'ಜಿಎಸ್ಎಸ್ ಯುವ ಸಾಹಿತಿಗಳಿಗೆ ಕೊಂಡಿ'
ಸಿಂಧನೂರು: ಶಿಕ್ಷಕರ ಮಗನಾಗಿ ಜನಿಸಿದ ಶಿವರುದ್ರಪ್ಪ ನಿರಂತರ ಅಧ್ಯಯನ, ಸಾಹಿತ್ಯದ ಸೂಕ್ಷ್ಮ ಸಂವೇದನಗಳನ್ನು ಅರಿತುಕೊಂಡು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ. ಹಳೆತಲೆಮಾರಿನಿಂದ ಹೊಸತಲೆಮಾರಿನ ಸಾಹಿತಿಗಳಿಗೆ ಅವರು ಕೊಂಡಿಯಾಗಿದ್ದರು ಎಂದು ಗುಂಡಾ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಚಿದಾನಂದ ಗುರುವಿನ ಹೇಳಿದರು.
ಅವರು ಸೋಮವಾರ ಅನಿಕೇತನ ಸ್ವತಂತ್ರ ಪ.ಪೂ. ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಾಸಿಕ ಕಾರ್ಯಕ್ರಮ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನೆನಹು ಹಾಗೂ ಗೀತನಮನ ಕಾರ್ಯಕ್ರಮದಲ್ಲಿ ಅವರ ಜೀವನ ಸಾಹಿತ್ಯ ಸಾಧನೆ ಕುರಿತು ಮಾತನಾಡಿದರು.
ಸಾಹಿತ್ಯ ಸಿಂಚನ ಕಾರ್ಯಕ್ರಮ್ನ ಉದ್ಘಾಟಿಸಿದ ಹಿರಿಯ ಪತ್ರಕರ್ತ ಡಿ.ಹೆಚ್. ಕಂಬಳಿ ಮಾತನಾಡಿ, ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಅಭಿಪ್ರಾಯದಂತೆ ಜಿ.ಎಸ್.ಶಿವರುದ್ರಪ್ಪನವರ ಸಮನ್ವಯ ಕವಿಯಷ್ಟೇ ಅಲ್ಲ, ಸಮಚಿತ್ತದ ಕವಿಯೆಂದು ಕರೆದಿರುವುದು ಸರಿಯಾಗಿದೆ ಎಂದರು.
ಶ್ಲಾಘನೆ: ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಮರೇಶ ಮೈಲಾರ್ ಮಾತನಾಡಿ, ಹಿರಿಯ ಸಾಹಿತಿಗಳ ಪರಿಚಯ ಕಾರ್ಯಕ್ರಮವನ್ನು ಮನೆ, ಕಾಲೇಜುಗಳಲ್ಲಿ ಹಮ್ಮಿಕೊಂಡು ವ್ಯವಸ್ಥಿತವಾದ ಕಾರ್ಯಕ್ರಮ ನಡೆಸಿಕೊಂಡು ಬಂದಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ಲಾಘನೆಗೆ ಪಾತ್ರವಾಗಿದೆ. ಕನ್ನಡ ಭಾಷೆ ಸಂಸ್ಕೃತಿ ಉಳಿಯಬೇಕದಾದರೆ ಇಂತಹ ಕಾರ್ಯಕ್ರಮಗಳ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ವಹಿಸಿದ್ದರು. ಕಮಲಾಬಾಯಿ ಬೇವಿನಕಟ್ಟಿ, ಚುಟುಕು ಕವಿ ವಿ.ಸಿ. ಪಾಟೀಲ್ ಇದ್ದರು.
ಮನತಣಿಸಿದ ಗೀತನಮನ ಗಾಯಕಿಯರಾದ ಪರಿಮಳ ದೇಶಪಾಂಡೆ, ಲಕ್ಷ್ಮೀಕಟ್ಟಿ, ಹೆಚ್.ಭಾರತಿದೇವಿ, ಆರೀಫಾ ಬೇಗಂ ವಗರನಾಳ, ಶಿವಲೀಲಾ ಹಿರೇಮಠ, ಗಾಯಕರಾದ ವಾಸುದೇವ ಉಪ್ಪಳ, ವೈ.ಬಿ. ಚಳ್ಳಮರದ, ಬಸವರಾಜ ಗಸ್ತಿ ಅಗಲಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಭಾವಗೀತೇಗಳನ್ನು ಹಾಡುವುದರ ಮೂಲಕ ಗೀತನಮನ ಅರ್ಪಿಸಿ ಪ್ರೇಕ್ಷಕರ ಮನ ಸೆಳೆದರು. ಕುಮಾರಿ ಗಂಗಮ್ಮ ಪ್ರಾರ್ಥಿಸಿದರು. ಬೀರಪ್ಪ ಶಂಭೋಜಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ತಿಮ್ಮಣ್ಣ ರಾಮತ್ನಾಳ ನಿರೂಪಿಸಿದರು. ಗ್ಯಾನಪ್ಪ ವಂದಿಸಿದರು.
--