಮೆ ಬೆಳೆಯ ಲಾಭ-ನಷ್ಟದ ಕುರಿತು ಮಾತನಾಡಿದರು.
ಸನ್ಮಾನ: ಆಮದಿಹಾಳ ಗ್ರಾಪಂ ಉಪಾಧ್ಯಕ್ಷ ಬಸನಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರಾದ ಭೀಮನಗೌಡ, ಮಹಿಬೂಬಸಾಬ ಹಾಗೂ ಮಾನಮ್ಮ ಅವರನ್ನು ಸನ್ಮಾನಿಸಲಾಯಿತು. ತಮ್ಮಣ್ಣ, ಬಸಪ್ಪ ಹಾಗೂ ಹೊನ್ನಪ್ಪ ಕರಿಸಿರಿ, ಅಮರಣ್ಣ ಗುಡಿಹಾಳ, ಪಿಡಿಒ ಶಿವಾನಂದ ಇದ್ದರು.