ಶಂಕಿತ ಡೆಂಘೀಗೆ ಫೂಲಬಾವಿ ಗ್ರಾಮ ತತ್ತರ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಡಿ.30
ಶಂಕಿತ ಡೆಂಘೀ ಮಹಾಮಾರಿಯಿಂದ ಬಳಲುತ್ತಿರುವ ತಾಲೂಕಿನ ಕಾಳಾಪೂರ ಗ್ರಾಪಂ ವ್ಯಾಪ್ತಿಯ ಫೂಲಬಾವಿ ಗ್ರಾಮದಲ್ಲಿ ಹರಿಯುತ್ತಿರುವ ಹಳ್ಳದ ನೀರು ಅಶುಚಿತ್ವಕ್ಕೆ ಕಾರಣವಾಗಿದ್ದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.
ಸೊಳ್ಳೆಗಳ ಉತ್ಪತ್ತಿ: ಫೂಲಬಾವಿ ಗ್ರಾಮದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಗ್ರಾಮವು ಹಳ್ಳದ ಎರಡೂ ದಂಡೆಯ ಮೇಲೆ ಆವೃತವಾಗಿದೆ. ನಾರಾಯಣಪುರ ಬಲದಂಡೆ ನಾಲೆ ಬಂದಾಗಿನಿಂದ ಗ್ರಾಮದ ಹಳ್ಳವು ಸದಾ ನೀರಿನಿಂದ ಭೋರ್ಗಯುತ್ತಿದೆ. ಪರಿಣಾಮ ಹಳ್ಳದಲ್ಲಿ ಜಲಸಸ್ಯಗಳು ಬೆಳೆದಿವೆ. ಕಲ್ಮಷ ನೀರು ಹಳ್ಳದಲ್ಲಿ ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿಯ ಊರಾಗಿ ಮಾರ್ಪಟ್ಟಿದೆ. ಬಸಿನೀರಿನಿಂದ ಶಾಲೆ ಹಾಗೂ ಮನೆಗಳ ಸುತ್ತಮುತ್ತಲಿನಲ್ಲಿ ನೀರಿನಲ್ಲಿ ಸಸ್ಯಗಳು ಬೆಳೆದು ನಿಂತಿವೆ. ಇದರಿಂದ ಕ್ರಿಮಿಕೀಟಗಳು, ವಿಷಜಂತುಗಳ ಹಾವಳಿ ಗ್ರಾಮಸ್ಥರನ್ನು ಸದಾ ಕಾಡುತ್ತಿದೆ.
ಯುವಕ ಸಾವು: ಇತ್ತೀಚಿಗೆ ಹೊಲಸು ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಗ್ರಾಮದಲ್ಲಿ ಸುಮಾರು 30-40 ಜನ ಮಾರಕ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದು, ಗ್ರಾಮದ ಮಧ್ಯಮ್ಮ ಮಾನಯ್ಯ, ಗಂಗಾಧರ ಅಮರಯ್ಯ, ಮಾನಪ್ಪ ದ್ಯಾವಪ್ಪ, ಶಾಂತಮ್ಮ ದುರುಗಪ್ಪ, ಸತ್ಯನಾರಾಯಣ ರೆಡ್ಡಿ, ಹನುಮಪ್ಪ ಸೋಮಪ್ಪ, ಲಕ್ಷ್ಮಮ್ಮ ಅಮರೇಶ ಎಂಬುವರು ಬಳ್ಳಾರಿ ಹಾಗೂ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದು, ಶರಣಬಸವ ಬಸವರಾಜ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಶಂಕಿತ ಡೆಂಘೀಯಿಂದ ಮೃತಪಟ್ಟಿರುತ್ತಾನೆಂದು ಗ್ರಾಮಸ್ಥರು ತಿಳಿಸಿದ್ದಾರೆ.
2013 ಜ. 21 ರಂದು ಗ್ರಾಮವನ್ನು 4ನೇ ಹಂತದ ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆಗೊಂಡಿದ್ದು, ಸುಮಾರು ರು. 56 ಲಕ್ಷ ವೆಚ್ಚದ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿ ಗುತ್ತಿಗೆ ಪಡೆದ ಭೂಸೇನಾ ನಿಗಮ (ಕೆಆರ್‌ಐಡಿಎಲ್) ಎರಡು ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು, ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿ ಅರ್ಧಕ್ಕೆ ನಿಂತಿವೆ. ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕುಡಿವ ನೀರಿಗಾಗಿ ಕಿರುತೊಟ್ಟಿ ನಿರ್ಮಿಸಿದರೂ ನೀರು ಬಾರದೆ ಮಕ್ಕಳು ತೆರೆದ ಬಾವಿ ನೀರು ಕುಡಿಯುವ ದುಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಅಳವಡಿಸಿದ ಕುಡಿಯುವ ನೀರು ಯೋಜನೆ ವಿಫಲಗೊಂಡಿದೆ. ಕಲುಷಿತ ನೀರು ಸೇವನೆ ಮಾಡುವ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಸದಾ ಕಾಡುತ್ತದೆ.
ಸಾಂಕ್ರಾಮಿಕ ಭೀತಿ: ಗ್ರಾಮದ ಕುಡಿಯುವ ನೀರಿಗಾಗಿ ಏಕೈಕ ಸೇದುವ ಬಾವಿ ಆಸರೆಯಾಗಿದ್ದು, ಮೋಟಾರು ಪಂಪ್ ಅಳವಡಿಸಿ ಪೈಪ್‌ಲೈನ್ ಮೂಲಕ ಕಿರು ತೊಟ್ಟಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಬಾವಿಯ ಸುತ್ತಮುತ್ತ ವ್ಯಾಪಕವಾಗಿ ಜಲಸಸ್ಯಗಳು ಬೆಳೆದಿದ್ದು, ಹಳ್ಳದ ಕಲುಷಿತ ನೀರು ಬಾವಿ ಸೇರುತ್ತಿದೆ. ಕಲುಷಿತ ನೀರು ಸೇವನೆ ಮಾಡುವ ಜನತೆ ಸದಾ ಮಲೇರಿಯಾ, ಶಂಕಿತ ಡೆಂಗ್ಯು ಸೇರಿದಂತೆ ಸಾಂಕ್ರಾಮಿ ರೋಗಗಳು ಹರಡುವ ಭೀತಿ ಎದುರಾಗಿದೆ. ಗ್ರಾಮದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಕಾಳಾಪುರ ಗ್ರಾಪಂಗೆ ಫೂಲಬಾವಿ ಗ್ರಾಮದಿಂದ ಆಯ್ಕೆಗೊಂಡ ಸದಸ್ಯರಾದ ಆದಮ್ಮ ಸಂಗಪ್ಪ, ಅಮರೇಗೌಡ, ಮಾನಪ್ಪ, ಭೀಮಣ್ಣ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಗಮನ ಹರಿಸಿಲ್ಲವೆಂದು ಗ್ರಾಮಸ್ಥರ ಆರೋಪವಾಗಿದೆ.
ಕೂಡಲೇ ತಾಲೂಕು ಆಡಳಿತ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿರುವ ಫೂಲಬಾವಿ ಗ್ರಾಮದ ಸ್ವಚ್ಛತೆಗೆ ಮುಂದಾಗಿ ಜನರ ಆರೋಗ್ಯ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
-ಮರೇಶಸ್ವಾಮಿ ಬಲ್ಲಟಗಿ