ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಣದ ಕೊರತೆ; ಹಾಸ್ಟೆಲ್ ಬಂದ್ ಮಾಡುವ ಪರಿಸ್ಥಿತಿ

Vishwanath S
Updated On : 28 Dec 2013, 11:22 am

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಡಿ.27
ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ವಿವಿಧ ವಸತಿ ನಿಲಯಗಳ ನಿರ್ವಹಣೆಗೆ ಹಣದ ಕೊರತೆಯಿದ್ದು, ಬಂದ್ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್ ತಿಳಿಸಿದರು.
ಸ್ಥಳೀಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಸಾಮಾನ್ಯ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದ ಅವರು, ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ 15 ಮೆಟ್ರಿಕ್ ಪೂರ್ವ, 5 ಮೆಟ್ರಿಕ್ ನಂತರದ ವಸತಿ ನಿಲಯ ಸೇರಿದಂತೆ ಒಟ್ಟು 24 ಹಾಸ್ಟೆಲ್‌ಗಳ ಪೈಕಿ ಕೆಲ ಕಡೆ ವಿದ್ಯುತ್ ಬಿಲ್, ಬೋಧನೆ, ಆಹಾರ, ಸಿದ್ಧಉಡುಪು, ಸಂಬಳ ಸೇರಿದಂತೆ ಇತರೆ ವೆಚ್ಚಗಳಿಗೆ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚು ಖರ್ಚು ಬರುತ್ತಿದ್ದು, ಕಳೆದ 11 ತಿಂಗಳಿಂದ ಸುಮಾರು 54 ಲಕ್ಷ ಹಣದ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.
ಹಣ ಅಗತ್ಯವಿದ್ರೆ ವರದಿ ಸಲ್ಲಿಸಿ: ತಾಪಂ ಇಒ ಶರಣಬಸಪ್ಪ ಪ್ರತಿಕ್ರಿಯಿಸಿ, ವಸತಿ ನಿಲಯಗಳ ನಿರ್ವಹಣೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕ್ರಿಯಾಯೋಜನೆ ತಯಾರಿಸಿದ ಪ್ರಕಾರ ಹಣ ಬಿಡುಗಡೆಯಾಗಿದೆ. ಹಣದ ಕೊರತೆಯಿಂದ ಹಾಸ್ಟೆಲ್ ಬಂದ್ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದರೆ ಹೇಗೆ, ವಸತಿ ನಿಲಯಗಳಿಗೆ ಹೆಚ್ಚಿನ ಹಣ ಅಗತ್ಯವಿದ್ದರೆ ಪುನಃ ಯೋಜನೆ ರೂಪಿಸಿ ವರದಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಹಾಸ್ಟೆಲ್‌ಗಳು ಸುಸೂತ್ರವಾಗಿ ನಡೆಸಲು ಬೇಕಾದ ಅಗತ್ಯ ಕ್ರಮಗಳ ಕುರಿತು ವರದಿ ನೀಡಿದರೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಸ್ಪಷ್ಟಪಡಿಸಿದರು.
ಗ್ಯಾಸ್ ವಿತರಿಸಿಲ್ಲ: ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ರೋಡಲಬಂಡಾ, ನಾಗರಹಾಳ, ಆನೆಹೊಸೂರು ಸೇರಿದಂತೆ ಕೆಲ ವಸತಿ ನಿಲಯಗಳಿಗೆ ಗ್ಯಾಸ್ ವಿತರಣೆ ಮಾಡದ ಕಾರಣ ಕಟ್ಟಿಗೆಯಿಂದ ಆಹಾರ ತಯಾರಿಸಲಾಗುತ್ತಿದೆ. ಆದರೆ ಗ್ಯಾಸ್ ಏಜೆನ್ಸಿಗಳಿಗೆ ಪ್ರತಿ ತಿಂಗಳು ಚೆಕ್ ನೀಡಲಾಗುತ್ತಿದೆ. ಗ್ಯಾಸ್ ಇರುವ ಮತ್ತು ಗ್ಯಾಸ್ ಇಲ್ಲದ ವಸತಿ ನಿಲಯಗಳ ಮಾಹಿತಿ ನೀಡುವಂತೆ ತಾಪಂ ಸದಸ್ಯರಾದ ರುದ್ರಗೌಡ ತುರಡಗಿ, ಬಸನಗೌಡ ಕೊಡ್ಲಿ, ಗುಂಡಪ್ಪ ಕಾಚಾಪೂರ ಒತ್ತಾಯಿಸಿದರು.
ಶಿಕ್ಷಣ ಇಲಾಖೆ ನಿರ್ವಹಣೆ ಸರಿಯಿಲ್ಲ: ತಾಲೂಕಿನ ವಿವಿಧ ಪ್ರಾಥಮಿಕ ಶಾಲೆ ಮಕ್ಕಳಿಗೆ ವರ್ಣಮಾಲೆ ಬರುವುದಿಲ್ಲ. ಶಿಕ್ಷಕರು ಏನು ಪಾಠ ಮಾಡುತ್ತಾರೆ. ಮಕ್ಕಳ ಸಂಖ್ಯೆ ಇರುವಲ್ಲಿ ಶಿಕ್ಷಕರಿಲ್ಲ, ಶಿಕ್ಷಕರಿದ್ದಲ್ಲಿ ಮಕ್ಕಳಿಲ್ಲ. ಹೆಚ್ಚುವರಿ ಶಿಕ್ಷಕರಿರುವಲ್ಲಿ ಬೇರೆಡೆ ವರ್ಗಾಯಿಸಿ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು. ಬಹುತೇಕ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲವೆಂದು ಗೊತ್ತಾಗುತ್ತದೆ. ಅಲ್ಲದೆ ಕೆಲ ಶಾಲೆಗಳಿಗೆ ಸಮರ್ಪಕ ಕೊಠಡಿಗಳಿಲ್ಲದೆ ಮಕ್ಕಳು ಪರದಾಡುವಂತಾಗಿದೆ.
ಇದಕ್ಕೆ ಶಿಕ್ಷಣ ಇಲಾಖೆ ಮಕ್ಕಳ ಮೌಲ್ಯಮಾಪನ, ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸದೆ ನಿರ್ಲಕ್ಷ ತೋರಿದೆ. ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ ಎಂದು ತಾಪಂ ಸದಸ್ಯೆ ನಾಗವೇಣಿ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ತಾಪಂ ಅಧಿಕಾರಿ ಹಾಗೂ ತಾಪಂ ಸದಸ್ಯರು, ಬಿಇಒ, ಬಿಆರ್‌ಸಿ, ಸಿಆರ್‌ಸಿ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮುಖ್ಯಗುರುಗಳ ಪ್ರತ್ಯೇಕ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ವೈದ್ಯ, ಸಿಬ್ಬಂದಿ ಕೊರತೆ- ತೊಂದರೆ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ವೈದ್ಯರು, ಪ್ರಸೂತಿ ತಜ್ಞರು, ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಪಿಎಚ್‌ಸಿ ಕೇಂದ್ರಗಳಿಗೆ ಬರುವ ರೋಗಿಗಳಿಗೆ ರಕ್ತ ಪರೀಕ್ಷೆ ಮಾಡಿದ ವರದಿ ನೀಡಲು 2-3 ದಿನ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದ ರೋಗಿ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತದೆ. ಶೀಘ್ರ ವರದಿ ನೀಡಿದರೆ ಚಿಕಿತ್ಸೆ ಪಡೆಯಬಹುದಾಗಿದೆ.
ಅಲ್ಲದೆ ಆರ್‌ಎಂಪಿ ವೈದ್ಯರ ತಡೆಗೆ ಸರ್ಕಾರ ಮುಂದಾಗಿದೆ. ಇದರಿಂದ ಬಡವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗಿ ಸಾವಿರಾರು ರು. ವೆಚ್ಚ ಭರಿಸುವ ಪರಿಸ್ಥಿತಿ ಉಂಟಾಗಿದೆ ಎಂದು ತಾಪಂ ಸದಸ್ಯರಾದ ಬಸನಗೌಡ ಕೊಡ್ಲಿ, ಗುಂಡಪ್ಪ ಕಾಚಾಪುರ, ರುದ್ರಗೌಡ ತುರಡಗಿ ದೂರಿದರು.
ಗ್ರಾಮಸಭೆ ನಡೆಸಿ: ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಸರಸ್ವತಿ, ಇಲಾಖೆ ಪ್ರಗತಿ ವರದಿ ವಿವರಿಸಿದರು. ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅನುಷ್ಠಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ವಿಶೇಷ ಘಟಕ ಯೋಜನೆಯಡಿ ರಾಶಿಯಂತ್ರ, ಟಾರ್ಪಾಲಿನ್ ಸೇರಿದಂತೆ ವಿವಿಧ ಕೃಷಿ ಸಲಕರಣೆಗಳನ್ನು ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಬೇಜವಬ್ದಾರಿ ತೋರಿದ್ದಾರೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ರುದ್ರಗೌಡ ತುರಡಗಿ, ಗುಂಡಪ್ಪ ಕಾಚಾಪೂರ ಆಕ್ರೋಶ ವ್ಯಕ್ತಪಡಿಸಿದರು. ಆಗ ತಾಪಂ ಅಧಿಕಾರಿ ಶರಣಬಸಪ್ಪ ಮಾತನಾಡಿ, ಗ್ರಾಮ ಸಭೆ ಆಗಿದ್ದರೆ ವರದಿ ಕೊಡಿ. ಇಲ್ಲದಿದ್ದರೆ ದಿನಾಂಕ ನಿಗದಿ ಮಾಡಿ ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೃಷಿ ಪರಿಕರಗಳನ್ನು ವಿತರಿಸುವಂತೆ ತಾಕೀತು ಮಾಡಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ, ತಾಪಂ ಸದಸ್ಯರಾದ ಪರಸಪ್ಪ ಹುನಕುಂಟಿ, ಬಸವರಾಜ ದೊಡ್‌ಡಹೊಲ, ಹನುಮಂತಪ್ಪ ಮೋಚಿ, ಬಸನಗೌಡ ಕೊಡ್ಲಿ, ಗುಂಡಪ್ಪ ಕಾಚಾಪೂರ, ರುದ್ರಗೌಡ ತುರಡಗಿ, ನಾಗವೇಣಿ, ಲಲಿತಮ್ಮ, ಸಂಗಮ್ಮ ಸಿದ್ಧನಗೌಡ, ಲಲಿತಮ್ಮ ಶಿವನಗೌಡ ಇದ್ದರು.
ಬಡ್ಡಿಸಹಿತ ವಾಪಸ್ ನೀಡಬೇಕಾದೀತು!
ತಾಲೂಕಿನಲ್ಲಿ ಕೆಲ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದವರಿಗೆ ವಹಿಸಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿವೆ. ಅನುದಾನ ಬಿಡುಗಡೆಯಾದರೂ ಈಚನಾಳ, ದೇವರಭೂಪೂರ ಸೇರಿ ಕೆಲ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ನೀಡಿಲ್ಲವೆಂದು ನೆಪ ಹೇಳುತ್ತಾ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ತಾಪಂ ಸದಸ್ಯರು ಆರೋಪಿಸಿದರು.
ಇದಕ್ಕೆ ತಾಪಂ ಅಧಿಕಾರಿ, ಭೂ ಸೇನಾ ನಿಗಮಕ್ಕೆ ಸರ್ಕಾರದಿಂದ ಲಕ್ಷಾಂತರ ರು. ಅನುದಾನ ಬಿಡುಗಡೆಯಾಗಿದೆ. ಈ ಹಣಕ್ಕೆ ಶೇ.8ರಷ್ಟು ಬಡ್ಡಿ ಬರುತ್ತಿದೆ. ಇಷ್ಟು ವ್ಯವಸ್ಥೆ ಇದ್ದರೂ ಕಟ್ಟಡ ನಿರ್ಮಿಸಲು ವಿಳಂಬ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು, 2014 ಮಾರ್ಚ್ ಒಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸದಿದ್ದರೆ ಬಿಡುಗಡೆ ಹಣದ ಜೊತೆ ಬಡ್ಡಿ ಸಮೇತ ಹಿಂದಿರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಾಯಿ ಸಮಿತಿಗಳ ರಚನೆ ಅವಶ್ಯ: ಇಒ
ತಾಪಂಗೆ ಸ್ಥಾಯಿ ಸಮಿತಿ ನೇಮಕ ಮಾಡುವುದು ಅವಶ್ಯ. ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ನೇಮಕ ಮಾಡಬೇಕಿದೆ. ಪ್ರತಿಯೊಂದು ಸ್ಥಾಯಿ ಸಮಿತಿ 6 ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ತಿಳಿಸಿದರು.
ಇದಕ್ಕೆ ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್ ಅವರು ನೇಮಕ ಮಾಡುವ ಅಧಿಕಾರ ಪಡೆಯುವಂತೆ ಸರ್ವ ಸದಸ್ಯರು ನಿರ್ಧರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement