ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಲ್ಲರೂ ಪರಸ್ಪರ ಸಂಕಷ್ಟಗಳಿಗೆ ಸ್ಪಂದಿಸಿ

Vishwanath S
Updated On : 29 Dec 2013, 12:19 pm

ಕ.ಪ್ರ. ವಾರ್ತೆ  ರಾಯಚೂರು  ಡಿ.28
ಸಮಾಜದಲ್ಲಿ ನೆಲೆಸಿರುವ ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಿ ಬದುಕಬೇಕು. ಎಲ್ಲರ ಕಷ್ಟಗಳನ್ನು ಅರಿತು ಅದಕ್ಕೆ ಪ್ರತಿಯಾಗಿ ಸ್ಪಂದಿಸುವ ಗುಣ ರೂಢಿಸಿಕೊಂಡಾಗ ಮಾತ್ರ ಮನುಷ್ಯ ಸಮಾಜದಲ್ಲಿ ನೆಮ್ಮದಿಯಿಂದರಲು ಸಾಧ್ಯವಾಗುತ್ತದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಸಲಹೆ ನೀಡಿದರು.
ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ನವಜೀವನ ಮಹಿಳಾ ಒಕ್ಕೂಟದ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಸ್ತಿ ಗಳಿಕೆಯೊಂದೇ ಎಲ್ಲರ ಗುರಿಯಾಗಬಾರದು. ಶ್ರೀಮಂತಿಕೆಯ ಜೀವನಶೈಲಿಯಿಂದ ಮನುಷ್ಯನಿಗೆ ನೆಮ್ಮದಿ ದೊರೆಯದು. ಸಂಕಷ್ಟದಲ್ಲಿರುವಂಥವರಿಗೆ ನೆರವಾಗುವ ಮೂಲಕ ಅವರು ವ್ಯಕ್ತಪಡಿಸುವ ಆದರ, ಪ್ರೀತಿಯಲ್ಲಿಯೇ ನೆಮ್ಮದಿ ಕಾಣುವುದು ಎಲ್ಲರ ಗುರಿಯಾಗಬೇಕೆಂದರು.
ನವಜೀವನ ಮಹಿಳಾ ಟ್ರಸ್ಟ್ ಸಾಧನೆ ಶ್ಲಾಘನೀಯ: ಸಮಾಜದಲ್ಲಿ ನೆಲೆಸಿರುವ ದೇವದಾಸಿ ಪದ್ಧತಿಯಂಥ ಅನಿಷ್ಟ ಪದ್ಧತಿ ವಿರುದ್ಧ ಕಳೆದ 10 ವರ್ಷಗಳಿಂದ ಸತತ ಶ್ರಮಿಸುತ್ತಿರುವ ನವಜೀವನ ಮಹಿಳಾ ಒಕ್ಕೂಟದ ಸಾಧನೆ ಶ್ಲಾಘನೀಯ.
  ಸಂಘಟನೆಯು ಇನ್ನಿತರರಿಗೂ ಮಾದರಿಯಾಗಿದೆ. ದೇವದಾಸಿ ಪದ್ಧತಿಯಲ್ಲಿ ಸಿಲುಕಿ ತೊಂದರೆ ಎದುರಿಸಿದವರಿಗೆ ಸಂಘಟನೆಯ ಮೂಲಕ ಎಲ್ಲ ರೀತಿಯಿಂದ ನೆರವಾಗಿರುವುದು ಮತ್ತು ಅಂಥವರಲ್ಲಿ ಆತ್ಮವಿಶ್ವಾಸ ತುಂಬಿ ಅವರ ಮಕ್ಕಳನ್ನು ಉನ್ನತ ಶಿಕ್ಷಣ ಪಡೆಯಲು ನೆರವಾಗಿದ್ದು ಶ್ಲಾಘನೀಯ ಎಂದರು.
10 ಲಕ್ಷ ಠೇವಣಿ: ಸಂಘಟನೆಯಲ್ಲಿರುವ ಸದಸ್ಯರ ಮಕ್ಕಳು ಸುಲಭವಾಗಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಹಾಗೂ ಉದ್ಯೋಗ ಪಡೆಯುವಂತಾಗಲು ವಿವಿಧ ಕೋರ್ಸುಗಳಿಗೆ ಸೇರಬೇಕು. ಮುಂದಿನ ದಿನಗಳಲ್ಲಿ ಸಂಸ್ಥೆ ಸಹಾಯದಿಂದ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದ ಅವರು, ಒಕ್ಕೂಟದ ಬ್ಯಾಂಕಿನಲ್ಲಿ 10 ಲಕ್ಷ ಠೇವಣಿ ಇಡುವುದಾಗಿಯೂ ಭರವಸೆ ನೀಡಿದರು.
 ಠೇವಣಿಯಿಂದ ದೊರೆಯುವ ಬಡ್ಡಿಯಲ್ಲಿ ಒಕ್ಕೂಟದ ಕಾರ್ಯನಿರ್ವಹಣೆ ಸುಧಾರಣೆಗೆ ಬಳಸಲು ಸೂಚಿಸಲಾಗುತ್ತದೆ ಎಂದು ತಿಳಿಸಿದರು.
ಒಕ್ಕೂಟದಿಂದ ನಿಸ್ವಾರ್ಥ ಸೇವೆ: ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ನಿಜವಾದ ಸೇವಾ ಮನೋಭಾವದೊಂದಿಗೆ ಒಕ್ಕೂಟದವರು ಕಾರ್ಯ ನಿರ್ವಹಿಸುತ್ತಿರುವುದು ಸರ್ಕಾರಕ್ಕೆ ಪಾಠ ಎನ್ನಬಹುದು.
ಸಮಾಜದಲ್ಲಿರುವ ಅನಿಷ್ಟ ಪದ್ಧತಿ ತೊಲಗಿಸಲು ಒಕ್ಕೂಟದಿಂದ ಕೈಗೊಳ್ಳುತ್ತಿರುವ ನಿಸ್ವಾರ್ಥ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನವ ಜೀವನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೋಕ್ಷಮ್ಮ, ದೇಶಪಾಂಡೆ ಪೌಢೇಶನ್‌ನ ಜಯಶ್ರೀ ದೇಶಪಾಂಡೆ, ಒಕ್ಕೂಟದ ಪದಾಧಿಕಾರಿಗಳಾದ ಮಂಜುಳಾ, ಶರಣಮ್ಮ ಸೇರಿ ಅನೇಕರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಒಕ್ಕೂಟದ ನೂರಾರು ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement