ಪ್ರತಿ ಆಶಾ ಕಾರ್ಯಕರ್ತೆಗೆ ರು. 1 ಸಾವಿರ ಪ್ರೋತ್ಸಾಹ ಧನ; ಸ್ವಾಗತ
ರಾಯಚೂರು: ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅವರು ನಿರ್ವಹಿಸುವ ಕೆಲ ಮೂಲ ಚಟುವಟಿಕೆಗಳ ಆಧಾರದ ಮೇಲೆ ಪ್ರತಿ ತಿಂಗಳು ಕನಿಷ್ಠ ರು. 1ಸಾವಿರ ಪ್ರೋತ್ಸಾಹ ಧನ ನಿಗದಿಪಡಿಸಿರುವುದನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸ್ವಾಗತಿಸಿದೆ.
ಚಟುವಟಿಕೆಗಳ ದಾಖಲಾತಿ: ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎನ್.ಎಸ್., ಗ್ರಾಮೀಣ ಸ್ವಾಸ್ಥ್ಯ ಹಾಗೂ ಪೌಷ್ಟಿಕ ದಿನ ಹಾಜರಾಗಿದ್ದಕ್ಕೆ ರು. 200, ಗ್ರಾಮೀಣ ಸ್ವಾಸ್ಥ್ಯ, ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿ ಸಭೆ ನಡೆಸಿದ್ದಕ್ಕೆ ರು. 150, ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ರು. 150, ತಾಯಿ ಮತ್ತು ಮಗುವಿನ ಆರೈಕೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳ ದಾಖಲಾತಿ ನಿರ್ವಹಣೆಗೆ ರು. 500 ನೀಡಲು ಕೇಂದ್ರ ನಿರ್ಧರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದುವರೆಗೂ ಕಾರ್ಯಕರ್ತೆಯರು ತಮ್ಮ ಕೆಲಸಗಳಿಗೆ ರು. 500 ರಿಂದ ರು. 1500 ವರೆಗೆ ಪ್ರೋತ್ಸಾಹಧನ ಪಡೆಯುತ್ತಿದ್ದರು. ಆದರೆ ಅವರ ಕಾರ್ಯಕ್ಷೇತ್ರದಲ್ಲಿ ಹೆರಿಗೆ ಪ್ರಕರಣಗಳು ಹಾಗೂ ನವಜಾತ ಶಿಶುಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಹೀಗೆ ನೀಡುವ ಪ್ರೋತ್ಸಾಹ ಧನದ ಪ್ರಮಾಣ ಸಹ ಕಡಿಮೆಯಾಗುತ್ತಿತ್ತು. ಅದಕ್ಕಾಗಿ ಮಾಸಿಕ ವೇತನ ನಿಗದಿಗೆ ಬೇಡಿಕೆಯಿರಿಸಲಾಗಿತ್ತು.
ಕೊನೆಗೂ ಗೆಲವು: ಕಳೆದ ಆ. 30ರಂದು ಕೇಂದ್ರದ ಆರೋಗ್ಯ ಸಚಿವರಿಗೆ ಆಲ್ ಇಂಡಿಯಾ ಯುಟಿಯುಸಿ ಅಖಿಲ ಭಾರತ ಉಪಾಧ್ಯಕ್ಷ ಕೆ. ರಾಧಾಕೃಷ್ಣ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಆಶಾ ಕಾರ್ಯಕರ್ತೆಯರ ನಾಯಕರ ನಿಯೋಗವು ಮನವಿ ಸಲ್ಲಿಸಿತ್ತು. ಸುದೀರ್ಘ ಹೋರಾಟದ ಫಲವಾಗಿ ಕಾರ್ಯಕರ್ತೆಯರಿಗೆ ಕೊನೆಗೂ ಗೆಲುವು ದೊರೆತಿದೆ ಎಂದು ತಿಳಿಸಿದ್ದಾರೆ.