ಕುಡಿವ ನೀರು, ಮಹಿಳಾ ಶೌಚಾಲಯ ಸ್ವಚ್ಛತೆಗೆ ಆಗ್ರಹ
ಕ.ಪ್ರ. ವಾರ್ತೆ, ಮುದಗಲ್, ಡಿ.30
ಪಟ್ಟಣದ 18ನೇ ವಾರ್ಡಿನ ಮಹಿಳೆಯರು ಹಾಗೂ ಪುರುಷರು ಜಂಟಿಯಾಗಿ ಕುಡಿಯುವ ನೀರು ಮತ್ತು ಮಹಿಳಾ ಶೌಚಾಲಯ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಕಚೇರಿ ಪ್ರಾರಂಭಕ್ಕೆ ದ್ವಾರ ಬಾಗಿಲಿಗೆ ಕುಳಿತುಕೊಳ್ಳುವ ಮೂಲಕ ಮುತ್ತಿಗೆ ಹಾಕಿದ ಘಟನೆ ಜರುಗಿದೆ.
ಪಟ್ಟಣ ಪಂಚಾಯತಿ ಪ್ರಾರಂಭವಾಗುತ್ತಿದ್ದಂತೆ 18ನೇ ವಾರ್ಡಿನ ಅನೇಕ ಮಹಿಳೆಯರು ಪಟ್ಟಣ ಪಂಚಾಯತಿಯ ದ್ವಾರ ಬಾಗಿಲಿಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ಪ್ರಾರಂಭಿಸಿದರು. ಪ್ರತಿಭಟನೆಗೆ ಮಹಿಳೆಯರು ಮುಂದಾಗುತ್ತಿದ್ದಂತೆ ಪಪಂ ಅದ್ಯಕ್ಷ ರಜ್ಜಬಲಿ ಟಿಂಗ್ರಿ ಹಾಗೂ ಸದಸ್ಯರು ಸ್ಥಳಕ್ಕೆ ಧಾವಿಸಿ ಸಮಜಾಯಿಸಿ ಹೇಳಿದರೂ ಕೇಳದ ಮಹಿಳೆಯರು ಪ್ರತಿಭಟನೆ ನಡೆಸಿದರು.
ಸಕಾಲಕ್ಕೆ ನೀರಿಲ್ಲ: ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಬೇಕೆಂದು ಹಟ ಹಿಡಿದರು. 18 ನೇ ವಾರ್ಡಿನಲ್ಲಿ ಕುಡಿಯುವ ನೀರು ಸರಬರಾಜಿಗೆ ನಿಗದಿತ ಸಮಯವಿಲ್ಲ. ವಾರ್ಡಿನಲ್ಲಿ ಗಂಡಸರು ಬೆಳಿಗ್ಗೆಯೇ ದುಡಿಯಲು ಹೋದರೆ, ಮಹಿಳೆಯರು ಕಂಕರ್ ಒಡೆಯಲು ಗುಡ್ಡಕ್ಕೆ ಹೋಗಿ ಸಾಯಂಕಾಲ ಬರುತ್ತಾರೆ.
ಅನಾನುಕೂಲ: ಆದರೆ ಪಟ್ಟಣ ಪಂಚಾಯತಿಯವರು ಕುಡಿಯುವ ನೀರನ್ನು ಸಾಯಂಕಾಲ ಸರಬರಾಜು ಮಾಡುತ್ತಿದ್ದು, ದುಡಿವ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ. ಅಲ್ಲದೇ ವಾರ್ಡಿನಲ್ಲಿ ಸಾರ್ವಜನಿಕರ ನಳಗಳು ಸಮರ್ಪಕವಾಗಿಲ್ಲ. ಇದರಿಂದ ಕುಡಿಯುವ ನೀರಿಗೆ ಎಲ್ಲ ಕಾರ್ಮಿಕರು ಅಲೆದಾಡುವಂತಾಗಿದೆ. ನೀರು ತುಂಬಲು ನಿಂತರೇ ರಾತ್ರಿ ವೇಳೆಗೆ ಅಡುಗೆ ಮಾಡಲು ಅನಾನುಕೂಲವಾಗುತ್ತಿದೆ. ಮಹಿಳಾ ಶೌಚಾಲಯ ಸಮರ್ಪಕ ನಿರ್ವಹಣೆ ಇಲ್ಲದೇ ಅಲ್ಲಿಗೆ ತೆರಳಿದ ಮಹಿಳೆಯರು ನರಕ ಯಾತನೆ ಅನುಭವಿಸುವಂತಾಗಿದೆ. ಸ್ವಚ್ಛತೆಗೆ ನೀರು ಇರದೇ ಇರುವದು ಒಂದೆಡೆಯಾದರೆ ಸ್ವಚ್ಛತೆಯಾಗದೇ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ವೃದ್ಧರಂತೂ ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಅಲೆದಾಟ: ನಮ್ಮ ಮನೆ ಯೋಜನೆಯ ಫಲಾನುಭವಿಯೊಬ್ಬರಿಗೆ ಎರಡು ಕಂತಿನ ಚೆಕ್‌ಗಳನ್ನು ನೀಡಿದ್ದು, ಮೂರನೇ ಕಂತಿನ ಚೆಕ್ ನೀಡಲು ಕಳೆದ ಆರು ತಿಂಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ವಾರ್ಡಿನಲ್ಲಿ ಚರಂಡಿ ತುಂಬಿ ತುಳುಕುತ್ತಿದ್ದು, ಚರಂಡಿ ನೀರು ಮನೆ ಪ್ರವೇಶಸುವಂತಾಗಿದೆ. ಪಪಂ ಸದಸ್ಯರು ಚುನಾಯಿತರಾಗಿ ಆರೆಂಟು ತಿಂಗಳಾದರೂ ವಾರ್ಡಿನ ಜನತೆಯ ಸಮಸ್ಯೆಗೆ ಸ್ಪಂದಸುತ್ತಿಲ್ಲ ಎಂದು ವಾರ್ಡಿನ ಸದಸ್ಯ ಬಂದೇನವಾಜ ಅವರ ಮೇಲೆ ಕಿಡಿ ಕಾರಿದರು. ಪ್ರತಿಭಟನೆಯಲ್ಲಿ ರಜಿಯಾ ಬೇಗಂ, ಷೈಜಾದಿ, ಖಾಜಾಬೀ, ಅಬ್ದುಲ್ ಮಜೀದ್, ಹುಸೇನ್‌ಬೀ ಭಾಗವಹಿಸಿದ್ದರು.