ಅಂಗವಿಕಲರನ್ನು ಗೌರವದಿಂದ ಕಾಣಲು ಸಲಹೆ
ರಾಯಚೂರು: ಅಂಗವಿಕಲತೆ ಶಾಪವಲ್ಲ. ಅಂಗವೈಕಲ್ಯದಿಂದ ಬಳಲುತ್ತಿರುವವರನ್ನು ಸಮಾಜವು ಗೌರವದಿಂದ ಕಾಣಬೇಕಿದೆ. ಆ ಮೂಲಕ ಮಾನವೀಯತೆ ಮೆರೆಯುವಂತೆ ಮಾನವಿ ಪುರಸಭೆ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿ ಸಲಹೆ ನೀಡಿದರು.
ಮಾನವಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಈಚೆಗೆ ಯುವಶಕ್ತಿ ಅಂಗವಿಕಲರ ಅಭಿವೃದ್ಧಿ ಸಂಸ್ಥೆ ಮಾನವಿ ಹಾಗೂ ಎಂ.ಆರ್. ಡಬ್ಲೂ, ವಿ.ಆರ್.ಡಬ್ಲೂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂಗವಿಕಲರ ಏಳಿಗೆಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದರ ಪ್ರಯೋಜನ ಪಡೆದು ಬದುಕಿನಲ್ಲಿ ಅಂಗವಿಕಲರು ಪ್ರಗತಿ ಸಾಧಿಸುವಂತೆ ಮನವಿ ಮಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತಿದೆ ಎಂದರು.
ತಹಸೀಲ್ದಾರ್ ಎಂ.ಐ. ಶಹನೂರು ಮಾತನಾಡಿ, ಅಂಗವಿಕಲರಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ರೂಪಿಸುವ ಅವಶ್ಯವಿದೆ. ಅಂಗವಿಕಲರಿಗೆ ತಹಸೀಲ್ದಾರ್ ಕಾರ್ಯಲಯದಿಂದ ಎಲ್ಲ ಸೌಲಭ್ಯ, ಸಹಕಾರ ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಅಂಗವಿಕಲರು ಭಾರೀ ಸಾಧನೆ ಮಾಡಿದ್ದನ್ನು ಮರೆಯುವಂತಿಲ್ಲ ಎಂದರು. ಅಂಗವಿಕಲರ ರಾಜ್ಯ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ದೇಸಾಯಿ ದೋತರಬಂಡಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ, ಕೆ. ಸತ್ಯನಾರಾಯಣ, ಕಂದಾಯ ನೀರಿಕ್ಷಕ ರಾಜಕುಮಾರ, ಯುವಶಕ್ತಿ ಅಂಗವಿಕಲರ ಅಧ್ಯಕ್ಷೆ ಸಾವಿತ್ರಮ್ಮ, ಉಪಖಜನೆ ಅಧಿಕಾರಿ ರಾಮುಲು, ಶಿವಶಂಕರ ನಾಯಕ, ಶೇಖರಪ್ಪ ಮತ್ತಿತರಿದ್ದರು.