ಅಂಚೆ ಇಲಾಖೆ ಪ್ರಗತಿ: ನೌಕರರಿಗೆ ಶ್ಲಾಘನೆ
ರಾಯಚೂರು: ಅಂಚೆ ಇಲಾಖೆಯ ಆಡಳಿತ ಸುಧಾರಣೆಯಲ್ಲಿ ನೌಕರರ ಪಾತ್ರ ಮಹತ್ವದ್ದು. ಅಂಚೆ ಇಲಾಖೆಯಲ್ಲಿ ತಂದಿರುವ ತಾಂತ್ರಿಕ ಮಾರ್ಪಾಟುಗಳನ್ನು ನೌಕರರು ಪಾಲಿಸುವ ಮೂಲಕ ಜನತೆಗೂ ನೆರವಾಗಿದ್ದಾರೆಂದು ಜಿಲ್ಲಾ ಅಂಚೆ ಅಧೀಕ್ಷಕ ಪಿ.ಎಸ್. ಹೆಡಗಿನಾಳ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ವಿಠಲ ರುಕ್ಮಿಣಿ ಕೃಷ್ಣಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಂಚೆ ನೌಕರರ ಸಂಘ ಪಿ-3 ಪೋಸ್ಟ್‌ಮ್ಯಾನ್ ಪಿ-4 ಹಾಗೂ ಗ್ರಾಮೀಣ ಅಂಚೆ ನೌಕರರ ಜಿಲ್ಲಾ ವಿಭಾಗದ 18ನೇ ದ್ವೈವಾರ್ಷಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಉತ್ತಮ ಬದುಕು ಸಾಗಿಸಿ: ಕೇಂದ್ರ ಸರ್ಕಾರವು ಅಂಚೆ ಇಲಾಖೆಯ ನೌಕರರು ಮತ್ತು ಅವರ ಕುಟುಂಬದವರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದ್ದು ಅವುಗಳನ್ನು ಪಡೆದು ಉತ್ತಮ ಬದುಕು ಸಾಗಿಸುವಂತೆ ಮನವಿ ಮಾಡಿದರು. ಬೆಂಗಳೂರಿನ ಪಿ-3 ವಲಯ ಕಾರ್ಯದರ್ಶಿ ಬಿ. ಶಿವಕುಮಾರ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿರುವ ಅಂಚೆ ಇಲಾಖೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗಕ್ಕೆ ಎಲ್ಲ ನೌಕರರೂ ಮುಂದಾಗಬೇಕು ಎಂದರು.
ನಿವೃತ್ತಿ ಹೊಂದಿದ ಅಂಚೆ ನೌಕರರು, ಜಿಡಿಎಸ್ ಸಿಬ್ಬಂದಿಗೆ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಪಿ-3 ಜಿಲ್ಲಾ ಗೌರವಾಧ್ಯಕ್ಷ ಸದಾಶಿವ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಕಡಗೋಲ ಶರಣಪ್ಪ, ಪಿ- 4 ಅಧ್ಯಕ್ಷ ಶಿವಯೋಗಪ್ಪ, ಜಿಡಿಎಸ್ ಸಿಬ್ಬಂದಿ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ, ಪಿ- 4 ವಲಯ ಕಾರ್ಯದರ್ಶಿ ಕೆ.ಸಿ. ಗಂಗಯ್ಯ, ಜಿಡಿಎಸ್ ವಲಯ ಕಾರ್ಯದರ್ಶಿ ಎಂ.ಪಿ. ಚೆತ್ರಸೇನ್, ಪಿ-3 ಪ್ರಾಂತೀಯ ಪ್ರತಿನಿಧಿ ವಿಜಯ ಇನಾಂದಾರ್, ಯುಎನ್‌ಐ ಮಹಿಳಾ ಸಂಘಟಕಿ ವಿ. ಶಾಂತಾಬಾಯಿ, ಎಚ್.ಎನ್. ಗಣೇಶ್, ರಮೇಶ ಗಟ್ಟು, ಜಂಬಯ್ಯ ಸ್ವಾಮಿ, ಮೋಹನ್ ರೆಡ್ಡಿ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಎರಡೂ ಸಂಘಟನೆಗಳ ನೂರಾರು ಪದಾಧಿಕಾರಿಗಳು, ಕುಟುಂಬದ ಸದಸ್ಯರು ಇದ್ದರು.